ಸಾರಾಂಶ
ಚನ್ನಪಟ್ಟಣ: ವಿರುಪಾಕ್ಷಿಪುರ ಗ್ರಾಪಂನಲ್ಲಿ ಪಿಡಿಒ ಮತ್ತು ಅಧ್ಯಕ್ಷರು ಅಧಿಕಾರ ದುರ್ಬಳಸಿಕೊಂಡು ಭ್ರಷ್ಟಾಚಾರ ನಡೆಸಿದ್ದು, ಈ ಬಗ್ಗೆ ದಾಖಲೆ ಸಮೇತ ಇಒಗೆ ದೂರು ಸಲ್ಲಿಸಿದ್ದರು ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಪಂ ಉಪಾಧ್ಯಕ್ಷ ಮಹೇಶ್ ಗೌಡ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾತ್ಮಗಾಂಧಿ ಮತ್ತು ನಜೀರ್ ಸಾಬ್ ಆಶಯಗಳಿಗೆ ಪೂರಕವಾಗಿ ಕಾರ್ಯ ನಿರ್ವಹಿಸಬೇಕಾದ ಗ್ರಾಪಂಗಳು ಪಿಡಿಒಗಳ ಕಪಿಮುಷ್ಠಿಯಲ್ಲಿ ಸಿಲುಕಿ ನರಳುತ್ತಿವೆ. ಪಂಚಾಯಿತಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಗ್ರಾಮ ಪಂಚಾಯಿತಿ ಸದಸ್ಯರ ಅಧಿಕಾರವನ್ನು ಅಧ್ಯಕ್ಷರು ಹಾಗೂ ಪಿಡಿಒ ಮೊಟಕುಗೊಳಿಸಿ, ಎಲ್ಲಾ ಕಾಮಗಾರಿಗಳಲ್ಲಿ ಅವ್ಯವಹಾರ ನಡೆಸುತ್ತಿದ್ದಾರೆ. ಮೇಲಧಿಕಾರಿಗಳು ಕೈ ಕಟ್ಟಿ ಕುಳಿತಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಒಂದೇ ಕಾಮಗಾರಿಗೆ ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಎರಡೆರಡು ಬಾರಿ ಹಣ ಡ್ರಾ ಮಾಡಿಕೊಳ್ಳುತ್ತಿದ್ದು, ಈ ಬಗ್ಗೆ ಸೂಕ್ತ ದಾಖಲಾತಿಗಳೊಂದಿಗೆ ಇಒ ಮತ್ತು ಸಿಇಒ ಅವರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಮಾಧ್ಯಮಗಳ ಮುಂದೆ ತಮ್ಮ ಅಳಲು ತೋಡಿಕೊಳ್ಳುತ್ತಿರುವುದಾಗಿ ತಿಳಿಸಿದರು.
ಪಿಡಿಒ ಸುಂದ್ರ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿದ್ದೇನೆ ಎಂಬ ಕಾರಣಕ್ಕೆ ಇಷ್ಟ ಬಂದಂತೆ ಕಚೇರಿಗೆ ಬರುವುದು, ಸದಸ್ಯರನ್ನು ಎತ್ತಿ ಕಟ್ಟುವುದು, ತಾವೇ ಕಾಮಗಾರಿ ಕೆಲಸ ಮಾಡುವ ಧೋರಣೆ ಕೈಗೊಂಡಿದ್ದಾರೆ. ಕೂಡಲೇ ಇವರನ್ನು ಇಲ್ಲಿಂದ ಬೇರೆಡೆ ವರ್ಗಾವಣೆ ಮಾಡಿ ಇಲ್ಲವೇ ಶಿಸ್ತುಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಪಂಚಾಯಿತಿ ಕಚೇರಿಗೆ ಬೀಗ ಜಡಿದು ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದರು.ರೈತ ಸಂಘದ ಮುಖಂಡ ರಮೇಶ್ ಮಾತನಾಡಿ, ಹಾಲು ಉತ್ಪಾದಕ ಸಹಕಾರ ಸಂಘದ ನಿವೇಶನಕ್ಕೆ ಇ-ಖಾತೆ ಮಾಡಿಕೊಡಿ ಎಂದು ಮನವಿ ಸಲ್ಲಿಸಿದರೆ, ಇದು ಸರ್ಕಾರಿ ಆಸ್ತಿ, ಮಾಡಲು ಬರುವುದಿಲ್ಲ ಎಂದೇಳುವ ಪಿಡಿಒ ಮತ್ತು ಅಧ್ಯಕ್ಷರು ಮಧ್ಯವರ್ತಿ ಬಂದು ಲಂಚ ಕೊಟ್ಟರೆ ಅದೇ ಆಸ್ತಿಗೆ ಇ-ಖಾತೆ ನೀಡುತ್ತಾರೆಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾಪಂ ಸದಸ್ಯರಾದ ಗಂಗಮ್ಮ, ಉಮಾ, ಗುರುಪ್ರಸಾದ್, ಪುಟ್ಟಸ್ವಾಮಿ, ಬಾಲಾಜಿ, ರಘು ಇತರರಿದ್ದರು.ಪೋಟೊ೪ಸಿಪಿಟಿ೧: ಚನ್ನಪಟ್ಟಣ ತಾಲೂಕಿನ ವಿರುಪಾಕ್ಷಿಪುರ ಗ್ರಾಪಂನಲ್ಲಿ ಗ್ರಾಪಂ ಉಪಾಧ್ಯಕ್ಷ ಮಹೇಶ್‌ಗೌಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಗ್ರಾಪಂ ಸದಸ್ಯರು ಹಾಜರಿದ್ದರು.