ಸಾರಾಂಶ
ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಕೆ.ಎಂ. ಶಿವಲಿಂಗೇಗೌಡರ ವಿರುದ್ಧ ಭ್ರಷ್ಟಾಚಾರ, ಅಧಿಕಾರ ದುರ್ಬಳಕೆ ಮತ್ತು ಸಾರ್ವಜನಿಕ ಹಿತದ ವಿರುದ್ಧ ನಡೆದುಕೊಂಡಿದ್ದಾರೆ ಎಂದು ಜೆಡಿಎಸ್‌ನ ಮುಖಂಡ ಎನ್.ಆರ್. ಸಂತೋಷ್ ಆರೋಪಿಸಿದ್ದಾರೆ. ಬಾಣಾವರ ಗ್ರಾಮಪಂಚಾಯಿತಿಯಲ್ಲಿ ಕೇಂದ್ರದ ಪ್ರಧಾನಮಂತ್ರಿ ಆವಾಸ್ ಯೋಜನೆಡಿಯಲ್ಲಿ ಗಂಭೀರ ಅವ್ಯವಹಾರ ನಡೆದಿದೆ. ನಕಲಿ ಪಟ್ಟಿ ಆಧಾರದಲ್ಲಿ 90 ಜನರಿಗೆ ತಲಾ ₹30,000 ರಂತೆ ₹27 ಲಕ್ಷ ಹಣ ಬಿಡುಗಡೆಯಾಗಿದೆ, ಇದರಿಂದ ಒಟ್ಟು ₹1.5 ಕೋಟಿ ತನಕ ಹಣ ದುರ್ಬಳಕೆಯಾಗಿರುವ ಸಾಧ್ಯತೆಯಿದೆ ಎಂದು ಅರೋಪಿಸಿದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಕೆ.ಎಂ. ಶಿವಲಿಂಗೇಗೌಡರ ವಿರುದ್ಧ ಭ್ರಷ್ಟಾಚಾರ, ಅಧಿಕಾರ ದುರ್ಬಳಕೆ ಮತ್ತು ಸಾರ್ವಜನಿಕ ಹಿತದ ವಿರುದ್ಧ ನಡೆದುಕೊಂಡಿದ್ದಾರೆ ಎಂದು ಜೆಡಿಎಸ್‌ನ ಮುಖಂಡ ಎನ್.ಆರ್. ಸಂತೋಷ್ ಆರೋಪಿಸಿದ್ದಾರೆ.ತಮ್ಮ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಭಾಪತಿ ರುದ್ರಪ್ಪ ಲಮಾಣಿ ವಿರುದ್ಧ ಶಾಸಕರ ದ್ವೇಷಭರಿತ ಮಾತು, ಹಿಂದುಳಿದ ವರ್ಗದ ನಾಯಕತ್ವವನ್ನು ಲಘುವಾಗಿ ಕಾಣುತ್ತಿರುವುದನ್ನು ನೋಡಬಹುದು. ಇಂಥವರು ನೈತಿಕವಾಗಿ ಜನಪ್ರತಿನಿಧಿಯಾಗಲು ಲಾಯಕ್ಕಲ್ಲ. ಸಮಾಜದಲ್ಲಿ ಎಲ್ಲ ವರ್ಗಗಳ ಪ್ರತಿನಿಧಿಗಳನ್ನು ಗೌರವದಿಂದ ಕಾಣುವ ಬೌದ್ಧಿಕ ಮಟ್ಟ ಇರಬೇಕಾಗಿದೆ ಎಂದು ವಾಗ್ದಾಳಿ ನಡೆಸಿದರು.ಬಾಣಾವರ ಗ್ರಾಮಪಂಚಾಯಿತಿಯಲ್ಲಿ ಕೇಂದ್ರದ ಪ್ರಧಾನಮಂತ್ರಿ ಆವಾಸ್ ಯೋಜನೆಡಿಯಲ್ಲಿ ಗಂಭೀರ ಅವ್ಯವಹಾರ ನಡೆದಿದೆ. ನಕಲಿ ಪಟ್ಟಿ ಆಧಾರದಲ್ಲಿ 90 ಜನರಿಗೆ ತಲಾ ₹30,000 ರಂತೆ ₹27 ಲಕ್ಷ ಹಣ ಬಿಡುಗಡೆಯಾಗಿದೆ, ಇದರಿಂದ ಒಟ್ಟು ₹1.5 ಕೋಟಿ ತನಕ ಹಣ ದುರ್ಬಳಕೆಯಾಗಿರುವ ಸಾಧ್ಯತೆಯಿದೆ ಎಂದು ಅರೋಪಿಸಿದರು.ಬಡ ಕುಟುಂಬಗಳಿಗೆ ಸೂರಿನ ವ್ಯವಸ್ಥೆ ಮಾಡಬೇಕಾದ ಯೋಜನೆ ಹಿತಾಸಕ್ತಿದಾರರ ಪಾಲಾಗುತ್ತಿದೆ. ನಕಲಿ ಪಟ್ಟಿ ಸಿದ್ಧಪಡಿಸಿ ಸರ್ಕಾರದ ಹಣ ಲೋಪವಾಗುತ್ತಿದೆ. ಈ ಅನ್ಯಾಯದ ವಿರುದ್ಧ ನಾವು ತೀವ್ರವಾಗಿ ಹೋರಾಡುತ್ತೇವೆ ಎಂದು ತಿಳಿಸಿದರು. ಯೋಜನೆಗಳಿಗೆ ಸಂಬಂಧಿಸಿದ ಅಧಿಕಾರಿಗಳು ಶಾಸಕರ ಅಣತಿಯಲ್ಲಿ ಅಧಿಕಾರ ದುರ್ಬಳಕ್ಕೆ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಿದರು. ಶಾಸಕರ ಅನುಮತಿಯಿಲ್ಲದೆ ಈ ಮಟ್ಟದ ವ್ಯವಸ್ಥಿತ ಭ್ರಷ್ಟಾಚಾರ ನಡೆಯಲು ಸಾಧ್ಯವೇ ಇಲ್ಲ. ಅವರ ಬೆಂಬಲ ಇಲ್ಲದೆ ಅಧಿಕಾರಿಗಳು ಈ ರೀತಿಯ ಹಣಕಾಸು ಹಗರಣಕ್ಕೆ ಕೈಹಾಕಲು ಧೈರ್ಯ ಮಾಡಲಾರರು ಎಂದು ಹೇಳಿದರು.ಶಿವಲಿಂಗೇಗೌಡ ತಾವು ನಂಬಿರುವ ಜೇನುಕಲ್ ಸಿದ್ದೇಶ್ವರ ಸ್ವಾಮಿಯ ಸಮ್ಮುಖದಲ್ಲಿ ತಪ್ಪೊಪ್ಪಿಕೊಂಡು, ಶಾಸಕರ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸವಾಲು ಹಾಕಿದರು. ಅವರು ನೈತಿಕವಾಗಿ ಶುದ್ಧರಾಗಿದ್ದರೆ, ಸಾರ್ವಜನಿಕವಾಗಿ ತಪ್ಪೊಪ್ಪಿಕೊಂಡು ರಾಜೀನಾಮೆ ನೀಡಬೇಕಿತ್ತು. ಅವರು ದೋಷರಲ್ಲದಿರಬಹುದಾದರೂ, ಅವರನ್ನು ನಂಬಿ ಭ್ರಷ್ಟಾಚಾರ ನಡೆಸುತ್ತಿರುವವರನ್ನು ತಡೆಗಟ್ಟಿಲ್ಲ ಎಂದು ಹೇಳಿದರು.ಧನ, ಅಧಿಕಾರ ಮತ್ತು ಗರ್ವದಿಂದಾಗಿ ಜನ ಸೇವೆಗೆ ಹಾನಿ ಆಗುತ್ತಿದೆ, ಈ ರಾಜಕೀಯ ಅಹಂಕಾರ, ಜನತೆಯ ತಾಳ್ಮೆಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಕಳೆದ ಚುನಾವಣೆಯ ಕೊನೆಯ ಎರಡು ದಿನ ನಾವೇ ವೈಯಕ್ತಿಕವಾಗಿ ಎಸಗಿದ ತಪ್ಪು, ನಿರ್ಲಕ್ಷ್ಯದಿಂದ ಚುನಾವಣೆ ಗೆಲುವಿನ ಸಮೀಪ ಹೋಗಿ ಸೋತಿದ್ದೇನೆ. ಇದು ಮುಂದೆ ನಡೆಯುವುದಿಲ್ಲ ಎಂದು ಎಚ್ಚರಿಸಿದರು.ಗೌರಿ ಹಬ್ಬದ ನಂತರ ಜೆಡಿಎಸ್ ಪಕ್ಷದ ಹಾದಿಯಲ್ಲಿ ಶಿಸ್ತುಮೂಲಕ ಹೋರಾಟ ಆರಂಭವಾಗಲಿದೆ. ಕ್ಷೇತ್ರದ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ಬಯಲುಗೊಳಿಸಲು ಸಂಘಟಿತ ಚಳವಳಿ ನಡೆಯಲಿದೆ. ಕೋಟಿಗಟ್ಟಲೆ ಹಣ ದುರ್ಬಳಕೆಯಾಗಿರುವುದನ್ನು ದೃಢಪಡಿಸುವ ದಾಖಲೆಗಳು ನಮ್ಮ ಬಳಿಯಿವೆ. ಭಾಗಿಯಾಗಿರುವ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಬೇಕು. ಇಲ್ಲವಾದರೆ ತಾಲೂಕು ಪಂಚಾಯಿತಿ ಮುಂದೆ ಪ್ರತಿಭಟನೆ ಮತ್ತು ಸತ್ಯಾಗ್ರಹ ನಡೆಯಲಿದೆ ಎಂದು ಎಚ್ಚರಿಸಿದರು.
ಬಡವನಿಗೆ ಸೂರಿಲ್ಲ, ಆದರೆ ಶಾಸಕರ ಬೆಂಬಲಿತರು ನಕಲಿ ದಾಖಲೆ ತಯಾರಿಸಿ ಬಡವನ ಹಕ್ಕಿನ ಹಣ ಲೂಟಿ ಮಾಡುತ್ತಿದ್ದಾರೆ. ಬಡವರ ಹಕ್ಕು ತಲುಪುವವರೆಗೆ ನಮ್ಮ ಹೋರಾಟ ನಿಲ್ಲದು ಎಂದು ಘೋಷಿಸಿದರು.ಕೆಲವು ಅಧಿಕಾರಿಗಳು ಒಂದುಜಾಗದಲ್ಲಿ 8 ವರ್ಷಕ್ಕಿಂತ ಹೆಚ್ಚು ಕಾಲ ಉಳಿದಿರುವುದರಿಂದ, ಅವರ ನಡೆ ಶಾಸಕರ ಖಾಸಗಿ ಖಜಾನೆ ತುಂಬಿಸುವಂತಿದೆ ಎಂಬ ಅನುಮಾನ ಜನರಲ್ಲಿ ಮೂಡುತ್ತಿದೆ. ಅಧಿಕಾರಿಗಳ ವರ್ಗಾವಣೆ ಅಗತ್ಯವಾಗಿದೆ ಎಂದು ಸಂತೋಷ್ ಒತ್ತಾಯಿಸಿದರು.