ಸಾರಾಂಶ
ಗಂಗಾವತಿ: ಇಲ್ಲಿನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜೆಜೆಎಂ ಯೋಜನೆಯ ಕಾಮಗಾರಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದು, ಕೂಡಲೇ ಅಧಿಕಾರಿಗಳು ಮತ್ತು ಗುತ್ತಿಗೆದಾರನ ವಿರುದ್ಧ ಎಫ್ಐಆರ್ ದಾಖಲಿಸಲು ಸೂಚನೆ ನೀಡಲಾಗಿದೆ ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದರು.ನಗರದ ತಾಪಂ ಮಂಥನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕ್ಷೇತ್ರದ ವ್ಯಾಪ್ತಿಯ 12 ಗ್ರಾಮಗಳಲ್ಲಿ 16 ಕೆರೆ ನೀರು ಭರ್ತಿ ಮಾಡುವ ಕೆಲಸದಲ್ಲಿ ಅವ್ಯವಹಾರ ನಡೆದಿದೆ. ಇದರ ಬಗ್ಗೆ ದಾಖಲೆಗಳನ್ನು ಪಡೆದು ಪರಿಶೀಲಿಸಿದಾಗ ಭ್ರಷ್ಟಾಚಾರ ಕಂಡು ಬಂದಿದೆ ಎಂದರು.₹13.50 ಕೋಟಿ ವೆಚ್ಚದ ಕಾಮಗಾರಿ ತೋರಿಸಿ ಇದರಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಚೆಕ್ ಡ್ಯಾಂ, ನಕಲಿ ಫೋಟೊ ಅಂಟಿಸಿ ಜಿಪಿಎಸ್ ವಿಡಿಯೋ ಮಾಡಿ ₹8 ಕೋಟಿ ದಾಖಲೆ ಸೃಷ್ಟಿಸಿ ಹಣ ನುಂಗಿ ಹಾಕಿದ್ದಾರೆಂದು ಶಾಸಕ ಜನಾರ್ದನ ರೆಡ್ಡಿ ಹೇಳಿದರು.ಕೂಡಲೇ ಜಿಪಂ ಸಿಇಒ ಜೆಜೆಎಂ ಯೋಜನೆಗೆ ಬೆಂಬಲಿಸಿದ ಅಧಿಕಾರಿಗಳು ಮತ್ತು ಗುತ್ತಿಗೆದಾರನ ವಿರುದ್ಧ ಕೇಸು ದಾಖಲಿಸಿ, ತಪ್ಪಿತಸ್ಥರನ್ನು ಬಂಧಿಸಲು ಸೂಚನೆ ನೀಡಲಾಗಿದೆ ಎಂದರು.
ಈಗಾಗಲೇ ಸಣ್ಣ ನೀರಾವರಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ತಾಪಂ ಇಒಗೆ ತನಿಖಾ ತಂಡ ರಚಿಸುವಂತೆ ತಿಳಿಸಲಾಗಿದೆ ಎಂದರು.ಗಂಗಾವತಿ ಸಮಗ್ರ ಅಭಿವೃದ್ಧಿಗೆ ₹500 ಕೋಟಿ: ನಗರದ ಸಮಗ್ರ ಅಭಿವೃದ್ಧಿಗೆ ₹500 ಕೋಟಿ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಿಂದ ನಗರದ 35 ವಾರ್ಡ್‌ಗಳಲ್ಲಿ ಸಿಸಿ ರಸ್ತೆ, ಚರಂಡಿ, ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ನೀಡಲಾಗುತ್ತದೆ ಎಂದರು.
ಗಂಗಾವತಿ ಬೈಪಾಸ್ ರಸ್ತೆ, ಗಂಗಾವತಿಯಿಂದ ಆನೆಗೊಂದಿಯವರೆಗೂ ರಸ್ತೆ ಅಗಲೀಕರಣ ಮಾಡಿ ಸುಂದರ ರಸ್ತೆ ಜೊತೆಗೆ ವಿದ್ಯುತ್ ದೀಪಗಳ ಕಂಬಗಳನ್ನು ಅಳವಡಿಸಲಾಗುತ್ತೆದ ಎಂದರು.ಅಮೃತ ಸಿಟಿ ಯೋಜನೆಯಲ್ಲಿ ಇನ್ನು ಕಾಮಗಾರಿ ನಡೆಯಬೇಕಾಗಿದೆ. ಈ ಬಗ್ಗೆ ತಮಗೆ ತೃಪ್ತಿ ಇಲ್ಲ. ನಗರದಲ್ಲಿ ಬಹಳಷ್ಟು ಉದ್ಯಾನವನ ಜಾಗವನ್ನು ಕೆಲವರು ಕಬಳಿಸಿದ್ದಾರೆ. ಈ ಸ್ಥಳಗಳನ್ನು ನಗರಸಭೆಯಿಂದ ತೆರುವುಗೊಳಿಸಿ ವಶ ಪಡಿಸಿಕೊಳ್ಳಲಾಗುತ್ತದೆ ಎಂದರು.
ಅಂಜನಾದ್ರಿ ಅಭಿವೃದ್ಧಿ: ತಾಲೂಕಿನ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಪ್ರದೇಶವನ್ನು ಅಬಿವೃದ್ಧಿ ಪಡಿಸಲಾಗುತ್ತಿದೆ. ತಿರುಪತಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತದೆ. ಇದಕ್ಕೆ ಕೇಂದ್ರ ಪ್ರವಾಸೋದ್ಯಮ ಇಲಾಖೆ ಮತ್ತು ರಾಜ್ಯ ಸರ್ಕಾರದ ಸಹ ಭಾಗಿತ್ವದಲ್ಲಿ ಅಬಿವೃದ್ಧಿ ಪಡಿಸಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲಾಗುತ್ತದೆ. ಇದಕ್ಕೆ ₹22 ಕೋಟಿ ಬಿಡುಗಡೆಯಾಗಿದೆ ಎಂದರು.ನಗರದಲ್ಲಿ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿರುವುದರ ಬಗ್ಗೆ ಮಾಹಿತಿ ಬಂದಿದ್ದು, ಸ್ಥಳೀಯ ಪೊಲೀಸರನ್ನು ಹೊರತು ಪಡಿಸಿ ಜಿಲ್ಲೆಯ ಪೊಲೀಸ್ ತಂಡವನ್ನು ಕರೆಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಆನೆಗೊಂದಿ ಉತ್ಸವ: ಬರುವ ಜನವರಿಯಲ್ಲಿ 26, 27, 28ರಂದು ಐತಿಹಾಸಿಕ ಆನೆಗೊಂದಿ ಉತ್ಸವ ಆಚರಿಸಲಾಗುತ್ತದೆ ಎಂದು ಶಾಸಕ ಜನಾರ್ದನ ರೆಡ್ಡಿ ತಿಳಿಸಿದರು. ಇದಕ್ಕಾಗಿ ಸರ್ಕಾರಕ್ಕೆ ₹2 ಕೋಟಿ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಜೊತೆ ಚರ್ಚಿಸಲಾಗಿದೆ ಎಂದರು.ಈ ಸಂದರ್ಭದಲ್ಲಿ ಮನೋಹರಗೌಡ ಹೇರೂರು, ಡಿ.ಕೆ. ದುರಗಪ್ಪ, ಸೈಯದ್ ಅಲಿ, ವೀರೇಶ ಬಲಕುಂದಿ, ಚೆನ್ನವೀರನಗೌಡ ಕೋರಿ ಉಪಸ್ಥಿತರಿದ್ದರು.