ಸಾರಾಂಶ
ಧಾರವಾಡ:
ಇಲ್ಲಿಯ ಹಳಿಯಾಳ ನಾಕಾ ಬಳಿಯ ಪ್ರತಿಷ್ಠಿತ ಕರ್ನಾಟಕ ಉತ್ತರ ಸಭಾಪ್ರಾಂತ (ಡಯಾಸಿಸ್) ಕಚೇರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಸಭಾಪ್ರಾಂತದ ಬೇರೆ ಬೇರೆ ಜಿಲ್ಲೆಗಳ ಸದಸ್ಯರು ಮಂಗಳವಾರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಹುಬ್ಬಳ್ಳಿ-ಧಾರವಾಡ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಸಭಾಪ್ರಾಂತದ ಪ್ರತಿಷ್ಠಿತ ಶಾಲೆ-ಕಾಲೇಜುಗಳು ಕೂಡ ಇವೆ. ಇದೀಗ ಈ ಸಭಾಪ್ರಾಂತ ಜವಾಬ್ದಾರಿ ನೋಡಿಕೊಳ್ಳುತ್ತಿರುವ ಬಿಷಪ್ ಮೇಲೆ ಅಕ್ರಮಗಳ ಆರೋಪ ಎದುರಾಗಿದ್ದು, ಪ್ರಾಂತದ ನೂರಾರು ಜನರು ಧಾರವಾಡದ ಪ್ರಧಾನ ಕಚೇರಿಗೆ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಹಿನ್ನೆಲೆಯಲ್ಲಿ ಸಭಾಪ್ರಾಂತದ ಕಚೇರಿ ಗೇಟ್ ಹಾಕಿ ಪ್ರತಿಭಟನಾಕಾರರನ್ನು ಹೊರಗೆ ನಿಲ್ಲಿಸಲಾಗಿತ್ತು. ನಂತರ ಪೊಲೀಸರ ಮಧ್ಯಸ್ಥಿಕೆಯಲ್ಲಿ ಮನವಿ ಸಲ್ಲಿಸಲು ಅವಕಾಶ ಕಲ್ಪಿಸಲಾಯಿತು. ಡಯಾಸಿಸ್ ಬಿಷಪ್ ಮಾರ್ಟಿನ್ ಬೋರ್ಗವಿ ಅವರು ಉತ್ತರ ಕರ್ನಾಟಕ ಡಯಾಸಿಸ್ ಚರ್ಚ್ ಕಚೇರಿಯ ಕಾರ್ಯದರ್ಶಿ ವಿಜಯಕುಮಾರ್ ದಂಡಿನ್, ಖಜಾಂಚಿ ಸತ್ಯಬಾಬು, ಸಹ ಖಜಾಂಚಿ ಅಮೃತ ವಿಜಯ ಕನಕರಾಜ್ ಅವರೊಂದಿಗೆ ಸೇರಿ ಅಕ್ರಮ ನಡೆಸಿದ್ದಾರೆ ಎಂದು ಆರೋಪಿಸಲಾಯಿತು.ಧಾರವಾಡ, ಶಿವಮೊಗ್ಗ, ಬಳ್ಳಾರಿ, ವಿಜಯನಗರ, ಕೊಪ್ಪಳ, ಗದಗ, ಬಾಗಲಕೋಟೆ, ವಿಜಯಪುರ, ಹಾವೇರಿ ಜಿಲ್ಲೆಗಳ ವ್ಯಾಪ್ತಿಯಲ್ಲಿನ 94 ಚರ್ಚ್‌ಗಳಲ್ಲಿ ಸಾಕಷ್ಟು ಅಕ್ರಮ ನಡೆಯುತ್ತಿದೆ. ಚರ್ಚ್‌ಗಳ ಆಸ್ತಿಗಳನ್ನು ಮಾರಾಟ ಮಾಡಿಕೊಂಡು ದುಡ್ಡು ಮಾಡಲಾಗುತ್ತಿದೆ. ಇದನ್ನು ಪ್ರಶ್ನಿಸಿದವರನ್ನು ಸಮಾಜದಿಂದ ವಜಾ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನ್ಯಾಯವಾದಿ ಹಾಗೂ ಸಮಾಜದ ಮುಖಂಡ ವಿನೋದ ಕುಮಾರ್, ಬಿಷಪ್ ಮಾಡಿರುವ ಅಕ್ರಮಗಳ ವಿರುದ್ಧ ಕೋರ್ಟ್‌ಗೆ ಹೋದವರ ಸದಸ್ಯತ್ವ ಅಮಾನತು ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಪ್ರತಿ ವಾರ ನಮ್ಮ ಚರ್ಚ್‌ಗಳ ಸಭೆಯಿಂದ ಸಂಗ್ರಹವಾಗುವ ಹಣದಿಂದ ಈ ಡಯಾಸಿಸ್ ನಡೆಯುತ್ತಿದೆ. ನಾವು ಹತ್ತು ಜನ ಈ ಡಯಾಸಿಸ್‌ಗೆ ಆಯ್ಕೆಯಾದರೂ ನಮ್ಮನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುತ್ತಿಲ್ಲ. ಬಿಷಪ್ ಮತ್ತು ಹಿಂಬಾಲಕರು ತಮ್ಮದೇ ಹತ್ತು ಜನರನ್ನು ನೇಮಿಸಿದ್ದಾರೆ. ಅಕ್ಟೋಬರ್‌ನಲ್ಲಿ ಕೌನ್ಸಿಲ್ ಚುನಾವಣೆ ನಡೆಯುತ್ತಿದೆ. ಹೀಗಾಗಿ ತಮಗೆ ಬೇಕಾದವರನ್ನು ಹಿಂದೆ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಇದನ್ನು ವಿರೋಧಿಸಿ ಇಂದು ನಾವು ಒಂಭತ್ತು ಜಿಲ್ಲೆಗಳಿಂದ ಬಂದಿದ್ದೇವೆ ಎಂದು ಮಾಧ್ಯಮಗಳ ಎದುರು ತಮ್ಮ ಅಳಲು ತೋಡಿಕೊಂಡರು.ಈ ಡಯಾಸಿಸ್ ವ್ಯಾಪ್ತಿಯಲ್ಲಿ ಬರುವ ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವಲ್ಲಿ ಅಕ್ರಮ ನಡೆಯುತ್ತಿವೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಈ ಬಗ್ಗೆ ಪ್ರಶ್ನಿಸಿದರೆ ಸದಸ್ಯತ್ವವನ್ನು ರದ್ದುಗೊಳಿಸಲಾಗುತ್ತದೆ. ಬಿಷಪ್ ಅವರನ್ನು ಪ್ರಶ್ನಿಸಿದರೆ ಅವರು ಸರಿಯಾದ ಉತ್ತರ ನೀಡುತ್ತಿಲ್ಲ ಎಂದು ದೂರಿದರು. ನಂತರ ಪೊಲೀಸರ ಮಧ್ಯಸ್ಥಿಕೆಯಿಂದ ಒಳಗಡೆ ಬಂದ ಬಳಿಕ ಬಿಷಪ್ ಜೊತೆಗೆ ಪ್ರತಿ ಜಿಲ್ಲೆಯಿಂದ ಬಂದ ಪ್ರಮುಖರು ಮಾತುಕಡೆ ನಡೆಸಿದ ಹಿನ್ನೆಲೆಯಲ್ಲಿ ಸದ್ಯಕ್ಕೆ ಪ್ರತಿಭಟನೆ ಶಾಂತವಾಯಿತು.
ಸಭಾಪ್ರಾಂತಕ್ಕೆ ಮಸಿಬಳಿಯುವ ಪ್ರಯತ್ನಸಭಾಪ್ರಾಂತದ ಕಚೇರಿಗೆ ಬಂದು ಯಾವುದೇ ಅನುಮತಿಯಿಲ್ಲದೆ ಪ್ರತಿಭಟನೆ ಮಾಡಿದ್ದು ಖಂಡನೀಯ. ಸ್ವಾರ್ಥ ಹಿತಕ್ಕಾಗಿ ಸಭೆಗಳ ಮುಗ್ಧ ಜನರನ್ನು ದಾರಿ ತಪ್ಪಿಸಿ ಪ್ರತಿಭಟನೆಗೆ ಕರೆತಂದಿದ್ದಾರೆ. ಅರ್ನೆಸ್ಟ್ ಪೀಟರ್, ಡಾ. ಸಂಜಯ್ ದೇವದಾರ್, ರವೀಂದ್ರ ಧವಳೇ ಹಾಗೂ ವಿನೋದ್ ಬಿ. ಅಧಿಕಾರದ ಆಸೆಗಾಗಿ ಜನರನ್ನು ಎತ್ತಿಕಟ್ಟಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅವರ ಸಮಸ್ಯೆಗಳನ್ನು ಕುಳಿತು ಬಗೆಹರಿಸಲು ಸಿದ್ಧರಿದ್ದರೂ ದರ್ಪ ತೋರಿದ್ದಾರೆ. ಅವರ ಬೇಡಿಕೆಗಳು ನಮ್ಮ ಸಭಾಪ್ರಾಂತದ ಘಟನಾವಳಿಗಳಿಗೆ ಮೀರಿದ್ದರಿಂದ ರಾತ್ರೋರಾತ್ರಿ ಒಕ್ಕೂಟ ಮಾಡಿ ಸಭಾಪ್ರಾಂತಕ್ಕೆ ಮಸಿಬಳಿಯುವ ಪ್ರಯತ್ನ ಮಾಡಿದ್ದಾರೆ ಎಂದು ಕರ್ನಾಟಕ ಉತ್ತರ ಸಭಾಪ್ರಾಂತದ ಕಾರ್ಯದರ್ಶಿ ವಿಜಯಕುಮಾರ್ ವಿ. ದಂಡಿನ್ ಹೇಳಿದರು.