ಸಾರಾಂಶ
ಕೊಪ್ಪಳ:
ದೇಶದಲ್ಲಿಯೇ ಕರ್ನಾಟಕ ಭ್ರಷ್ಟಾಚಾರದಲ್ಲಿ ನಂಬರ್ 1 ಇದೆ. ಇದನ್ನು ನಾನು ಹೇಳುತ್ತಿಲ್ಲ. ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರು ಹೇಳಿದ್ದಾರೆ ಎಂದು ಹೇಳಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಬಿಜೆಪಿ ಸರ್ಕಾರವಿದ್ದಾಗ ಅಭಿವೃದ್ಧಿಯಲ್ಲಿ ನಂ. 2 ಸ್ಥಾನ ಪಡೆದಿದ್ದರೆ ಇಂದು ಭ್ರಷ್ಟಾಚಾರದಲ್ಲಿ ನಂ. 1 ಸ್ಥಾನ ಪಡೆದಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ನಗರದ ಅಶೋಕ ವೃತ್ತದಲ್ಲಿ ನಡೆದ ಬೃಹತ್ ಜನಾಕ್ರೋಶ ಯಾತ್ರೆಯಲ್ಲಿ ಆಡಳಿತ ಪಕ್ಷದ ನಾಯಕರ ಹೇಳಿಕೆ ಉಲ್ಲೇಖಿಸಿ ಸರ್ಕಾರದವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಕಾಂತರಾಜು ವರದಿ ಸಮರ್ಪಕವಾಗಿಲ್ಲ ಎಂದು ನಾವು ಮಾತ್ರವಲ್ಲದೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ವೀರಪ್ಪ ಮೊಯ್ಲಿ ಹೇಳಿದ್ದಾರೆ. ಹಿಂದುಳಿದವರು, ಬಡವರ ಕಲ್ಯಾಣಕ್ಕಾಗಿ ಸರ್ಕಾರ ಚಿಂತಿಸುತ್ತಿಲ್ಲ. ಯೋಜನೆ ಜಾರಿಗೊಳಿಸುತ್ತಿಲ್ಲ. ಆದರೆ, ಕಾಂತರಾಜು ವರದಿ ಮಂಡಿಸುವ ಮೂಲಕ ಜಾತಿಯ ವಿಷಬೀಜ ಬಿತ್ತುತ್ತಿದೆ. ಇದೆಲ್ಲವನ್ನು ಜನರು ಜಾಗೃತಿಯಿಂದ ನೋಡುತ್ತಿದ್ದಾರೆ. ಇವರಿಗೆ ಪಾಠ ಕಲಿಸುವ ಕಾಲ ದೂರವಿಲ್ಲ ಎಂದರು.ರಾಜ್ಯ ಸರ್ಕಾರಕ್ಕೆ ಜಾತಿ ಗಣತಿ ಮಾಡುವ ಅಧಿಕಾರವಿಲ್ಲ. ಆದರೂ ಸಮೀಕ್ಷೆ ಹೆಸರಿನಲ್ಲಿ ಜಾತಿ ಗಣತಿ ಮಾಡಿದ್ದಾರೆ. ಹತ್ತು ವರ್ಷಗಳ ಹಿಂದೆ ಮಾಡಿದ್ದನ್ನು ಈಗ ಪ್ರಕಟಿಸಿದ್ದಾರೆ. ಜಾತಿ ಗಣತಿ ಎನ್ನುವ ಬೆದರುಗೊಂಬೆ ಹಿಡಿದುಕೊಂಡಿದ್ದಾರೆ ಎಂದರು.
ಗ್ಯಾರಂಟಿ ಯೋಜನೆಗಳಿಂದ ಜನರು ನೆಮ್ಮದಿಯಿಂದ ಇದ್ದಾರೆ ಎನ್ನುವ ಭ್ರಮೆಯಲ್ಲಿ ಸರ್ಕಾರವಿದೆ. ಆದರೆ, ವಾಸ್ತವ ಅರಿಯಲು ಮುಖ್ಯಮಂತ್ರಿ ಸೇರಿದಂತೆ ಸಚಿವರು ಸಹ ಜನರ ಬಳಿ ಹೋಗುತ್ತಿಲ್ಲ, ರಾಜ್ಯವನ್ನು ಸುತ್ತುತ್ತಿಲ್ಲ. ಬೆಂಗಳೂರಿಗೆ ಸೀಮಿತವಾಗಿದ್ದಾರೆಂದು ಕಿಡಿಕಾರಿದರು.ಮುಸ್ಲಿಂರಿಗೆ ಶೇ. 4 ಮೀಸಲಾತಿ:
ಸರ್ಕಾರಿ ಕಾಮಗಾರಿಯಲ್ಲಿ ಮುಸ್ಲಿಂರಿಗೆ ಗುತ್ತಿಗೆಯಲ್ಲಿ ಶೇ. 4ರಷ್ಟು ಮೀಸಲಾತಿ ನೀಡಿರುವುದನ್ನು ವಿರೋಧಿಸಿದರೂ ಸರ್ಕಾರ ಜಾರಿಗೊಳಿಸಿದೆ. ಈ ಮೂಲಕ ಹಿಂದುಳಿದ ವರ್ಗಗಳಿಗೆ ಮುಖ್ಯಮಂತ್ರಿ ಅನ್ಯಾಯ ಮಾಡಿದ್ದಾರೆ. ನೀವು ರಾಜ್ಯದ ಮುಖ್ಯಮಂತ್ರಿಗಳೋ ಅಥವಾ ಮುಸ್ಲಿಂರ ಮುಖ್ಯಮಂತ್ರಿಯೇ ಎಂದು ವಿಜಯೇಂದ್ರ ಪ್ರಶ್ನಿಸಿದರು.ಕ್ಷೇತ್ರದ ಅಭಿವೃದ್ಧಿಗೆ ಹಣ ನೀಡುವಂತೆ ಮುಖ್ಯಮಂತ್ರಿಗೆ ಶಾಸಕರು ಮನವಿ ಮಾಡಿದರು ಕ್ಯಾರೆ ಎನ್ನುತ್ತಿಲ್ಲ. ಇದರಿಂದ ಶಾಸಕರು ಒಂದು ಶಾಲಾ ಕೊಠಡಿಗೆ ಹಣ ನೀಡಲು ಆಗುತ್ತಿಲ್ಲ ಎಂದ ಅವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಿದ್ದ ₹ 38 ಸಾವಿರ ಕೋಟಿ ಬೇರೆ ಯೋಜನೆಗೆ ಬಳಕೆ ಮಾಡಿದ್ದಾರೆ. ವಾಲ್ಮಿಕಿ ಅಭಿವೃದ್ಧಿ ನಿಗಮದಲ್ಲಿ ದೊಡ್ಡ ಹಗರಣವೇ ನಡೆದಿದೆ ಎಂದರು.
ವಿಪ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಮಾತನಾಡಿ, ಸಂವಿಧಾನ ಬದಲಾಯಿಸುತ್ತೇನೆ ಎಂದು ಕಾಂಗ್ರೆಸ್ ನಾಯಕ ಅಮರೇಗೌಡ ಭಯ್ಯಾಪುರ ಹೇಳಿದರೂ ಯಾರೂ ಹೋರಾಟ ಮಾಡಲಿಲ್ಲ. ಬಿಜೆಪಿ ಸಂವಿಧಾನ ಬದಲಾಯಿಸುತ್ತದೆ ಎನ್ನುವುದು ಸುಳ್ಳು. ನಾವು ಬದಲಾಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.ಗಾಂಧಿ ಮನೆತನವೆಲ್ಲ ಭಾರತ ರತ್ನ ಪಡೆದುಕೊಂಡಿದ್ದಾರೆ. ಈಗ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಮಾತ್ರ ಉಳಿದಿದ್ದಾರೆ. ಆದರೆ, ಕಾಂಗ್ರೆಸ್ ಸರ್ಕಾರ ದೇಶದಲ್ಲಿ ಇನ್ನೆಂದೂ ಅಧಿಕಾರಕ್ಕೆ ಬರದೆ ಇರುವುದರಿಂದ ಇವರು ಭಾರತ ರತ್ನ ಪಡೆಯಲು ಸಾಧ್ಯವಿಲ್ಲ ಎಂದ ಅವರು, ಅಂಬೇಡ್ಕರ್ ಸೋಲಿಸಿದ ಕಾಂಗ್ರೆಸ್ ಈಗ ಅವರು ಹೆಸರೇಳುತ್ತಿದ್ದಾರೆ. ಅವರಿಗೆ ಭಾರತ ರತ್ನ ನೀಡಲಿಲ್ಲ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸುಗೂರು ಪ್ರಾಸ್ತಾವಿಕ ಮಾತನಾಡಿದರು. ಶಾಸಕ ದೊಡ್ಡನಗೌಡ ಪಾಟೀಲ್, ಮಾಜಿ ಸಚಿವ ಹಾಲಪ್ಪ ಆಚಾರ್, ಶಾಸಕ ಗಾಲಿ ಜನಾರ್ದನರೆಡ್ಡಿ, ವಿಪ ಸದಸ್ಯೆ ಹೇಮಲತಾ ನಾಯಕ, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್ ಮಾತನಾಡಿದರು.ವಿಪ ಸದಸ್ಯ ರವಿಕುಮಾರ, ಜಿ. ವೀರಪ್ಪ, ತಿಪ್ಪೇರುದ್ರಸ್ವಾಮಿ, ಶರಣು ತಳ್ಳಿಕೇರಿ, ಎಚ್. ಗಿರೇಗೌಡ, ನವೀನಕುಮಾರ ಗುಳಗಣ್ಣವರ, ಶಿವರಾಮಗೌಡ, ಮಹಾಂತೇಶ ಪಾಟೀಲ್ ಮೈನಳ್ಳಿ ಮೊದಲಾದವರು ಇದ್ದರು.