ಸಾರಾಂಶ
ರಾಮನಗರ: ದಿನ ಬಳಕೆ ವಸ್ತುಗಳ ಬೆಲೆ ಏರಿಕೆ, ಭ್ರಷ್ಟಾಚಾರ, ಪಿಕ್ ಪ್ಯಾಕೆಟ್, ಸಾಲ ಹಾಗೂ ಅಭಿವೃದ್ಧಿ ಶೂನ್ಯ ಕಾಂಗ್ರೆಸ್ ಸರ್ಕಾರದ 2 ವರ್ಷಗಳ ಸಾಧನೆ ಎಂದು ಬಿಜೆಪಿ ವಕ್ತಾರ ಮೋಹನ್ ವಿಶ್ವ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಲೂಟಿ ಮಾಡುವುದನ್ನು ಕಾಂಗ್ರೆಸ್ ಡ್ಯೂಟಿ ಮಾಡಿಕೊಂಡಿದೆ. ದುಬಾರಿ ಜೀವನ - ಅಭಿವೃದ್ಧಿ ಶೂನ್ಯ ಕಾಂಗ್ರೆಸ್ ಸರ್ಕಾರದ ನಿಜವಾದ ಸಾಧನೆಯಾಗಿದೆ. ಇದರ ನೆನಪಿನಾರ್ಥ ಹೊಸಪೇಟೆಯಲ್ಲಿ ಸಾಧನ ಸಮಾವೇಶ ಮಾಡುತ್ತಿದೆ ಎಂದು ಲೇವಡಿ ಮಾಡಿದರು.
ಪ್ರತಿನಿತ್ಯ ದಿನಪತ್ರಿಕೆ ಹಾಗೂ ಸುದ್ದಿ ವಾಹಿನಿಗಳನ್ನು ವೀಕ್ಷಿಸಿದರೆ ಬೆಲೆ ಏರಿಕೆ, ಭ್ರಷ್ಟಾಚಾರ ಮಾತ್ರ ಕಾಣುತ್ತಿದೆ. ಇದನ್ನು ಹೊರತು ಪಡಿಸಿ ಕಾಂಗ್ರೆಸ್ ಸರ್ಕಾರದ ಸಾಧನೆಗಳೇನೂ ಕಾಣುತ್ತಿಲ್ಲ. ಪೆಟ್ರೋಲ್ ಡೀಸೆಲ್ ಮೇಲೆ ಸುಂಕ ಹೆಚ್ಚಳ, ಬಸ್ಸು - ಮೆಟ್ರೋ ಪ್ರಯಾಣ ದರ ಹೆಚ್ಚಳ, ಬಿತ್ತನೆ ಬೀಜ, ಟಿಸಿ ಸಂಪರ್ಕ ದರವನ್ನು ದುಬಾರಿ ಮಾಡಲಾಗಿದೆ ಎಂದರು.
ನಂದಿನಿ ಹಾಲಿನ ದರ 6 ರುಪಾಯಿ ಹೆಚ್ಚಳ ಮಾಡಿದರು. ಆ ಹಣವನ್ನು ರೈತರಿಗೆ ಇನ್ನೂ ಕೊಟ್ಟಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ 2021ರಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ರಾಜ್ಯದ ಸುಂಕವನ್ನು ಲೀಟರ್ ಗೆ 12 ರು. ಕಡಿಮೆ ಮಾಡಿದ್ದೇವೊ. ಕಾಂಗ್ರೆಸ್ ಸರ್ಕಾರ ಇವರು ಮೂರು ಬಾರಿ ಹೆಚ್ಚಳ ಮಾಡಿದೆ.
ಅಬಕಾರಿ ಶುಲ್ಕ ಶೇಕಡ 50ರವರೆಗೆ ಹೆಚ್ಚಳ ಮಾಡಿದ್ದಾರೆ. ಬೆಂಗಳೂರಲ್ಲಿ ಮನೆಯ ಕಸದ ಮೇಲೂ ತೆರಿಗೆ ವಿಧಿಸಲು ಹೊರಟಿದೆ. ಹಾಲು, ಪೆಟ್ರೋಲ್, ಡೀಸೆಲ್, ಮದ್ಯ, ನೀರು, ವಿದ್ಯುತ್, ಸ್ಟ್ಯಾಂಪ್ ಡ್ಯೂಟಿ, ಜನನ - ಮರಣ ಪ್ರಮಾಣ ಪತ್ರದ ದರ ಹೆಚ್ಚಳ ಮಾಡಿದ್ದಾರೆ. ಈಗ ಕಸವನ್ನೂ ಬಿಟ್ಟಿಲ್ಲ. ಬಡವರು ಮತ್ತು ಮಧ್ಯಮ ವರ್ಗದ ಜನರ ಜೈಬನ್ನೇ ಎಟಿಎಂ ಮಾಡಿಕೊಂಡು ಲೂಟಿ ಮಾಡುತ್ತಿದೆ. ಇದಕ್ಕಾಗಿ ಸಾಧನ ಸಮಾವೇಶ ಮಾಡಲು ಕಾಂಗ್ರೆಸ್ ಹೊರಟಿದೆ ಎಂದು ಟೀಕಿಸಿದರು.
ಕರ್ನಾಟಕ ಅಂದರೆ ದೇಶದಲ್ಲಿಯೇ ದುಬಾರಿ ರಾಜ್ಯ ಎನ್ನುವಂತಾಗಿದೆ. ದೇಶದ ಹಣದುಬ್ಬರ ಶೇ 4.15ಇದ್ದರೆ, ಕರ್ನಾಟಕದ ಹಣದುಬ್ಬರ ಶೇ.5ರಿಂದ 6 ರಷ್ಟಾಗಿದೆ. ಬಡವರು ನೆಮ್ಮದಿಯ ಜೀವನ ನಡೆಸಲಾಗುತ್ತಿಲ್ಲ. ಒಂದು ಜೇಬಿನಿಂದ 10 ಸಾವಿರ ಪಿಕ್ ಪ್ಯಾಕೆಟ್ ಮಾಡಿಕೊಂಡು, ಮತ್ತೊಂದು ಜೇಬಿಗೆ 2 ಸಾವಿರ ರುಪಾಯಿ ಕೊಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಇದಕ್ಕೆ ಮೈಸೂರು ಮೂಡಾದಲ್ಲಿ ನಡೆದಿರುವ 3 ಸಾವಿರ ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರವೇ ಸಾಕ್ಷಿಯಾಗಿದೆ. ದಲಿತರ ಪರ ಎಂದು ಹೇಳಿಕೊಳ್ಳುವ ಕಾಂಗ್ರೆಸ್ 182 ಕೋಟಿ ವಾಲ್ಮೀಕಿ ಹಣವನ್ನು ತೆಲಂಗಾಣ ಚುನಾವಣೆಗೆ ಬಳಸಿಕೊಂಡಿತು. ಈಗ ಅಲ್ಲಿನ ಮುಖ್ಯಮಂತ್ರಿ ಗ್ಯಾರಂಟಿಗಳಿಂದಾಗಿ ಸರ್ಕಾರ ನಡೆಸಲು ಆಗುತ್ತಿಲ್ಲ ಎನ್ನುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಗಾಗಿ ಎಸ್ಸಿ ಎಸ್ಟಿ ವರ್ಗಗಳಿಗೆ ಮೀಸಲಿಟ್ಟ ಹಣವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ದಲಿತರ ಹಣ ತಿಂದಿದ್ದಕ್ಕೆ ಸಾಧನ ಸಮಾವೇಶ ಮಾಡುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದರು.
ಇಂಧನ ಇಲಾಖೆಯಲ್ಲಿ ಸ್ಮಾರ್ಟ್ ಮೀಟರ್ ಖರೀದಿಯಲ್ಲಿಯೂ 15 ಸಾವಿರ ಕೋಟಿ ಹಗರಣ ನಡೆದಿದೆ. ಕಾರ್ಮಿಕ ಸಚಿವ ಸಂತೋಷ್ ಲಾಡ್ ಕೂಲಿ ಕಾರ್ಮಿಕರಿಗೆ ಪೌಷ್ಠಿಕಾಂಶದ ಆಹಾರದಲ್ಲಿಯೂ ಹಣ ಲೂಟಿ ಮಾಡಿದ್ದಾರೆ.
ಕೂಲಿ ಕಾರ್ಮಿಕರ ಹಣ ತಿಂದಿದ್ದಕ್ಕಾಗಿ ಸಾಧನಾ ಸಮಾವೇಶ ನಡೆಸಲಾಗುತ್ತಿದೆಯಾ ಎಂದು ಮೋಹನ್ ವಿಶ್ವ ಪ್ರಶ್ನಿಸಿದರು.
ಯಾವ ಕ್ಷೇತ್ರದಲ್ಲಿ ಏನೇನು ಅಭಿವೃದ್ಧಿ ಕೆಲಸಗಳಾಗಿವೆ ಎಂಬುದನ್ನು ತೋರಿಸಲಿ ನೋಡೋಣ. ಅವರದೇ ಪಕ್ಷದ ಶಾಸಕರು ಕ್ಷೇತ್ರಕ್ಕಾಗಿ ಅನುದಾನ ಕೇಳುತ್ತಿದ್ದರು ಕೊಡುತ್ತಿಲ್ಲ. ಇದೀಗ ಕಾಂಗ್ರೆಸ್ ಸರ್ಕಾರ 3 ಲಕ್ಷ ಕೋಟಿ ಸಾಲ ಮಾಡಿದೆ. ಕಲ್ಯಾಣ ಕರ್ನಾಟಕ ಅಂತ ಏನು ಅಭಿವೃದ್ಧಿ ಕಾರ್ಯಗಳೇ ಆಗಿಲ್ಲ. ಮುಖ್ಯಮಂತ್ರಿಗಳು 5 ಸಾವಿರ ಕೋಟಿ ಮಂಜೂರು ಮಾಡಿದ್ದೇವಂದು ಹೇಳುತ್ತಾರೆ. ಅದು ಮಂಜೂರು ಆಗಿರುವುದಲ್ಲ, ಬಜೆಟ್‌ನಲ್ಲಿ ಘೋಷಣೆ ಮಾಡಿರುವುದಷ್ಟೆ. ಆ ಭಾಗವನ್ನು ಅಭಿವೃದ್ಧಿ ಮಾಡದೆ ಅಲ್ಲಿಯೇ ಸಾಧನ ಸಮಾವೇಶ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು.
ಕಳೆದ ಚುನಾವಣೆಯಲ್ಲಿ ಒಂದು ಸಮುದಾಯ ತಮ್ಮ ಪಕ್ಷಕ್ಕೆ ಮತ ಹಾಕಿದ ಕಾರಣಕ್ಕಾಗಿ ಗುತ್ತಿಗೆಯಲ್ಲಿ ಆ ಸಮುದಾಯಕ್ಕೆ ಮೀಸಲಾತಿ ನೀಡಿದರು. ಈ ಮೂಲಕ ಕಾಂಗ್ರೆಸ್ ಸರ್ಕಾರ ಋಣ ಸಂದಾಯ ಮಾಡುವ ಜೊತೆಗೆ ಓಲೈಕೆ ರಾಜಕಾರಣ ಮಾಡುತ್ತಿದೆ. ಮೂರು ದಿನಗಳ ಕಾಲ ಸುರಿದ ಮಳೆಗೆ ಬೆಂಗಳೂರಲ್ಲಿ ನೀರು ಸಂಗ್ರಹವಾಗಿದೆ. ಬೆಂಗಳೂರನ್ನು ಅಭಿವೃದ್ದಿ ಮಾಡಲಾಗದ ಡಿ.ಕೆ.ಶಿವಕುಮಾರ್, ಬಿಡದಿಯಲ್ಲಿ ಟೌನ್ ಶಿಪ್ ಮಾಡಲು ಹೊರಟಿರುವುದರ ಹಿಂದೆ ರಿಯಲ್ ಎಸ್ಟೇಟ್ ಹುನ್ನಾರ ಅಡಗಿದೆ ಎಂದು ಮೋಹನ್ ವಿಶ್ವ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಮುಖಂಡರಾದ ಆರ್ .ವಿ.ಸುರೇಶ್, ರುದ್ರದೇವರು, ಸಂದೀಪ್ , ಬಿ.ಸಿ.ಶಿವಾನಂದ ಮತ್ತಿತರರು ಉಪಸ್ಥಿತರಿದ್ದರು.