ಸಾರಾಂಶ
ರಾಜ್ಯದ ಕಾಂಗ್ರೆಸ್ ಸರ್ಕಾರ ಕಳೆದ 2 ವರ್ಷದಲ್ಲಿ ಜನತೆಗೆ ಎಲ್ಲ ಕ್ಷೇತ್ರದಲ್ಲಿ ಉತ್ತಮ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಬಹುತೇಕ ಇಲಾಖೆಗಳಲ್ಲಿ ಲಂಚದ ಹಾವಳಿ ವಿಪರೀತವಾಗಿ ಭ್ರಷ್ಟಾಚಾರ ತಾಂಡವವಾಡುತ್ತಿದೆ.
ಕನ್ನಡಪ್ರಭ ವಾರ್ತೆ ಶಿಕಾರಿಪುರ
ರಾಜ್ಯದ ಕಾಂಗ್ರೆಸ್ ಸರ್ಕಾರ ಕಳೆದ 2 ವರ್ಷದಲ್ಲಿ ಜನತೆಗೆ ಎಲ್ಲ ಕ್ಷೇತ್ರದಲ್ಲಿ ಉತ್ತಮ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಬಹುತೇಕ ಇಲಾಖೆಗಳಲ್ಲಿ ಲಂಚದ ಹಾವಳಿ ವಿಪರೀತವಾಗಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಈ ಕೂಡಲೇ ರಾಜ್ಯಪಾಲರು ಮದ್ಯಪ್ರವೇಶಿಸಿ ಸಂವಿಧಾನಬದ್ದವಾಗಿ ಆಡಳಿತ ನಡೆಸುವಲ್ಲಿ ವಿಫಲವಾದ ಸರ್ಕಾರದ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಾತ್ಯಾತೀತ ಜನತಾದಳದ ಜಿಲ್ಲಾ ಪ್ರ.ಕಾ ಹಾಗೂ ತಾ.ಉಸ್ತುವಾರಿ ಸಂಗಯ್ಯ ಆಗ್ರಹಿಸಿದರು.ಗುರುವಾರ ತಾ. ಜನತಾದಳದ ವತಿಯಿಂದ ತಾಲೂಕು ಕಚೇರಿ ಮುಂಭಾಗ ಕಾಂಗ್ರೆಸ್ ಸರ್ಕಾರದ ವಿರುದ್ದ ನಡೆದ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಕಾಂಗ್ರೆಸ್ ಪಕ್ಷದ ಸ್ವಪಕ್ಷೀಯರೇ ರಾಜ್ಯ ಸರ್ಕಾರದ ಹಗರಣಗಳ ಬಗ್ಗೆ ನಿತ್ಯ ಒಂದೊಂದೇ ದಾಖಲೆಗಳನ್ನು ಬಿಡುಗಡೆ ಮಾಡುತ್ತಿದ್ದು, ಇದುವರೆಗೂ ಮುಖ್ಯಮಂತ್ರಿಗಳು ರಾಜೀನಾಮೆ ನೀಡಿ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ವಸತಿ ಇಲಾಖೆ, ವಾಲ್ಮೀಕಿ ನಿಗಮ ಸೇರಿದಂತೆ ಹಲವಾರು ಇಲಾಖೆಗಳ ಹಗರಣ ಹೊರ ಬಿದ್ದಿದ್ದು, ರಾಜ್ಯಪಾಲರು ಈ ಕುರಿತು ಮೌನ ವಹಿಸಬಾರದು. ತಕ್ಷಣ ಕ್ರಮ ಕೈಗೊಂಡು ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು. ಇದುವರೆಗೂ ರಾಜ್ಯದಲ್ಲಿ ಯಾವುದೇ ಕಾಮಗಾರಿಯೂ ಆರಂಭವಾಗಿಲ್ಲ, ರೈತರಿಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ, ಒಳಚರಂಡಿ ವ್ಯವಸ್ಥೆಯಿಂದ ಕುಡಿಯುವ ನೀರಿನವರೆಗೂ ಮೂಲಭೂತ ಸೌಕರ್ಯಗಳ ಬಗ್ಗೆ ಸರ್ಕಾರ ಗಮನ ಹರಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.ತಾಲೂಕು ಜೆಡಿಎಸ್ ಅಧ್ಯಕ್ಷ ಬೆಂಕಿ ಯೋಗೇಶ್ ಮಾತನಾಡಿ, ಆರ್ ಸಿ ಬಿ ಗೆದ್ದ ಸಂದರ್ಭದಲ್ಲಿ ಸಂಭ್ರಮದ ವಿಜಯೋತ್ಸವವನ್ನು ಯಶಸ್ವಿಯಾಗಿ ಆಚರಿಸುವಲ್ಲಿ ರಾಜ್ಯ ಸರ್ಕಾರ ವಹಿಸಿದ ನಿರ್ಲಕ್ಷ್ಯಕ್ಕೆ ಹಲವು ಅಮೂಲ್ಯ ಜೀವಗಳನ್ನು ಕಳೆದುಕೊಂಡಿದ್ದೇವೆ, ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕಿದೆ ಎಂದು ಒತ್ತಾಯಿಸಿದರು. ವಸತಿ ಇಲಾಖೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ಸ್ವಪಕ್ಷೀಯ ಶಾಸಕರು ಸಚಿವ ಜಮೀರ್ ಅಹ್ಮದ್ ವಿರುದ್ದ ರಾಜಾರೋಷವಾಗಿ ಆರೋಪಿಸಿದ್ದು, ಈ ಕೂಡಲೇ ಸಚಿವರನ್ನು ವಜಾ ಗೊಳಿಸಬೇಕು ಎಂದರು.
ಸರ್ಕಾರ ವಜಾಗೊಳಿಸುವಂತೆ ಆಗ್ರಹಿಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಜಯಣ್ಣ, ತಾ.ಪ್ರದಾನ ಕಾರ್ಯದರ್ಶಿ ಮಂಜುನಾಥ್, ರಾಜ್ಯ ಕಾರ್ಯದರ್ಶಿ ಈರಾನಾಯ್ಕ್ ಬಿಳಕಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಗೀತ ಸತೀಶ್, ಉಪಾಧ್ಯಕ್ಷೆ ಸರೋಜಮ್ಮ, ಮುಖಂಡ ಬೂದ್ಯಪ್ಪ ಗೌಡ, ನಶ್ರೀನಾ ಭಾನು, ಕಾರ್ತಿಕ್, ನಾಗರಾಜ್, ಬಸವರಾಜ್, ಯೋಗೇಶ್ ಸಹಿತ ವಿವಿಧ ಪದಾಧಿಕಾರಿಗಳು ಹಾಜರಿದ್ದರು.