ಸಾರಾಂಶ
ಕೆ.ಆರ್.ಪೇಟೆ ತಾಲೂಕಿನ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಸಾರ್ವಜನಿಕರ ಅಗತ್ಯ ದಾಖಲೆ ಸರಿಪಡಿಸಿಕೊಳ್ಳಲು ತುಂಬಾ ಕಿರುಕುಳ ನೀಡುತ್ತಿದ್ದಾರೆ. ಸರ್ಕಾರಿ ಸೇವಕರಾಗಿ ಕೆಲಸ ಮಾಡುವ ಬದಲು ನೌಕರರು ಖಾಸಗಿ ಕಚೇರಿಗಳಂತೆ ಲಂಚದ ರೂಪದಲ್ಲಿ ಹಣ ಪಡೆದು ಕೆಲಸ ಮಾಡುತ್ತಾರೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಮತ್ತು ರೈತ ಸಮುದಾಯಕ್ಕೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಆ.18ರಂದು ಪಟ್ಟಣದ ತಾಲೂಕು ಆಡಳಿತ ಸೌಧದ ಎದುರು ಬೃಹತ್ ಪ್ರತಿಭಟನೆ ನಡೆಸಲು ತಾಲೂಕು ರೈತಸಂಘ ತೀರ್ಮಾನಿಸಿದೆ.ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ರೈತ ಮುಖಂಡ ಎಂ.ವಿ.ರಾಜೇಗೌಡ ಅಧ್ಯಕ್ಷತೆಯಲ್ಲಿ ನಡೆದ ರೈತರ ಸಭೆಯಲ್ಲಿ ಪ್ರತಿಭಟನೆ ಕರಪತ್ರ ಬಿಡುಗಡೆ ಮಾಡಲಾಯಿತು.
ಈ ವೇಳೆ ಎಂ.ವಿ.ರಾಜೇಗೌಡ ಮಾತನಾಡಿ, ತಾಲೂಕಿನ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಸಾರ್ವಜನಿಕರ ಅಗತ್ಯ ದಾಖಲೆ ಸರಿಪಡಿಸಿಕೊಳ್ಳಲು ತುಂಬಾ ಕಿರುಕುಳ ನೀಡುತ್ತಿದ್ದಾರೆ. ಸರ್ಕಾರಿ ಸೇವಕರಾಗಿ ಕೆಲಸ ಮಾಡುವ ಬದಲು ನೌಕರರು ಖಾಸಗಿ ಕಚೇರಿಗಳಂತೆ ಲಂಚದ ರೂಪದಲ್ಲಿ ಹಣ ಪಡೆದು ಕೆಲಸ ಮಾಡುತ್ತಾರೆ ಎಂದು ದೂರಿದರು.ಕಂದಾಯ ಇಲಾಖೆಗೆ ಸಂಬಂಧಪಟ್ಟಂತೆ ಗೋಮಾಳದ ಜಮೀನು ಅಕ್ರಮವಾಗಿ ಒತ್ತುವರಿ ಬಗ್ಗೆ ದೂರು ನೀಡಿದರೂ ಬಲಿಷ್ಠರ ಮುಲಾಜಿಗೋ ಅಥವಾ ರಾಜಕಾರಣಿಗಳ ಒತ್ತಡಕ್ಕೆ ಮಣಿದು ದೂರಿನ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದರು.
ನೀರಾವರಿ ಇಲಾಖೆ ಕಾಮಗಾರಿಗಳಿಗೆ ಸರ್ಕಾರದಿಂದ ಮಂಜೂರಾದ ಅನುದಾನದಲ್ಲಿ ಲಕ್ಷ ಲಕ್ಷ ಹಣ ಲೂಟಿ ನಡೆದಿದೆ. ಈ ಬಗ್ಗೆ ದಾಖಲೆ ಸಮೇತ ದೂರು ನೀಡಿದರೂ ಅಧಿಕಾರಿಗಳು ಯಾವುದೇ ಕ್ರಮ ವಹಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ಎಪಿಎಂಸಿ ಆವರಣದಲ್ಲಿ ಜಮೀನು ಖಾಸಗಿಯವರಿಗೆ ಖಾತೆಯಾಗಿ, ಮತ್ತೊಬ್ಬ ಖಾಸಗಿ ವ್ಯಕ್ತಿಗೆ ಮಾರಾಟ ಮಾಡಿ ಅವರ ಹೆಸರಿಗೂ ಈಗಾಗಲೇ ಖಾತೆಯಾಗಿದೆ. ತಹಸೀಲ್ದಾರ್, ಎಸಿ, ಎಪಿಎಂಸಿ ಕಾರ್ಯದರ್ಶಿಗಳ ಗಮನಕ್ಕೆ ತಂದರೂ ಕ್ರಮವಹಿಸುವುದಿಲ್ಲ ಎಂದು ದೂರಿದರು.
ಸರ್ಕಾರಿ ಪಾಲಿಟೆಕ್ನಿಕ್ ಆವರಣದಲ್ಲಿ ಸಾರ್ವಜನಿಕರ ರಸ್ತೆ ಮುಚ್ಚಿ ರೈತರ ಸಂಚಾರಕ್ಕೆ ಅಡ್ಡಿಪಡಿಸಿದ್ದರೂ ಅಧಿಕಾರಿಗಳು ಬಿಡಿಸಿಕೊಡಲು ಯಾವುದೇ ಕ್ರಮ ವಹಿಸುತ್ತಿಲ್ಲ. ಶಾಸಕರಾಗಲೀ ಅಥವಾ ಜಿಲ್ಲಾ ಉಸ್ತುವಾರಿ ಸಚಿವರಾಗಲೀ ಅಥವಾ ಇತರೆ ರಾಜಕೀಯ ಪಕ್ಷಗಳ ಮುಖಂಡರಾಗಲಿ ರೈತರ ಸಮಸ್ಯೆಗಳ ಪರಿಹಾರಕ್ಕೆ ಧ್ವನಿಯೆತ್ತುತ್ತಿಲ್ಲ ಎಂದು ಕಿಡಿಕಾರಿದರು.ನಮ್ಮ ಸಮಸ್ಯೆಗಳ ಪರಿಹಾರಕ್ಕೆ ನಾವೇ ಬೀದಿಗಿಳಿಯಬೇಕಾದ ಅನಿವಾರ್ಯತೆ ನಿರ್ಮಾಣವಾಗಿದ್ದು, ಆ.18 ರಂದು ಪ್ರತಿಭಟನೆಗಾಗಿ ತಾಲೂಕಿನಾದ್ಯಂತ ಕರಪತ್ರಗಳನ್ನು ಹಂಚಲಾಗುತ್ತಿದೆ ಎಂದರು.
ಈ ವೇಳೆ ರೈತಸಂಘದ ಅಧ್ಯಕ್ಷ ತಾಲೂಕು ಕಾರಿಗನಹಳ್ಳಿ ಪುಟ್ಟೇಗೌಡ, ರೈತ ಮುಖಂಡರಾದ ಕೆ.ಆರ್.ಜಯರಾಂ, ಎಲ್.ಬಿ.ಜಗದೀಶ್, ಬೂಕನಕೆರೆ ನಾಗರಾಜು, ಕರೋಟಿ ತಮ್ಮಯ್ಯ, ಲಕ್ಷ್ಮೀಪುರ ನಾಗರಾಜು, ಚೌಡೇನಹಳ್ಳಿ ಕೃಷ್ಣೇಗೌಡ, ಕಾಗೇಪುರ ಮಹೇಶ್ ಸೇರಿದಂತೆ ಹಲವರಿದ್ದರು.