ರಾಜ್ಯದಲ್ಲೂ ಕೆಮ್ಮಿನ ಸಿರಪ್‌ ಮೇಲೆ ನಿಗಾ

| N/A | Published : Oct 05 2025, 01:00 AM IST / Updated: Oct 05 2025, 08:18 AM IST

Cough Syrup Warning

ಸಾರಾಂಶ

ರಾಜಸ್ಥಾನ, ಮಧ್ಯಪ್ರದೇಶ ಮತ್ತಿತರ ಕಡೆ ಕೆಮ್ಮಿನ ಸಿರಪ್‌ನಿಂದಾಗಿ ಮಕ್ಕಳು ಮೃತಪಟ್ಟ ಪ್ರಕರಣಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಕೆಮ್ಮಿನ ಸಿರಪ್‌ಗಳ ಮೇಲೆ ನಿಗಾ ವಹಿಸುವಂತೆ ರಾಜ್ಯದ ಔಷಧಿ ನಿಯಂತ್ರಣ ಅಧಿಕಾರಿಗಳಿಗೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಸೂಚಿಸಿದ್ದಾರೆ.

  ಬೆಂಗಳೂರು :  ರಾಜಸ್ಥಾನ, ಮಧ್ಯಪ್ರದೇಶ ಮತ್ತಿತರ ಕಡೆ ಕೆಮ್ಮಿನ ಸಿರಪ್‌ನಿಂದಾಗಿ ಮಕ್ಕಳು ಮೃತಪಟ್ಟ ಪ್ರಕರಣಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಕೆಮ್ಮಿನ ಸಿರಪ್‌ಗಳ ಮೇಲೆ ನಿಗಾ ವಹಿಸುವಂತೆ ರಾಜ್ಯದ ಔಷಧಿ ನಿಯಂತ್ರಣ ಅಧಿಕಾರಿಗಳಿಗೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಸೂಚಿಸಿದ್ದಾರೆ.

ಈ ಬಗ್ಗೆ ಶನಿವಾರ ಮಾತನಾಡಿದ ಅವರು, ನಮ್ಮ ರಾಜ್ಯಕ್ಕೆ ಆ ಕೋಲ್ಡ್ ಸಿರಪ್ (ಕೋಲ್ಡ್ರೀಫ್ ಕಫ್‌ ಸಿರಪ್‌) ಪೂರೈಕೆ ಆಗಿಲ್ಲ. ಖಾಸಗಿಯಾಗಿ ತರಿಸಿಕೊಂಡಿದ್ದಾರಾ ಎಂಬ ಬಗ್ಗೆ ಪರೀಶೀಲಿಸುವಂತೆ ಸೂಚಿಸಿದ್ದೇನೆ. ಅಲ್ಲದೆ, ಮುಂಜಾಗ್ರತಾ ಕ್ರಮವಾಗಿ ಕರ್ನಾಟಕದಲ್ಲಿ ಬೇರೆ ಬ್ರಾಂಡ್‌ಗಳ ಕೆಮ್ಮಿನ ಸಿರಪ್‌ಗಳ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಅದರ ಬಗ್ಗೆ ತಿಳಿಸುತ್ತೇವೆ ಎಂದರು.

ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಔಷಧ ನಿಯಂತ್ರಣ ಇಲಾಖೆಯೊಂದಿಗೆ ಮಾತನಾಡಿದ್ದೇವೆ. ಕರ್ನಾಟಕದಲ್ಲಿ ಎಲ್ಲೂ ಕೋಲ್ಡ್ರೀಫ್‌ ವಿತರಣೆ ಆಗಿಲ್ಲ. ಆದರೂ ಆ ಕಂಪನಿಯ ಇತರೆ ಔಷಧಗಳು ಪೂರೈಕೆ ಆಗಿದೆಯೇ ಎಂಬುದರ ಬಗ್ಗೆಯೂ ತಪಾಸಣೆ ನಡೆಸಲು ತಿಳಿಸಲಾಗಿದೆ ಎಂದು ಹೇಳಿದರು.

ತಮಿಳುನಾಡಿನ ಕೆಲ ಜಿಲ್ಲೆಗಳಿಗೆ ಮಾತ್ರ ಈ ಸಿರಪ್ ಸರಬರಾಜಾಗಿದ್ದು, ಲ್ಯಾಬ್ ವರದಿಗಳಲ್ಲಿ ಔಷಧಿಯಿಂದ ತೊಂದರೆಯಾಗಿರುವುದು ದೃಢಪಟ್ಟಿದೆ. ಇದರ ಪರಿಣಾಮವಾಗಿ ಔಷಧಿ ತಯಾರಿಕೆ ನಿಲ್ಲಿಸಲಾಗಿದೆ. ದೇಶಾದ್ಯಂತ ಕೋಲ್ಡ್ರೀಫ್ ಸಿರಪ್‌ನ ಮಾರಾಟ ನಿಷೇಧಿಸಲಾಗಿದ್ದು, ಜನರಿಗೆ ಈ ಬಗ್ಗೆ ಅರಿವು ಮೂಡಿಸಲಾಗಿದೆ ಎಂದರು.

ಕಟ್ಟುನಿಟ್ಟಾಗಿ ತಪಾಸಣೆ:  ರಾಜ್ಯದಲ್ಲಿ ಔಷಧ ತಯಾರಿಕ ಕಂಪನಿಗಳ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ. ಜತೆಗೆ ಔಷಧಿಗಳ ಪರೀಕ್ಷೆ ಮತ್ತು ತಪಾಸಣೆ ಅತ್ಯಂತ ಕಟ್ಟುನಿಟ್ಟಾಗಿ ನಡೆಯುತ್ತದೆ. ಆದರೆ, ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಇಂತಹ ವ್ಯವಸ್ಥೆ ಇಲ್ಲ ಎಂದ ಸಚಿವರು, ಕರ್ನಾಟಕದ ಮಾದರಿಯನ್ನೇ ಎಲ್ಲಾ ರಾಜ್ಯಗಳಿಗೆ ಅಳವಡಿಸಲು ಕೇಂದ್ರ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿದೆ ಎಂದರು. ಎಚ್ಚರಿಕೆಯಿಂದ ಔಷಧಿಗಳನ್ನು ಬಳಸಲು ಸೂಚಿಸಲಾಗಿದೆ ಎಂದು ಹೇಳಿದರು.

Read more Articles on