ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಗುಂಡ್ಲುಪೇಟೆ ವಾಣಿಜ್ಯ ತೆರಿಗೆ ಚೆಕ್‌ಪೋಸ್ಟ್‌ನಲ್ಲಿ ಹಾದು ಹೋಗುವ ವಾಹನಗಳಿಂದ ಲಂಚ ಪಡೆದ ವಾಣಿಜ್ಯ ತೆರಿಗೆ ಆಧಿಕಾರಿ ಮತ್ತು ಗ್ರೂಪ್ ‘ಡಿ’ ನೌಕರನಿಗೆ ವಿಶೇಷ ನ್ಯಾಯಾಲಯ ವಿಧಿಸಿದ್ದ ನಾಲ್ಕು ವರ್ಷಗಳ ಶಿಕ್ಷೆ ಎತ್ತಿ ಹಿಡಿದಿರುವ ಹೈಕೋರ್ಟ್, ಭ್ರಷ್ಟಾಚಾರ ಪ್ರಕರಣದಲ್ಲಿ ಸಾಕ್ಷಿಗಳು ಪ್ರತಿಕೂಲ ಹೇಳಿಕೆ ನೀಡಿದ್ದರೂ, ಸಾಂದರ್ಭಿಕ ಸಾಕ್ಷ್ಯಗಳ ಆಧಾರದಲ್ಲಿ ರುಜುವಾತು ಮಾಡಬಹುದು ಎಂದು ಅಭಿಪ್ರಾಯಪಟ್ಟಿದೆ.ವಿಶೇಷ ನ್ಯಾಯಾಲಯದ ವಿಧಿಸಿದ್ದ ಶಿಕ್ಷೆ ಪ್ರಶ್ನಿಸಿ ಮೊದಲ ಆರೋಪಿ ವಾಣಿಜ್ಯ ತೆರಿಗೆ ಅಧಿಕಾರಿಯಾಗಿ ನಿವೃತ್ತರಾಗಿದ್ದ ಸಿ.ಪಿ.ಯೋಗೇಶ್ವರ್, ನಾಲ್ಕನೇ ಆರೋಪಿ ಗ್ರೂಪ್ ‘ಡಿ’ ನೌಕರ ಮಹದೇವು ಎಂಬುವರು ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಪ್ರಕರಣದಲ್ಲಿ ಮೂರನೇ ಆರೋಪಿ ದ್ವಿತೀಯ ದರ್ಜೆ ಸಹಾಯಕ ಕೆ.ಎಂ.ಶಿವಕುಮಾರ್ ಅವರ ವಿರುದ್ಧದ ಆರೋಪ ನಿರೂಪಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ತಿಳಿಸಿದ ನ್ಯಾಯಪೀಠ, ಅವರನ್ನು ಆರೋಪ ಮುಕ್ತರನ್ನಾಗಿಸಿ ಘೋಷಿಸಿದೆ.ಅಲ್ಲದೆ, ಮೊದಲನೇ ಆರೋಪಿ ವಾಣಿಜ್ಯ ತೆರಿಗೆ ಅಧಿಕಾರಿ ಯೋಗೇಶ್ ತನ್ನ ಬಳಿ ₹3,720 ಇರುವುದಾಗಿ ರಿಜಿಸ್ಟ್ರಾರ್‌ನಲ್ಲಿ ಘೋಷಿಸಿದ್ದಾರೆ. ಆದರೆ, ವಿಶ್ರಾಂತಿ ಕೊಠಡಿಯಲ್ಲಿ ₹41,510 ಪತ್ತೆಯಾಗಿವೆ. ನಾಲ್ಕನೇ ಆರೋಪಿ ಗ್ರೂಪ್ ಡಿ ನೌಕರ ಮಹದೇವು ತನ್ನ ಬಳಿ ಕೇವಲ ₹800 ಮಾತ್ರ ಇತ್ತು ಎಂಬುದಾಗಿ ಘೋಷಿಸಿದ್ದು, ದಾಳಿ ಸಂದರ್ಭದಲ್ಲಿ ₹ 3,500 ಹೊಂದಿದ್ದ. ಈ ಹೆಚ್ಚುವರಿ ಹಣ ಎಲ್ಲಿಂದ ಬಂತು ಎಂಬುದಕ್ಕೆ ಸಂಬಂಧಿಸಿ ಇಬ್ಬರೂ ಆರೋಪಿಗಳು ಸ್ಪಷ್ಟನೆ ನೀಡಿಲ್ಲ. ಹೀಗಾಗಿ ಹೆಚ್ಚುವರಿ ಹಣಕ್ಕೆ ಹೊಣೆಗಾರರಾಗುತ್ತಾರೆ ಎಂದು ತಿಳಿಸಿದ ಪೀಠ ಶಿಕ್ಷೆಯನ್ನು ಎತ್ತಿಹಿಡಿದಿದೆ.
ಜತೆಗೆ, ಪ್ರಕರಣದಲ್ಲಿ ಸಾಕ್ಷಿಗಳಾಗಿರುವ ಲಾರಿ ಚಾಲಕರು ಪ್ರಾಸಿಕ್ಯೂಷನ್‌ಗೆ ಪ್ರತಿಕೂಲವಾಗಿ ಹೇಳಿಕೆ ನೀಡಿದ್ದರೂ, ಲಂಚಕ್ಕೆ ಬೇಡಿಕೆಯಿಟ್ಟ ಆರೋಪ ಸಂಬಂಧ ಸಾಂದರ್ಭಿಕ ಸಾಕ್ಷ್ಯಗಳ ಆಧಾರದಲ್ಲಿ ಸಾಬೀತುಪಡಿಸಬಹುದು ಎಂದು ಸುಪ್ರೀಂ ಕೋರ್ಟ್ ತಿಳಿಸಿದ ಅಂಶ ಉಲ್ಲೇಖಿಸಿದ ಪೀಠ, ಮೊದಲನೇ ಆರೋಪಿ ಮತ್ತು ನಾಲ್ಕನೇ ಆರೋಪಿಗಳು ಅಕ್ರಮವಾಗಿ ಹಣ ಗಳಿಕೆಯಲ್ಲಿ ನಿರತರಾಗಿದ್ದರು ಎಂಬ ಅಂಶಕ್ಕೆ ಸಂಬಂಧಿಸಿ ಸಾಕ್ಷ್ಯಾಧಾರಗಳ ಮೂಲಕ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ಯಶಸ್ವಿಯಾಗಿದೆ ಎಂದು ಹೇಳಿದೆ.2017ರ ಮಾರ್ಚ್ 9ರಂದು ಚೆಕ್ ಪೋಸ್ಟ್ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾಗ ಮೊದಲ ಆರೋಪಿ ಬಳಿ ₹ 41,510, ಎರಡನೇ ಆರೋಪಿ ಬಳಿ ₹ 2,400 ಮೂರನೇ ಆರೋಪಿ ಬಳಿ ₹ 2,665 ಮತ್ತು ನಾಲ್ಕನೇ ಆರೋಪಿ ಬಳಿ ₹ 3,500 ಪತ್ತೆ ಯಾಗಿತ್ತು. ಕೆಲಸಕ್ಕೆ ಹಾಜರಾಗುವುದಕ್ಕೂ ಮುನ್ನ ಈ ಸಿಬ್ಬಂದಿ ತಮ್ಮ ಬಳಿಯಲ್ಲಿದ್ದ ಮೊತ್ತ ಘೋಷಣೆ ಮಾಡಲು ನಿರ್ವಹಣೆ ಮಾಡುತ್ತಿದ್ದ ನೋಂದಣಿ ಪುಸ್ತಕದಲ್ಲಿ ತಿಳಿಸಿದ್ದ ಮೊತ್ತದಲ್ಲಿ ಏರುಪೇರಾಗಿತ್ತು. ಈ ಸಂಬಂಧ ಸೂಕ್ತ ವಿವರಣೆ ನೀಡಿಲ್ಲ. ಇದು ಭ್ರಷ್ಟಾಚಾರಕ್ಕೆ ಸಮ ಎಂದು ಲೋಕಾಯುಕ್ತ ಪೊಲೀಸರು ಆರೋಪಿಸಿದ್ದರು.