ಬೇವೂರು ಗ್ರಾಪಂನಲ್ಲಿ ಭ್ರಷ್ಟಾಚಾರ: ಆರೋಪ

| Published : Oct 11 2025, 01:00 AM IST

ಸಾರಾಂಶ

ಚನ್ನಪಟ್ಟಣ: ಗ್ರಾಪಂನಲ್ಲಿ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿ 8 ಸದಸ್ಯರು ತಾಲೂಕಿನ ಬೇವೂರು ಗ್ರಾಮ ಪಂಚಾಯತಿ ಆವರಣದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.

ಚನ್ನಪಟ್ಟಣ: ಗ್ರಾಪಂನಲ್ಲಿ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿ 8 ಸದಸ್ಯರು ತಾಲೂಕಿನ ಬೇವೂರು ಗ್ರಾಮ ಪಂಚಾಯತಿ ಆವರಣದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.

ಬೇವೂರು ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಒ ಗ್ರಾಮ ಪಂಚಾಯತಿಯಲ್ಲಿ ಕೋಟ್ಯಂತರ ರುಪಾಯಿ ಅವ್ಯವಹಾರ ಮಾಡಿದ್ದು ಈ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಾಲೂಕು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಮನವಿ ನೀಡಿದ್ದರೂ ಸಹ ಕ್ರಮ ಕೈಗೊಂಡಿಲ್ಲ. ಕೂಡಲೇ ಇವರ ವಿರುದ್ಧ ತನಿಖೆ ಮಾಡಿ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.

ಸಂದರ್ಭದಲ್ಲಿ ಗ್ರಾಪಂ ಸದಸ್ಯ ಶಿವರಂಜನ್ ಮಾತನಾಡಿ, ಗ್ರಾಪಂ ಅಧ್ಯಕ್ಷೆ ಮಂಗಳಗೌರಮ್ಮ ಹಾಗೂ ಪಿಡಿಒ ಹರ್ಷ ಅವರು ಗ್ರಾಪಂನ 15ನೇ ಹಣಕಾಸು ಯೋಜನೆ ಹಾಗೂ ವರ್ಗ-1ರಲ್ಲಿನ ಅನುದಾನದಲ್ಲಿ 1.50 ಕೋಟಿ ರುಪಾಯಿಗೂ ಹೆಚ್ಚು ಭ್ರಷ್ಟಾಚಾರ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ 9 ತಿಂಗಳಿಂದ ಸದಸ್ಯರೆಲ್ಲಾ ತಾಪಂ ಇಒ, ಜಿಪಂ ಸಿಇಒ ಹಾಗೂ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಸಹ ಈವರೆಗೆ ಯಾರೂ ತನಿಖಾ ಕ್ರಮ ಕೈಗೊಂಡಿಲ್ಲ. ಆದರೆ ನಾವು ಸಭೆಗೆ ಗೈರಾಗಿದ್ದೇವೆ ಎಂಬ ಕಾರಣಕ್ಕೆ ನಮ್ಮ ವಿರುದ್ಧ ಶಿಸ್ತು ಕ್ರಮಕ್ಕೆ ಮಾತ್ರ ಬೇಗ ನೋಟಿಸ್ ನೀಡಿದ್ದಾರೆ ಎಂದು ಆರೋಪಿಸಿದರು.

ಗ್ರಾಪಂ ಪಿಡಿಒ ಅವರು ಭ್ರಷ್ಟಾಚಾರ ಮಾಡಿರುವುದು ಸಾಬೀತಾದರೆ ಕ್ರಮ ಎದುರಿಸಬೇಕಾಗುತ್ತದೆ ಎಂದು ಇಒ ಮತ್ತು ಸಿಇಒಗೆ ಹಣ ಕೊಟ್ಟು ಬೇರೆ ಪಂಚಾಯ್ತಿಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಅಧಿಕಾರಿಗಳೆ ಇಲ್ಲಿನ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದು ಈ ಬಗ್ಗೆ ಸೂಕ್ತ ತನಿಖೆ ಆಗುವವರೆಗೆ ನಾವು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತೇವೆ ಎಂದು ಲತಾಮಣಿ ಕೆಂಚೇಗೌಡ ಎಚ್ಚರಿಕೆ ನೀಡಿದರು.

ಧರಣಿಯಲ್ಲಿ ಗ್ರಾಪಂ ಸದಸ್ಯರಾದ ಸತೀಸ್, ಬಿ.ವಿ.ರಮೇಶ್, ಮಂಗಳಗೌರಿ, ಜಯಲಕ್ಷ್ಮಿ, ಸಾಕಮ್ಮ, ಶಿವರತ್ನಮ್ಮ, ಪಾರ್ವತಮ್ಮ, ರಾಮದಾಸೇಗೌಡ ಇತರರಿದ್ದರು.

9ಕೆಆರ್ ಎಂಎನ್ 10.ಜೆಪಿಜಿ

ಚನ್ನಪಟ್ಟಣ ತಾಲೂಕಿನ ಬೇವೂರು ಗ್ರಾಮ ಪಂಚಾಯಿತಿಯಲ್ಲಿ ಸದಸ್ಯರು ಆಹೋರಾತ್ರಿ ಧರಣಿ ನಡೆಸಿದರು.