ಸಾರಾಂಶ
ಯಲ್ಲಾಪುರ: ಕಳೆದ ೨೦೨೩ರ ಫೆಬ್ರವರಿಯಲ್ಲಿ ನಡೆದ ಪಟ್ಟಣದ ಗ್ರಾಮದೇವಿ ಜಾತ್ರೆಯ ತಾತ್ಕಾಲಿಕ ಮಳಿಗೆ ಜಾಗದ ಹರಾಜಿನಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂಬ ವಿಷಯ ಗುರುವಾರ ನಡೆದ ಪಪಂ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ವ್ಯಾಪಕ ಚರ್ಚೆಯಾಯಿತು.
ಪಪಂ ಸದಸ್ಯರಾದ ರಾಧಾಕೃಷ್ಣ ನಾಯ್ಕ ಹಾಗೂ ಸತೀಶ ನಾಯ್ಕ ಜಾತ್ರೆಯ ಜಮಾ ಖರ್ಚು ವಿವರ ನೀಡುವಂತೆ ಅನೇಕ ಬಾರಿ ವಿನಂತಿಸಿದರೂ ನೀಡಲಿಲ್ಲ. ಸದಸ್ಯರನ್ನು ಈ ವಿಷಯದಲ್ಲಿ ಕತ್ತಲಿನಲ್ಲಿಟ್ಟಿದ್ದು ಏಕೆಂದು ಸ್ಪಷ್ಟವಾಗುತ್ತಿಲ್ಲ ಎಂದು ಏರಿದ ಧ್ವನಿಯಲ್ಲಿ ಪ್ರಶ್ನಿಸಿದರು.ಶಾಸಕರ ಉಪಸ್ಥಿತಿಯಲ್ಲಿ ನಡೆದ ಹಿಂದಿನ ಸಭೆಯಲ್ಲಿ ಜಾತ್ರೆಯ ಖರ್ಚು ವೆಚ್ಚದ ವಿವರ ನೀಡಲು ಪ್ರತ್ಯೇಕ ಸಾಮಾನ್ಯ ಸಭೆ ನಡೆಸಿ ಎಂದು ಸೂಚಿಸಿದ್ದರೂ ಸಭೆ ನಡೆಸಿಲ್ಲ. ಫಪ್ಪರ್(ಚಪ್ಪರ) ಶುಲ್ಕ ವಸೂಲಾತಿ ಠರಾವಿನಂತೆ ನಡೆದಿಲ್ಲ ಎಂದರು.
ಸಭೆಯ ಆರಂಭದಲ್ಲಿಯೇ ಎದ್ದುನಿಂತ ರಾಧಾಕೃಷ್ಣ ನಾಯ್ಕ, ಆಡಳಿತಾಧಿಕಾರಿಗಳ ಅವಧಿಯಲ್ಲಿನ ೧೭ ತಿಂಗಳ ವೆಚ್ಚದ ವಿವರ ನೀಡಲು ಯಾಕೆ ವಿಳಂಬ ಮಾಡುತ್ತಿದ್ದೀರಿ? ಸಭೆಯ ಮಾಹಿತಿಯನ್ನು ೭ ದಿನ ಮುಂಚಿತವಾಗಿ ನೀಡಬೇಕೆಂಬ ನಿಯಮವಿದ್ದರೂ ತಡವಾಗಿ ನೀಡುವುದೇಕೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸಭೆಯ ವಿಷಯ ಪಟ್ಟಿಯಲ್ಲಿ ಜಾತ್ರೆಯ ಜಮಾಖರ್ಚು ವಿಷಯವನ್ನು ಸೇರಿಸಿ ತರಾತುರಿಯಲ್ಲಿ ಸಭೆ ಕರೆಯಲಾಗಿದೆ ಎಂದು ಆಪಾದಿಸಿದರು.ಜಾತ್ರೆಯ ಜಮಾಖರ್ಚು ಪರಿಶೀಲನೆಗೆ ಮತ್ತೊಂದು ಸಭೆ ನಡೆಸೋಣ. ಈಗ ಉಳಿದ ವಿಷಯ ಚರ್ಚಿಸೋಣ ಎಂದಾಗ ಇಂದೇ ಚರ್ಚೆಯಾಗಲಿ ಎಂದು ಪಟ್ಟು ಹಿಡಿದರಾದರೂ ಮತ್ತೊಂದು ಸಭೆ ನಡೆಸಿ ಸಂಪೂರ್ಣ ವಿವರ ನೀಡುವುದಾಗಿ ಪಪಂ ಮುಖ್ಯಾಧಿಕಾರಿ ಸುನಿಲ್ ಗಾವಡೆ ಸಮಜಾಯಿಷಿ ನೀಡಿದರು.
ಅಗತ್ಯವಿಲ್ಲದ ಕಡೆ ಅನುದಾನ ನೀಡಲಾಗಿದೆ. ನಮ್ಮ ವಾರ್ಡಿನ ಕಾಮಗಾರಿಯಲ್ಲಿ ಅಧ್ಯಕ್ಷರು ಹಸ್ತಕ್ಷೇಪ ಮಾಡುವುದು ಬೇಡ ಎಂದು ಬಿಜೆಪಿ ಬೆಂಬಲಿತ ಸದಸ್ಯೆ ಕಲ್ಪನಾ ನಾಯ್ಕ ಆಕ್ಷೇಪಿಸಿದರು. ಶ್ಯಾಮಿಲಿ ಪಾಠಣಕರ ಇದಕ್ಕೆ ದನಿಗೂಡಿಸಿದರು. ಸ್ಥಳೀಯರ ಆಗ್ರಹದ ಮೇರೆಗೆ ಅಧ್ಯಕ್ಷರು ತಮ್ಮ ವಿವೇಚನೆ ಬಳಸಿ ಕಾಮಗಾರಿ ಮಂಜೂರಿ ಮಾಡಿದ್ದಾರೆ. ಅಷ್ಟಕ್ಕೂ ಆ ವಾರ್ಡಿನ ಅಭಿವೃದ್ಧಿಗೆ ನೀಡಿದ ಹೆಚ್ಚುವರಿ ಹಣ ಅವರಿಗೆ ಬೇಡ ಎಂದಾದಲ್ಲಿ ನಮ್ಮ ವಾರ್ಡಿಗೆ ನೀಡಿ ಎಂದು ಮಂಜುನಾಥ ನಗರದ ಸದಸ್ಯ ಸತೀಶ ನಾಯ್ಕ ವಿನಂತಿಸಿದರು. ಈ ಹಂತದಲ್ಲಿ ಸೋಮೇಶ್ವರ ನಾಯ್ಕ ಮತ್ತು ಸತೀಶ ನಾಯ್ಕ ನಡುವೆ ತೀವ್ರ ವಾಗ್ವಾದ ಉಂಟಾಯಿತು.ಕ್ರಿಯಾಯೋಜನೆ ರೂಪಿಸುವಲ್ಲಿ ವಾರ್ಡ್ ಸದಸ್ಯರ ನಿರ್ಣಯವೇ ಅಂತಿಮವಾಗಬೇಕು. ಸ್ಥಳೀಯ ವಾರ್ಡ್ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕಾಮಗಾರಿ ಮಾಡಬಾರದು ಎಂದು ಸೋಮೇಶ್ವರ ನಾಯ್ಕ ಆಗ್ರಹಿಸಿದರು. ಹಾಗಾದರೆ ಅಧ್ಯಕ್ಷರಿಗೆ ಯಾವುದೇ ವಾರ್ಡಿಗೆ ಹೆಚ್ಚುವರಿ ಹಣ ಮಂಜೂರಿ ಮಾಡುವ ಹಕ್ಕಿಲ್ಲವೇ ಎಂದು ಸತೀಶ ನಾಯ್ಕ ಪ್ರಶ್ನಿಸಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ನರ್ಮದಾ ನಾಯ್ಕ, ಉಪಾಧ್ಯಕ್ಷ ಅಮಿತ್ ಅಂಗಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಅಲಿ ಉಪಸ್ಥಿತರಿದ್ದರು. ಹೇಮಾವತಿ ಭಟ್ಟ ನಿರ್ವಹಿಸಿದರು.