ಆಧುನಿಕತೆಯ ಸ್ಪರ್ಶಕ್ಕೆ ಸಿಲುಕಿ ಸಾಕಷ್ಟು ಗುಡಿ ಕೈಗಾರಿಕೆಗಳು ಮತ್ತು ಕುಲ ಕಸುಬುಗಳು ಹಾನಿ ಅನುಭವಿಸುತ್ತಿದ್ದು ಅದನ್ನು ಉಳಿಸುವ ಕಾರ್ಯ ಆಗಬೇಕಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಕನ್ನಡಪ್ರಭ ವಾರ್ತೆ ಕಡೂರು

ಆಧುನಿಕತೆಯ ಸ್ಪರ್ಶಕ್ಕೆ ಸಿಲುಕಿ ಸಾಕಷ್ಟು ಗುಡಿ ಕೈಗಾರಿಕೆಗಳು ಮತ್ತು ಕುಲ ಕಸುಬುಗಳು ಹಾನಿ ಅನುಭವಿಸುತ್ತಿದ್ದು ಅದನ್ನು ಉಳಿಸುವ ಕಾರ್ಯ ಆಗಬೇಕಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಪಟ್ಟಣದ ದೊಡ್ಡಪೇಟೆಯ ದಿ.ಭಾವಸಾರ ಕೋ-ಆಪರೇಟಿವ್ ಸೊಸೈಟಿಯಿಂದ ಶ್ರೀ ಪಾಂಡುರಂಗ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಿಗೆ ಪಿ-6 ಅತ್ಯಾಧುನಿಕ ಹೊಲಿಗೆ ಯಂತ್ರಗಳನ್ನು ವಿತರಿಸಿ ಮಾತನಾಡಿದರು.

ಸಣ್ಣ ಸಣ್ಣ ಸಮುದಾಯಗಳು ಸಾಮಾಜಿಕವಾಗಿ, ಆರ್ಥಿಕವಾಗಿ ಮುಂದುವರಿಯಲು ಗುರುತಿಸುವ ಕಾರ್ಯವು ಆಗಬೇಕಿದೆ. ಈ ನಿಟ್ಟಿನಲ್ಲಿ ಭಾವಸಾರ ಸಮಾಜದ ಮುಖಂಡರು ದಿಟ್ಟ ನಿರ್ಧಾರ ಕೈಗೊಂಡು ಸಮಾಜ ಭಾಂಧವರು ಬದುಕು ಸಾಗಿಸಲು ಕೈಗೊಂಡಿರುವ ಕ್ರಮವು ಶ್ಲಾಘನೀಯ. ನಮ್ಮ ಸರ್ಕಾರದ ಧ್ಯೇಯ ಕೂಡ ಇದಾಗಿದ್ದು, 5 ಗ್ಯಾರಂಟಿಗಳ ಮೂಲಕ ಬಡವರಿಗೆ ಬಲ ಕೊಡುವ ಕಾರ್ಯವನ್ನು ನಮ್ಮ ಸರ್ಕಾರ ಮಾಡುತ್ತಿದೆ. ತಾವು ಕೂಡ ಸಣ್ಣ ಸಣ್ಣ ಸಮುದಾಯಗಳೊಂದಿಗೆ ಸದಾ ಸಂಪರರ್ಕದಲ್ಲಿದ್ದು ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡುತ್ತಿದ್ದೇನೆ ಎಂದರು.

ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಭಾವಸಾರ ಸಮಾಜದ ಬಂಧುಗಳಿಗೆ ಭಾವಸಾರ ಸೊಸೈಟಿಯಿಂದ ಸ್ವಾವಲಂಬಿ ಬದುಕು ಸಾಗಿಸಲು ಹೊಲಿಗೆ ಯಂತ್ರಗಳನ್ನು ವಿತರಣೆ ಮಾಡುತ್ತಿರುವುದು ಸಂತಸದ ಸಂಗತಿ. ಭಾವಸಾರ ಸೊಸೈಟಿಯ ಅಭಿವೃದ್ಧಿಗಾಗಿ ಸ್ವಂತ ಕಟ್ಟಡ ಹೊಂದಲು ನಿವೇಶನ ಒದಗಿಸುವ ಭರವಸೆ ನೀಡಿದರು.

ಕಡೂರು ತಾಲೂಕು ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಕೆ.ಮೂರ್ತಿರಾವ್‌ ಮಾತನಾಡಿ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಸಮುದಾಯವು ಎಷ್ಟೇ ಮುಂದಿದ್ದರೂ ಆರ್ಥಿಕ ಸದೃಢತೆಯೂ ಮುಖ್ಯವಾಗುತ್ತದೆ. ಸಮುದಾಯದವರ ಹಣಕಾಸು ಸ್ಥಿತಿ ಉತ್ತಮ ಪಡಿಸಲು ಕೋ-ಆಪರೇಟೀವ್ ಸೊಸೈಟಿ ಮುಂದಾಗಿರುವುದು ಶ್ಲಾಘನೀಯ. ನಿಮ್ಮ ಕಾರ್ಯಕ್ರಮಗಳಿಗೆ ಸಮುದಾಯವು ಬೆನ್ನೆಲುಬಾಗಿ ನಿಲ್ಲಲಿದೆ ಎಂದು ನುಡಿದರು.

ಸೊಸೈಟಿಯ ಅಧ್ಯಕ್ಷ ಕೆ.ಎನ್.ಮಂಜುನಾಥ ರಾವ್ ಬಾಂಗ್ರೆ ಮಾತನಾಡಿ, ಕೇವಲ ಎರಡೂವರೆ ವರ್ಷದಲ್ಲಿ ಸೊಸೈಟಿಯು 650 ಕ್ಕೂ ಹೆಚ್ಚು ಶೇರುದಾರರಿಂದ 2 ಕೋಟಿ ರು.ಗೂ ಹೆಚ್ಚಿನ ನಿಶ್ಚಿತ ಠೇವಣಿ ಹೊಂದಿ ಅಭಿವೃದ್ಧಿ ಪಥದಲ್ಲಿ ಸಾಗಿದೆ. ಮಹಿಳಾ ಶೇರುದಾರರ ಸಂಖ್ಯೆಯೇ ಹೆಚ್ಚಿರುವುದು ಹೆಮ್ಮೆಯ ಸಂಗತಿ ಆಗಿದೆ ಎಂದರು.

ಇದೇ ಸಂದರ್ಭದಲ್ಲಿ 40ಕ್ಕೂ ಹೆಚ್ಚು ಫಲಾನುಭವಿಗಳಿಗೆ ಆಧುನಿಕ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು. ಸೊಸೈಟಿ ಉಪಾಧ್ಯಕ್ಷ ಕೆ.ಜಿ.ದೇವೇಂದ್ರ, ಕಾರ್ಯದರ್ಶಿ ಪಿ.ಸುರೇಶ್, ನಿರ್ದೇಶಕರಾದ ನಾಗರಾಜರಾವ್, ಟಿ.ಕೆ.ಗೀತಾರಾಜು, ಮಮತಾ ಮುಕುಂದರಾವ್, ಎಂ.ಎನ್.ಪುಂಡಲೀಕರಾವ್, ಕೆ.ಎನ್.ಪುಂಡಲೀಕರಾವ್,ಟೈಲರ್ ರಾಜು, ರವಿ. ಸತೀಶ್, ಕೃಷ್ಣಮೂರ್ತಿ, ಕೆ.ಎನ್.ಅಜಯ್, ಸಮಾಜದ ಬಂಧುಗಳು ಮತ್ತಿತರರು ಇದ್ದರು.