ನಿಂತಿದ್ದ ಕಾರಿಗೆ ಟ್ಯಾಂಕರ್‌ ಡಿಕ್ಕಿ: ಅಳಿಯ, ಮಾವ ಸಾವು

| Published : Mar 31 2024, 02:02 AM IST

ಸಾರಾಂಶ

ಚಕ್ರ ಪಂಚರ್‌ ಆಗಿ ರಸ್ತೆ ಮಧ್ಯೆ ನಿಂತಿದ್ದ ಕಾರಿಗೆ ಹಿಂಬದಿಯಿಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು ಮತ್ತೊಬ್ಬರು ಗಾಯಗೊಂಡಿರುವ ಘಟನೆ ಚನ್ನರಾಯಪಟ್ಟಣದ ಬೈಪಾಸ್‌ನ ಶೆಟ್ಟಿಹಳ್ಳಿ ಬಳಿ ಶನಿವಾರ ನಡೆದಿದೆ.

ಚನ್ನರಾಯಪಟ್ಟಣದ ಬೈಪಾಸ್‌ನ ಶೆಟ್ಟಿಹಳ್ಳಿ ಬಳಿ ಘಟನೆ । ಚಕ್ರ ಪಂಚರ್‌ ಆಗಿ ನಿಲುಗಡೆಯಾಗಿದ್ದ ಕಾರು

ಕನ್ನಡಪ್ರಭ ವಾರ್ತೆ ಹಾಸನ

ಚಕ್ರ ಪಂಚರ್‌ ಆಗಿ ರಸ್ತೆ ಮಧ್ಯೆ ನಿಂತಿದ್ದ ಕಾರಿಗೆ ಹಿಂಬದಿಯಿಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು ಮತ್ತೊಬ್ಬರು ಗಾಯಗೊಂಡಿರುವ ಘಟನೆ ಚನ್ನರಾಯಪಟ್ಟಣದ ಬೈಪಾಸ್‌ನ ಶೆಟ್ಟಿಹಳ್ಳಿ ಬಳಿ ಶನಿವಾರ ನಡೆದಿದೆ.

ಅರಸೀಕೆರೆ ತಾಲೂಕಿನ ನಾಗೇನಹಳ್ಳಿ ಗ್ರಾಮದ ಮಧು (35), ಬೇಲೂರು ತಾಲೂಕಿನ ದೇವಿಹಳ್ಳಿ ಗ್ರಾಮದ ಜವರಯ್ಯ (65) ಮೃತ ದುರ್ದೈವಿಗಳು. ತೀವ್ರವಾಗಿ ಗಾಯಗೊಂಡಿದ್ದ ಜವರಯ್ಯ ಅವರಿಗೆ ಚನ್ನರಾಯಪಟ್ಟಣ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಕರೆತರುತ್ತಿದ್ದ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಮಧು ಪತ್ನಿ ಗೀತಾ ಚನ್ನರಾಯಪಟ್ಟಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ನಂತರ ಟ್ಯಾಂಕರ್ ನಿಲ್ಲಿಸದೆ ಚಾಲಕ ಪರಾರಿ ಆಗಿದ್ದು, ಡಿಕ್ಕಿ ರಭಸಕ್ಕೆ ಮಧು ದೇಹ ಛಿದ್ರ ಛಿದ್ರವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಏನಿದು ಘಟನೆ

ಮಧು ಆಟೋಮೊಬೈಲ್ ಶಾಪ್ ಇಟ್ಟುಕೊಂಡಿದ್ದು ಬೆಂಗಳೂರಿನಿಂದ ಅಂಗಡಿಗೆ ವಸ್ತುಗಳನ್ನು ಖರೀದಿ ಮಾಡಿಕೊಂಡು ತಮ್ಮ ಟಾಟಾ ಇಂಡಿಕಾ ಕಾರಿನಲ್ಲಿ ಮಾವ ಜವರಯ್ಯ, ಪತ್ನಿ ಗೀತಾ ಜೊತೆ ಗ್ರಾಮಕ್ಕೆ ವಾಪಾಸ್ಸಾಗುತ್ತಿದ್ದರು. ಶೆಟ್ಟಿಹಳ್ಳಿ ಬೈಪಾಸ್ ಬಳಿ ಕಾರಿನ ಟಯರ್ ಪಂಕ್ಚರ್ ಆಗಿದ್ದು, ರಸ್ತೆಯಲ್ಲಿಯೇ ಕಾರು ನಿಲ್ಲಿಸಿಕೊಂಡು ಟೈಯರ್ ಬದಲಾವಣೆ ಮಾಡುತ್ತಿದ್ದರು. ಈ ವೇಳೆ ಬೆಂಗಳೂರು ಕಡೆಯಿಂದ ವೇಗವಾಗಿ ಬಂದು ಗ್ಯಾಸ್ ಟ್ಯಾಂಕರ್ ಡಿಕ್ಕಿ ಹೊಡೆದಿದ್ದು ಮಧು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ನಜ್ಜುಗುಜ್ಜಾಗಿರುವ ಕಾರು.