ಹೊಸಪೇಟೆ: ಯಾವುದೇ ಕಾರ್ಯ ಯೋಜನೆಗಳು ರೂಪುಗೊಂಡು ಅಸ್ಥಿತ್ವಕ್ಕೆ ಬರುವುದರೊಳಗೆ ಸಾಕಷ್ಟು ಹಣ ಪೋಲಾಗಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳುತ್ತಿವೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಹೋರಾಟ ಸಮಿತಿಯ ಕೇಂದ್ರಾಧ್ಯಕ್ಷ ಚಾಮರಸ ಮಾಲೀಪಾಟೀಲ್ ಕಳವಳ ವ್ಯಕ್ತಪಡಿಸಿದರು.

ನಗರದಲ್ಲಿ ವಿಜಯನಗರ ಜಿಲ್ಲಾ ಸಮಿತಿ ರಚನೆಯ ಸಂದರ್ಭದಲ್ಲಿ ಅವರು ಮಾತನಾಡಿದರು.

ಇಡೀ ದೇಶದಲ್ಲಿ ಅನೇಕ ಕ್ಷೇತ್ರಗಳಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಯಾವುದೇ ಕಾಮಗಾರಿ, ಯೋಜನೆಗಳು ಜನ ಸಾಮಾನ್ಯರನ್ನು ತಲುಪುವುದರೊಳಗೆ ಸೋರಿಕೆಯಾಗುತ್ತಿದೆ. ಈ ವ್ಯವಸ್ಥೆ ತಪ್ಪಬೇಕಾಗಿದೆ. ಕಾಮಗಾರಿಗೆ ಎಷ್ಟು ಹಣ ಬಿಡುಗಡೆಯಾಗಿರುತ್ತದೆಯೋ ಅಷ್ಟು ಹಣದಲ್ಲಿ ಕೆಲಸ ನಡೆಸುವಂತಾಗಬೇಕು ಎಂದು ಒತ್ತಾಯಿಸಿದರು.ವಿಶೇಷವಾಗಿ ಕಲ್ಯಾಣ ಕರ್ನಾಟಕದಲ್ಲಿ ಸಾಕಷ್ಟು ಹಣ ಬಿಡುಗಡೆಯಾಗಿದ್ದರೂ ಸರಿಯಾದ ಸದ್ಭಳಕೆಯಾಗುತ್ತಿಲ್ಲ. ಈ ಭಾಗದಲ್ಲಿ ಸಾಕಷ್ಟು ಸರ್ಕಾರಿ ಉದ್ಯೋಗಳು ಖಾಲಿ ಇದ್ದರೂ ಅವುಗಳನ್ನು ತುಂಬಲು ಸರ್ಕಾರಗಳು ನಿರ್ಲಕ್ಷ್ಯವಹಿಸುತ್ತಿವೆ. ಆರೋಗ್ಯಕ್ಕೆ ಸಂಬಂಧಿಸಿದಂತೆಯೂ ಕಳಜಿ ವಹಿಸದೇ ಇರುವುದರಿಂದ ಸಾಕಷ್ಟು ಸಾವು-ನೋವುಗಳ ಪ್ರಮಾಣ ಈ ಭಾಗದಲ್ಲಿ ಹೆಚ್ಚಾಗುತ್ತಿವೆ ಎಂದರು.

ಕಲ್ಯಾಣ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ಮತ್ತು ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತಬೇಕಾದ ಅನಿವಾರ್ಯತೆ ಈಗ ಹೆಚ್ಚಾಗಿದೆ. ಆದ್ದರಿಂದ ರಾಘವೇಂದ್ರ ಕುಷ್ಟಗಿ, ಜಾನ್‌ವೆಸ್ಲಿ ಟಿ. ಕಾತರಕಿ, ಬಿ. ಬಸವರಾಜ್, ಕೆ. ನೀಲ, ಜೆ.ಎಂ. ವೀರಸಂಗಯ್ಯ ಮುಂತಾದ ಹಿರಿಯ ಹೋರಾಟಗಾರರ ನೇತೃತ್ವದಲ್ಲಿ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಸಮಿತಿ ರಚಿಸಿ ಈ ಭಾಗಕ್ಕೆ ಸಿಗುವ ಮತ್ತು ಸಿಗಲಿರುವ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸಿ ಹೋರಾಟ ಹಮ್ಮಿಕೊಳ್ಳಬೇಕಾಗಿದೆ ಎಂದು ಹೇಳಿದರು.

ಈ ನಿಟ್ಟಿನಲ್ಲಿ ವಿಜಯನಗರ ಜಿಲ್ಲಾ ಸಮಿತಿ ರಚನೆಯಾಗಿದ್ದು, ಗೌರವಾಧ್ಯಕ್ಷರಾಗಿ ಜೆ.ಎಂ. ವೀರಸಂಗಯ್ಯ, ಅಧ್ಯಕ್ಷರಾಗಿ ಎ.ಕರುಣಾನಿಧಿ, ಕಾರ್ಯಾಧ್ಯಕ್ಷರಾಗಿ ಕೆ. ನಾಗರತ್ನಮ್ಮ, ವೈ. ಗೋವಿಂದರಾಜು, ಉಪಾಧ್ಯಕ್ಷರಾಗಿ ಜಿ. ಯರಿಸ್ವಾಮಿ, ಪ.ಯ. ಗಣೇಶ್, ಕೆ. ಚಾಂದ್‌ಬಾಷ, ಆರ್. ಭಾಸ್ಕರರೆಡ್ಡಿ, ಪ್ರಧಾನ ಕಾರ್ಯದರ್ಶಿಯಾಗಿ ಜೆ.ಎಂ. ಚನ್ನಬಸಯ್ಯ, ಸಂಘಟನಾ ಕಾರ್ಯದರ್ಶಿಯಾಗಿ ಅಕ್ಕಿ ಮಲ್ಲಿಕಾರ್ಜುನ, ಕಾರ್ಯದರ್ಶಿಗಳಾಗಿ ಜೆ.ಎನ್. ಕಾಳಿದಾಸ್, ಮಾವಿನಹಳ್ಳಿ ಬಸವರಾಜ, ಕೆ. ಸಿದ್ಧಲಿಂಗಪ್ಪ, ಯಲ್ಲಾಲಿಂಗ, ವಿ. ಸ್ವಾಮಿ, ಸಹ-ಕಾರ್ಯದರ್ಶಿಯಾಗಿ ಪವನ್‌ಕುಮಾರ್, ಶಿವಾರೆಡ್ಡಿ ಮತ್ತು ಸಮಿತಿಯ ಸಕ್ರಿಯ ಸದಸ್ಯರಾಗಿ ಮೋಹನ್ ಶಶಿಧರ್, ರವಿಕುಮಾರ್ ತಂಬ್ರಹಳ್ಳಿ, ಜಂಬಮ್ಮ, ಜೆ.ಎಂ. ಪ್ರಜಾಸಿಂಹ, ಎಂ. ಉಮಾಮಹೇಶ್ವರ, ಚಂದ್ರಲೇಖ, ಜೆ. ರಾಮಾಂಜಿನಿ ಸೇರಿದಂತೆ ಇತರರು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಹೋರಾಟ ಸಮಿತಿ ವಿಜಯನಗರ ಜಿಲ್ಲಾ ಪದಾಧಿಕಾರಿಗಳಾಗಿ ಆಯ್ಕೆಗೊಂಡಿದ್ದಾರೆ.