ರಾಜ್ಯದಲ್ಲಿ ಭ್ರಷ್ಟ ಸರ್ಕಾರ: ಸದಾನಂದ ಗೌಡ ಆರೋಪ

| Published : May 23 2025, 12:10 AM IST

ಸಾರಾಂಶ

ಕರ್ನಾಟಕ ರಾಜ್ಯ ಕಂಡ ಅತ್ಯಂತ ಭ್ರಷ್ಟ ಸರ್ಕಾರ ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕರ್ನಾಟಕ ರಾಜ್ಯ ಕಂಡ ಅತ್ಯಂತ ಭ್ರಷ್ಟ ಸರ್ಕಾರ ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಆರೋಪ ವ್ಯಕ್ತಪಡಿಸಿದ್ದಾರೆ.

ಅವರು ಕುಶಾಲನಗರದಲ್ಲಿ ಬಸವನಹಳ್ಳಿ ಸಮೀಪ ಕುಶಾಲನಗರ ಗೌಡ ಸಮಾಜದ ನೂತನ ಕಟ್ಟಡ ಸಂಕೀರ್ಣಕ್ಕೆ ಭೂಮಿ ಪೂಜೆ ನೆರವೇರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಳೆದ ಎರಡು ವರ್ಷಗಳಿಂದ ಖಜಾನೆ ಲೂಟಿ ಮಾಡುವ ಕಾಯಕದಲ್ಲಿ ಸರ್ಕಾರ ತೊಡಗಿದೆ. ಡಿ ಕೆ ಶಿವಕುಮಾರ್ ನಂತರದಲ್ಲಿ ಗೃಹ ಸಚಿವ ಪರಮೇಶ್ವರ ಕೂಡ ಹಗರಣದಲ್ಲಿ ಸಿಲುಕಿರುವುದು ಗೋಚರಿಸಿದೆ.

ಇಡಿ ಮೂಲಕ ಅವರ ಸಂಸ್ಥೆಗಳಿಗೆ ದಾಳಿ ನಡೆದಿದೆ. ಆಲಿಬಾಬ 40 ಕಳ್ಳರು ಎಂಬಂತೆ ಸಿದ್ದರಾಮಯ್ಯ ಮತ್ತು ಮಂತ್ರಿಮಂಡಲ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಖಜಾನೆಯನ್ನು ಲೂಟಿ ಮಾಡುತ್ತಿದೆ ಎಂದು ಆರೋಪಿಸಿದರು.

ಗೃಹ ಮಂತ್ರಿ ಪರಮೇಶ್ವರ್ ಕೂಡ ಸಹವಾಸ ದೋಷ ಎಂಬಂತೆ ಇದೀಗ ಹಲವು ಸಂಶಯಗಳ ಸುಳಿಯಲ್ಲಿ ಸಿಲುಕಿ ತೊಡಗಿದ್ದಾರೆ ಎಂದರು.

ಇ ಡಿ ಸ್ವತಂತ್ರವಾಗಿ ತನ್ನ ಕರ್ತವ್ಯ ಮಾಡುತ್ತಿದೆ. ಸದ್ಯದಲ್ಲಿ ಸತ್ಯಾಂಶ ಹೊರಬೀಳಲಿದೆ ಎಂದ ಸದಾನಂದ ಗೌಡ ಅವರು ಗೃಹ ಸಚಿವ ಪರಮೇಶ್ವರ್ ಅವರು ಕೆಲವು ಹಗರಣಗಳಲ್ಲಿ ಸಿಕ್ಕಿಹಾಕಿಕೊಂಡಿರುವುದು ಸ್ಪಷ್ಟವಾಗುತ್ತಿದೆ.

ಅಕ್ರಮ ಚಿನ್ನ ಸಾಗಾಣಿಕೆಯಲ್ಲಿ ಆರೋಪಿ ರನ್ಯಾ ನಡುವೆ ಸಂಸ್ಥೆಗಳ ಮೂಲಕ ನಡೆದಿರುವ ವ್ಯವಹಾರ ಸದ್ಯದಲ್ಲಿಯೇ ಕಾನೂನು ಚೌಕಟ್ಟಿನಲ್ಲಿ ವಿಚಾರಣೆಗೆ ಒಳಪಡಲಿದೆ ಎಂದರು.

ಸರ್ಕಾರದ ಎರಡು ವರ್ಷಗಳ ಸಾಧನ ಸಮಾವೇಶದ ಬಗ್ಗೆ ಪ್ರತಿಕ್ರಿಯಿಸಿದ ಸದಾನಂದ ಗೌಡರು ಬೆಂಗಳೂರಿನಲ್ಲಿ ನಡೆಯಬೇಕಾದ ಸಮಾವೇಶವನ್ನು ಹೊರಗಡೆ ಮಾಡಿರುವುದು ನಿಜಕ್ಕೂ ಸರಿಯಲ್ಲ. ಬೆಂಗಳೂರು ಸಂಪೂರ್ಣ ಮುಳುಗಿರುವ ಸಂದರ್ಭ ಸರ್ಕಾರ ಮೋಜು ಮಸ್ತಿ ಮಾಡಿದಂತೆ ಕಾಣುತ್ತಿದೆ.

ಬೆಂಗಳೂರಿನ ನಗರದಲ್ಲಿ ದೋಣಿಯ ಮೂಲಕ ಸಾಗಿ ತಮ್ಮ ಎರಡು ವರ್ಷಗಳ ಸಾಧನೆಯನ್ನು ತಿಳಿಸಬೇಕಾಗಿತ್ತು ಎಂದು ವ್ಯಂಗ್ಯವಾಡಿದ ಸದಾನಂದ ಗೌಡರು ತಮ್ಮ ಸರ್ಕಾರದ ಸಂದರ್ಭ 5,000 ಕೋಟಿ ರು. ಗಳ ವಿಶೇಷ ಅನುದಾನದ ಯೋಜನೆಯ ಮೂಲಕ ಬೆಂಗಳೂರಿನ ಮೂಲಭೂತ ವ್ಯವಸ್ಥೆಗೆ ಮೀಸಲಿರಿಸಿದ ಹಣವನ್ನು ಕೊಳ್ಳೆ ಹೊಡೆದಿರುವುದಾಗಿ ಅವರು ಆರೋಪ ವ್ಯಕ್ತಪಡಿಸಿದರು.

ಪ್ರಸಕ್ತ ಬೆಂಗಳೂರಿನ ನಗರದ 1.5 ಕೋಟಿ ಜನರು ನೀರಿನಲ್ಲಿ ತೇಲಾಡುತ್ತಿರುವ ಸಂದರ್ಭ ಬೆಂಗಳೂರು ಬಿಟ್ಟು ಬೇರೆ ಜಿಲ್ಲೆಯಲ್ಲಿ ಎರಡು ವರ್ಷಗಳ ಸಾಧನ ಸಮಾವೇಶ ಮಾಡಿರುವುದು ಸರಿಯಲ್ಲ ಎಂದರು.