ಅಕ್ರಮಕ್ಕೆ ಸಹಕಾರ ನೀಡಿಲ್ಲವೆಂದು ಭ್ರಷ್ಟಾಚಾರ ಆರೋಪ

| Published : Mar 31 2024, 02:02 AM IST

ಸಾರಾಂಶ

ಅಕ್ರಮ ಕೆಲಸಗಳನ್ನು ಸಹಕರಿಸದ ಕಾರಣ ಮಂಚನಾಯಕನಹಳ್ಳಿ ಗ್ರಾಪಂಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಕೆಲವರು ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ ಎಂದು ಗ್ರಾಪಂ ಸದಸ್ಯ ಪುಷ್ಪರಾಜ್ ತಿರುಗೇಟು ನೀಡಿದರು.

ಕನ್ನಡಪ್ರಭ ವಾರ್ತೆ ರಾಮನಗರ

ಅಕ್ರಮ ಕೆಲಸಗಳನ್ನು ಸಹಕರಿಸದ ಕಾರಣ ಮಂಚನಾಯಕನಹಳ್ಳಿ ಗ್ರಾಪಂಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಕೆಲವರು ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ ಎಂದು ಗ್ರಾಪಂ ಸದಸ್ಯ ಪುಷ್ಪರಾಜ್ ತಿರುಗೇಟು ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಚನಾಯಕನಹಳ್ಳಿ ಗ್ರಾಪಂನಲ್ಲಿ ಭ್ರಷ್ಟಾಚಾರ ನಡೆದಿದ್ದರೆ ಅದನ್ನು ದಾಖಲೆ ಸಮೇತ ಸಾಬೀತು ಪಡಿಸಲಿ. ಕೇವಲ ಪ್ರಚಾರಕ್ಕಾಗಿ ಭ್ರಷ್ಟಾಚಾರದ ಆರೋಪ ಮಾಡುವುದರಲ್ಲಿ ಅರ್ಥವಿಲ್ಲ. ಪಂಚಾಯಿತಿ ಮೇಲೆ ಭ್ರಷ್ಟಾಚಾರ ಆರೋಪ ಮಾಡಿದರೆ ಅದರಲ್ಲಿ ಪಿಡಿಒ ಮಾತ್ರವಲ್ಲದೆ ಅಧ್ಯಕ್ಷರು - ಸದಸ್ಯರೆಲ್ಲರು ಪಾಲುದಾರರಾದಂತೆ. ಹಾಗೊಂದು ವೇಳೆ ಪಿಡಿಒ ಯತೀಶ್ ಚಂದ್ರ ಅಕ್ರಮ ಎಸಗಿದ್ದರೆ ತನಿಖೆ ಎದುರಿಸಿ ಶಿಕ್ಷೆ ಅನುಭವಿಸುತ್ತಾರೆ. ತಪ್ಪಿತಸ್ಥ ಅಲ್ಲದಿದ್ದರೆ ಕರ್ತವ್ಯದಲ್ಲಿ ಮುಂದುವರೆಯುತ್ತಾರೆ ಎಂದು ಹೇಳಿದರು.

ಪಂಚಾಯಿತಿ ವ್ಯಾಪ್ತಿಯ ಕಾರ್ಖಾನೆಗಳ ತೆರಿಗೆ ಹಣವನ್ನು ಭ್ರಷ್ಟಾಚಾರದ ಆರೋಪ ಮಾಡುತ್ತಿರುವ ಗ್ರಾಪಂ ಮಾಜಿ ಅಧ್ಯಕ್ಷ ಶೇಷಗಿರಿಹಳ್ಳಿ ಶಿವಣ್ಣ ಮತ್ತವರ ಬೆಂಬಲಿಗರೇ ದುರ್ಬಳಕೆ ಮಾಡಿಕೊಂಡಿದ್ದಾರೆ. ಈಗ ಪಂಚತಂತ್ರ 2ರಲ್ಲಿ ಆನ್ ಲೈನ್ ಆಗಿರುವ ಕಾರಣ ತೆರಿಗೆ ಹಣ ದುರ್ಬಳಕೆ ಮಾಡಿಕೊಳ್ಳಲು ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು.

2021-22ರಲ್ಲಿ ಪಂಚಾಯಿತಿ ಆದಾಯ 6.50 ಕೋಟಿ ರು.ಗಳಿತ್ತು. ಈಗ ಅದು 23 ಕೋಟಿ ರು.ಗಳಿಗೆ ಏರಿಕೆಯಾಗಿದೆ. ಈ ಹಿಂದೆ 16.80 ಕೋಟಿ ರು.ಗೆ ಮೂಲಸೌಕರ್ಯಕ್ಕೆ ಕ್ರಿಯಾಯೋಜನೆ ರೂಪಿಸಲಾಗಿತ್ತು. 2023-24ರಲ್ಲಿ 23 ಕೋಟಿಗಳ ಕ್ರಿಯಾಯೋಜನೆ ರೂಪಿಸಿದ್ದೇವೆ. ತೆರಿಗೆ ಹಣ ಎಲ್ಲಿಯೂ ಪೋಲಾಗುತ್ತಿಲ್ಲ ಎಂದರು.

ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಶುದ್ದು ಕುಡಿಯುವ ನೀರಿನ ಘಟಕ, ಅಂಗನವಾಡಿಗಳಲ್ಲಿ ಸ್ಮಾರ್ಟ್ ಕ್ಲಾಸ್ ಮಾಡಿದ್ದೇವೆ. ಸರ್ಕಾರಿ ಶಾಲಾ ಕಟ್ಟಡಗಳನ್ನು ನವೀಕರಣಗೊಳಿಸಿದ್ದೇವೆ. 100 ಫಲಾನುಭವಿಗಳನ್ನು ಆಯ್ಕೆ ಮಾಡಿ ಪಂಚಾಯಿತಿ ನಿಧಿಯಿಂದ 2.50 ಲಕ್ಷ ಅನುದಾನ ನೀಡುತ್ತಿದ್ದೇವೆ. ಇಷ್ಟೆಲ್ಲ ಅಭಿವೃದ್ಧಿ ಕಾರ್ಯಗಳು ವಿರೋಧಿಗಳ ಕಣ್ಣಿಗೆ ಕಾಣುವುದೇ ಇಲ್ಲ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಶಿವಣ್ಣ ವಿರುದ್ಧ ಪುಷ್ಪರಾಜ್ ವಾಗ್ದಾಳಿ ನಡೆಸಿದರು.

ಗ್ರಾಪಂ ಸದಸ್ಯ ಸತೀಶ್ ಮಾತನಾಡಿ, ಪಂಚಾಯಿತಿ ಮೇಲೆ ಭ್ರಷ್ಟಾಚಾರದ ಆರೋಪ ಮಾಡುತ್ತಿರುವ ಶಿವಣ್ಣ ಅಧ್ಯಕ್ಷರಾಗಿದ್ದವರು, ವೆಂಕಟೇಶ್ ಸದಸ್ಯೆಯಾಗಿದ್ದ ಸುನಂದಾರವರ ಪತಿಯಾಗಿದ್ದಾರೆ. ಇವರು ಮಾಡಿದ ಅಕ್ರಮ ಲೇಔಟ್ ಗಳಿಂದ ನೂರಾರು ಬಡಜನರು ಹಣ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಶೇಷಗರಿರಿಹಳ್ಳಿ ಸರ್ವೆ ನಂಬರ್ 60-1 ಮತ್ತು 60- 2ರಲ್ಲಿ ಅಕ್ರಮವಾಗಿ ಸೆರಾಮಿಕ್ ನಡೆಸುತ್ತಿದ್ದಾರೆ. ವಸತಿ ಪ್ರದೇಶವಾಗಿರುವ ಕಾರಣ ಕೈಗಾರಿಕೆ ನಡೆಸುತ್ತಿದ್ದಾರೆಂದು ನಿವಾಸಿಗಳು ದೂರು ನೀಡಿದ್ದಾರೆ. ಅಲ್ಲದೆ, ತಾಳೆಗುಪ್ಪೆ ಸರ್ವೆ ನಂಬರ್ ನಲ್ಲಿ ಲೇ ಔಟ್ ಮಾಡಿರುವುದು ಅಕ್ರಮವೆಂದು ಸಾಬೀತಾಗಿದೆ. ಈ ರೀತಿ ಜನ ಸಾಮಾನ್ಯರಿಗೆ ಮೋಸ ಮಾಡಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಗ್ರಾಪಂ ಸದಸ್ಯ ರವಿಕುಮಾರ್ ಮಾತನಾಡಿ, ಪಂಚಾಯಿತಿಯಲ್ಲಿ ಕಾಂಗ್ರೆಸ್ ಬೆಂಬಲಿತರೇ ಅಧ್ಯಕ್ಷರಾಗಿದ್ದಾರೆ. ಪಂಚಾಯಿತಿಯಲ್ಲಿ ಭ್ರಷ್ಟಾಚಾರ ನಡೆದಿದ್ದರೆ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿ ಕ್ರಮ ವಹಿಸಲಿಲ್ಲ ಏಕೆ. ಆ ಭ್ರಷ್ಟಾಚಾರದಲ್ಲಿ ಅಧ್ಯಕ್ಷರು ಪಾಲುದಾರರಾಗಿದ್ದಾರೆಯೇ ಎಂದು ಪ್ರಶ್ನೆ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಗ್ರಾಪಂ ಸದಸ್ಯರಾದ ನಾಗೇಶ್ , ರವಿಕುಮಾರ್ ,ಷಂಕು, ಕಾಳಪ್ಪ, ಮುಖಂಡರಾದ ಶೇಷಪ್ಪ, ಆನಂದ್ ಇತರರಿದ್ದರು.