ಕರಾವಳಿ ಭಾಗದಲ್ಲಿ ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆಗೆ ಪೂರಕವಾಗಿ ಕರಾವಳಿಯಲ್ಲಿ ಸಚಿವ ಸಂಪುಟ ಸಭೆ ನಡೆಸಲು ತೀರ್ಮಾನಿಸಿದ್ದೇವೆ. ಅಷ್ಟರೊಳಗೆ ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ನೀತಿಯಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಬೆಂಗಳೂರು: ಕರಾವಳಿ ಭಾಗದಲ್ಲಿ ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆಗೆ ಪೂರಕವಾಗಿ ಕರಾವಳಿಯಲ್ಲಿ ಸಚಿವ ಸಂಪುಟ ಸಭೆ ನಡೆಸಲು ತೀರ್ಮಾನಿಸಿದ್ದೇವೆ. ಅಷ್ಟರೊಳಗೆ ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ನೀತಿಯಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಅಲ್ಲದೆ, ಕರಾವಳಿ ಭಾಗದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ತಾಂತ್ರಿಕ ತೊಂದರೆ ಆಗದಂತೆ ವಿವಿಧ ಅನುಮತಿಗಳನ್ನು ಪಡೆಯಲು ಏಕಗವಾಕ್ಷಿ (ಸಿಂಗಲ್ ವಿಂಡೋ) ವ್ಯವಸ್ಥೆ ಜಾರಿಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.ವಿಧಾನಸೌಧದಲ್ಲಿ ಶುಕ್ರವಾರ ನಡೆದ ಕರಾವಳಿ ಪ್ರವಾಸೋದ್ಯಮ ಕುರಿತ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಕರಾವಳಿ ಭಾಗದಲ್ಲಿ ಅಭಿವೃದ್ಧಿಗೆ ಅಡ್ಡಿಯಾಗುತ್ತಿರುವ ಸಿಆರ್‌ಝಡ್ ಹಾಗೂ ಅರಣ್ಯ ಇಲಾಖೆಯ ತಾಂತ್ರಿಕ ಸಮಸ್ಯೆಗಳ ಕುರಿತು 15-20 ದಿನಗಳಲ್ಲಿ ವರದಿ ನೀಡಬೇಕು. ವರದಿಯಲ್ಲಿ ಸಮಸ್ಯೆಗಳು ಹಾಗೂ ಪರಿಹಾರಗಳ ಕುರಿತು ವಿವರಣೆ ನೀಡಬೇಕು ಸೂಚನೆ ನೀಡಿದರು.
ಕರಾವಳಿಯಲ್ಲಿ ಆರ್ಥಿಕತೆಗೆ ಅತ್ಯುತ್ತಮ ಅವಕಾಶಗಳಿವೆ. ಅಲ್ಲಿ ಹೂಡಿಕೆದಾರರಿಗೆ ಸುಗಮ ಮತ್ತು ಸರಳವಾದ ಮಾರ್ಗಗಳನ್ನು ಸೃಜಿಸಬೇಕು. ಉದ್ಯಮಿಗಳಿಗೆ ಆಗುತ್ತಿರುವ ಇಲಾಖಾ ಕಿರಿಕಿರಿಗಳಿಗೆ ಪರಿಹಾರ ಕಂಡು ಹಿಡಿಯಬೇಕು. ಕರಾವಳಿ ಸಂಸ್ಕೃತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರ ಮಾಡುವ ಜತೆಗೆ ಹೆಚ್ಚು ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆಗೆ ಆದ್ಯತೆ ನೀಡಬೇಕು ಎಂದು ಸ್ಪಷ್ಟ ನಿರ್ದೇಶನ ನೀಡಿದರು ಎಂದು ತಿಳಿದುಬಂದಿದೆ.ಕರ್ನಾಟಕ ಪ್ರವಾಸೋದ್ಯಮ ನೀತಿಯಡಿ 718.63 ಕೋಟಿ ರು. ಅಂದಾಜು ವೆಚ್ಚದಲ್ಲಿ 45 ಯೋಜನೆಗಳ ಹೂಡಿಕೆಗೆ ಅನುಮೋದನೆ ನೀಡಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಅವರು ಸಭೆಯಲ್ಲಿ ಮಾಹಿತಿ ನೀಡಿದರು.ಈ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸದ್ಯ ಅನುಮೋದಿಸಿರುವ 45 ಯೋಜನೆಗಳಿಂದ 4500 ಉದ್ಯೋಗ ಸೃಷ್ಟಿಯಾಗುತ್ತದೆ. ಈ ಪ್ರಮಾಣ ಇನ್ನಷ್ಟು ಹೆಚ್ಚಾಗಬೇಕು. ಅತಿ ಉದ್ದದ ಸಮುದ್ರ ತೀರಗಳು ಇರುವ ಪ್ರದೇಶಗಳಲ್ಲಿ ರಾಜ್ಯದ ಕರಾವಳಿಯೂ ಸೇರಿದೆ. ನಮ್ಮ ಪರಿಸರಕ್ಕೆ ಧಕ್ಕೆ ಆಗದಂತೆ ಸಮುದ್ರ ತೀರಗಳನ್ನು ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಪರಿಗಣಿಸಬೇಕು ಎಂದು ಸಲಹೆ ನೀಡಿದರು.
ಬಂಡವಾಳ ಆಕರ್ಷಿಸಲು ಸಹಾಯಧನ, ಬಡ್ಡಿ ಸಹಾಯಧನ ಮತ್ತು ರಿಯಾಯ್ತಿಗಳ ಮೂಲಕ ಪ್ರೋತ್ಸಾಹಗಳನ್ನು ನೀಡುವ ಬಗ್ಗೆ ಮುಖ್ಯಮಂತ್ರಿ ಅವರು ಆಸಕ್ತಿ ವ್ಯಕ್ತಪಡಿಸಿದರು.ಕಲೆಗೆ ಪ್ರಾಶಸ್ತ್ಯ ಹೆಚ್ಚಿಸಿ-ರಿಷಭ್ ಶೆಟ್ಟಿ:
ನಟ, ನಿರ್ದೇಶಕ ರಿಷಭ್ ಶೆಟ್ಟಿ ಮಾತನಾಡಿ, ಕರಾವಳಿಯ ಜನಪದ ಕಲೆ, ಸಂಗೀತಕ್ಕೆ ಪ್ರೋತ್ಸಾಹ ನೀಡಬೇಕು. ಸಿನಿಮಾ ಚಿತ್ರೀಕರಣಕ್ಕೆ ಹೆಚ್ಚಿನ ಅನುಕೂಲ ಕಲ್ಪಿಸುವುದರಿಂದ ಕೇರಳ-ಗೋವಾ-ಕರ್ನಾಟಕದ ಸಿನಿಮಾ ಜಗತ್ತಿಗೆ ಹೆಚ್ಚು ಅನುಕೂಲ ಆಗಲಿದೆ ಎಂದು ತಿಳಿಸಿದರು.ಉದ್ಯಮಿಗಳು ಹೆಲಿ ಟೂರಿಸಂ ಅಭಿವೃದ್ಧಿ, ವಿಶೇಷ ಕ್ಷೇತ್ರವಾಗಿ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ, ಪ್ರವಾಸೋದ್ಯಮ ವಲಯ ಮತ್ತು ಬೃಹತ್ ಪ್ರವಾಸೋದ್ಯಮ ಯೋಜನೆ, ಕರಾವಳಿ ಮೇಳ, ಉತ್ಸವಗಳು ಮತ್ತು ಮಾರ್ಕೆಟಿಂಗ್, ಕರಾವಳಿ ಸಂಸ್ಕೃತಿ, ಆಚರಣೆ, ಹೆಮ್ಮೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡುವ ಬಗ್ಗೆ ಸಲಹೆಗಳನ್ನು ನೀಡಿದರು.
ಸಭೆಯಲ್ಲಿ ಸಚಿವ ಕೆ.ಜೆ.ಜಾರ್ಜ್, ಶಾಸಕರಾದ ಜಿ.ಟಿ ದೇವೇಗೌಡ, ಸತೀಶ್ ಸೈಲ್, ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಶ್ರೀನಿವಾಸ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ತ್ರಿಲೋಕ್ ಚಂದ್ರ ಹಾಜರಿದ್ದರು.ಸಭೆಯಲ್ಲಿ ಏನೇನು ಪ್ರಸ್ತಾಪ?: ಕರ್ನಾಟಕ ಪ್ರವಾಸೋದ್ಯಮ ನೀತಿಯಡಿ ೭೧೮.೬೩ ಕೋಟಿ ರು. ಅಂದಾಜು ಹೂಡಿಕೆಯ ೪೫ ಯೋಜನೆಗಳನ್ನು ಅನುಮೋದಿಸಿರುವ ಬಗ್ಗೆ ಅಧಿಕಾರಿಗಳು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.*ವಿಶೇಷ ಕ್ಷೇತ್ರವಾಗಿ ಕರಾವಳಿ ಪ್ರವಾಸೋದ್ಯಮ. *ಪ್ರವಾಸೋದ್ಯಮ ವಲಯಗಳು ಮತ್ತು ಬೃಹತ್ ಪ್ರವಾಸೋದ್ಯಮ ಯೋಜನೆಗಳು*ಕರಾವಳಿ ಮೇಳಗಳು, ಉತ್ಸವಗಳು ಮತ್ತು ಮಾರ್ಕೆಟಿಂಗ್*ಕರಾವಳಿ ಸಂಸ್ಕೃತಿ, ಆಚರಣೆ, ಹೆಮ್ಮೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರ ಮತ್ತು ಪ್ರಚಾರ ಮಾಡುವುದು.
*ಸರ್ಕಾರದ ಈ ಮಹತ್ವಾಕಾಂಕ್ಷೆಯನ್ನು ಸಾಧಿಸಲು ಮತ್ತು ಬಂಡವಾಳ ಆಕರ್ಷಿಸಲು ಸಹಾಯಧನ, ಬಡ್ಡಿ ಸಹಾಯಧನ ಮತ್ತು ರಿಯಾಯ್ತಿಗಳ ಮೂಲಕ ಪ್ರೋತ್ಸಾಹಗಳನ್ನು ನೀಡುವ ಬಗ್ಗೆ ಮುಖ್ಯಮಂತ್ರಿಗಳು ಒತ್ತು ನೀಡಿದರು.