ಕೋಟ ಅವರಿಂದ ತೆರವಾಗುವ ಪರಿಷತ್‌ ಸ್ಥಾನ : ಉಡುಪಿ ಮತ್ತು ದ.ಕ. ಬಿಜೆಪಿ ನಡುವೆ ಪೈಪೋಟಿ

| Published : Jun 18 2024, 12:56 AM IST / Updated: Jun 18 2024, 12:30 PM IST

ಕೋಟ ಅವರಿಂದ ತೆರವಾಗುವ ಪರಿಷತ್‌ ಸ್ಥಾನ : ಉಡುಪಿ ಮತ್ತು ದ.ಕ. ಬಿಜೆಪಿ ನಡುವೆ ಪೈಪೋಟಿ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿರುವ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಅವರ ವಿಧಾನ ಪರಿಷತ್‌ ಸ್ಥಾನ ತೆರವಾಗುತ್ತಿದೆ. ಈ ಸ್ಥಾನಕ್ಕೆ ಯಾರನ್ನು ನೇಮಕ ಮಾಡಬೇಕು ಹಾಗೂ ಯಾವ ಜಿಲ್ಲೆಗೆ ಅವಕಾಶ ನೀಡಬೇಕು ಎಂಬ ಬಗ್ಗೆ ಬಿಜೆಪಿಯಲ್ಲಿ ಚರ್ಚೆ ಆರಂಭವಾಗಿದೆ.

ಆತ್ಮಭೂಷಣ್‌

  ಮಂಗಳೂರು : ಲೋಕಸಭಾ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿರುವ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಅವರ ವಿಧಾನ ಪರಿಷತ್‌ ಸ್ಥಾನ ತೆರವಾಗುತ್ತಿದೆ. ಈ ಸ್ಥಾನಕ್ಕೆ ಯಾರನ್ನು ನೇಮಕ ಮಾಡಬೇಕು ಹಾಗೂ ಯಾವ ಜಿಲ್ಲೆಗೆ ಅವಕಾಶ ನೀಡಬೇಕು ಎಂಬ ಬಗ್ಗೆ ಬಿಜೆಪಿಯಲ್ಲಿ ಚರ್ಚೆ ಆರಂಭವಾಗಿದೆ. 

ಪಕ್ಷದ ಉನ್ನತ ಮೂಲಗಳ ಪ್ರಕಾರ ಮತ್ತೆ ಉಡುಪಿ ಜಿಲ್ಲೆಯವರಿಗೆ ಅವಕಾಶ ನೀಡುವ ಸಾಧ್ಯತೆ ದಟ್ಟವಾಗಿದೆ. ಈ ನಡುವೆ ದ.ಕ.ಜಿಲ್ಲೆಗೆ ಅವಕಾಶ ನೀಡುವಂತೆ ತೆರೆಮರೆಯ ಕಸರತ್ತು ಆರಂಭಗೊಂಡಿದೆ.ಕೋಟ ಶ್ರೀನಿವಾಸ ಪೂಜಾರಿ ಉಡುಪಿ ಕ್ಷೇತ್ರದ ಕೋಟದವರು. ಸ್ಥಳೀಯಾಡಳಿತಗಳ ಪ್ರತಿನಿಧಿಯಾಗಿ ದ್ವಿಸದಸ್ಯ ಕ್ಷೇತ್ರದ ಅವಿಭಜಿತ ದ.ಕ.ಜಿಲ್ಲೆಯಿಂದ ಆಯ್ಕೆಗೊಂಡು, ನಾಲ್ಕನೇ ಬಾರಿ ಪರಿಷತ್‌ ಸದಸ್ಯರಾಗಿದ್ದರು. ಸ್ಥಳೀಯಾಡಳಿತದಿಂದ 1998-2004ರ ವರೆಗೆ ದ.ಕ. ಮೂಲದ ಅಣ್ಣಾ ವಿನಯಚಂದ್ರ ಹೊರತುಪಡಿಸಿದರೆ 2008-2010, 2010-2016, 2016-2020 ಹಾಗೂ 2022 ರಿಂದ ಪರಿಷತ್‌ ಸದಸ್ಯರಾಗಿ ಕೋಟ ಶ್ರೀನಿವಾಸ ಪೂಜಾರಿ ಮುಂದುವರಿದಿದ್ದಾರೆ. 

2012-2014ರ ಅವಧಿಯಲ್ಲಿ ಮಂಗಳೂರಿನ ಹಿರಿಯ ವಕೀಲ ಮೋನಪ್ಪ ಭಂಡಾರಿ ಆಯ್ಕೆಯಾಗಿದ್ದರು.ದ.ಕ.ಗೆ ಸಿಕ್ಕಿತೇ ಅವಕಾಶ?:2014ರ ಬಳಿಕ ಕಳೆದ 10 ವರ್ಷಗಳಿಂದ ಸ್ಥಳೀಯಾಡಳಿತದಿಂದ ಆಯ್ಕೆಯ ಈ ಪರಿಷತ್‌ ಸ್ಥಾನಕ್ಕೆ ಬಿಜೆಪಿಯಲ್ಲಿ ದ.ಕ. ಜಿಲ್ಲೆಯವರಿಗೆ ಅವಕಾಶ ಲಭಿಸಿಲ್ಲ. ದ.ಕ. ಜಿಲ್ಲೆಯಲ್ಲಿ ಬಿಲ್ಲವರ ಪ್ರಾಬಲ್ಯ ಇದ್ದರೂ ಬಿಜೆಪಿ ವರಿಷ್ಠರು ಕರಾವಳಿಯಲ್ಲಿ ಒಂದು ಸ್ಥಾನವನ್ನು ಪರಿಷತ್ತಿಗೆ ನೀಡುವ ಮೂಲಕ ಕೋಟ ಶ್ರೀನಿವಾಸ ಪೂಜಾರಿ ಅವರನ್ನೇ ಮುಂದುವರಿಸಿದ್ದರು. 

ಅಸೆಂಬ್ಲಿ ಚುನಾವಣೆಯಲ್ಲಿ ಮೂಡುಬಿದಿರೆ ಕ್ಷೇತ್ರದಲ್ಲಿ ಬಿಲ್ಲವ ಅಭ್ಯರ್ಥಿ ಮರು ಆಯ್ಕೆಗೆ ಅವಕಾಶ ನೀಡಲಾಗಿತ್ತು.ಕೋಟ ಅವರು ಉಡುಪಿ ಕ್ಷೇತ್ರದವರು. ಹಾಗಾಗಿ ಮತ್ತೆ ಅಲ್ಲಿಗೆ ಪ್ರಾತಿನಿಧ್ಯ ನೀಡಬೇಕೇ ಎಂಬ ಬಗ್ಗೆ ಚರ್ಚೆ ಆರಂಭವಾಗಿದೆ. ಕೋಟ ಶ್ರೀನಿವಾಸ ಪೂಜಾರಿ ಅವರ ಪರಿಷತ್‌ ಅವಧಿ ಇನ್ನೂ ಮೂರೂವರೆ ವರ್ಷ ಇದೆ. ಆ ಸ್ಥಾನಕ್ಕೆ ಉಡುಪಿ ಮಾತ್ರವಲ್ಲ ದ.ಕ. ಅಥವಾ ಉತ್ತರ ಕನ್ನಡ ಜಿಲ್ಲೆಯಿಂದ ಆಯ್ಕೆಗೆ ಮುಂದಾಗಬೇಕು ಎಂಬ ಮಾತೂ ಪಕ್ಷ ವಲಯದಲ್ಲಿ ಕೇಳಿಬರುತ್ತಿದೆ.

 ಬಿಲ್ಲವ ಪ್ರಾಬಲ್ಯ ಅಧಿಕವಾಗಿರುವ ದ.ಕ.ದಿಂದ ಆಯ್ಕೆ ಮಾಡುವಂತೆ ಸಮುದಾಯ ಮುಖಂಡರು ಪಕ್ಷ ನಾಯಕರನ್ನು ಸಂಪರ್ಕಿಸಿ ಆಗ್ರಹಿಸುತ್ತಿದ್ದಾರೆ.ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿಗಳ ಸ್ಥಳೀಯಾಡಳಿತ ಚುನಾವಣೆ ಡಿಸೆಂಬರ್‌ ವೇಳೆಗೆ ನಡೆಯಲಿದೆ. ಅದಕ್ಕೂ ಮುನ್ನ ಪರಿಷತ್‌ ಸ್ಥಾನಕ್ಕೆ ಉಪ ಚುನಾವಣೆ ನಡೆಯುವ ಸಾಧ್ಯತೆ ಇದೆ.ಯಾರಿಗೆ ಅವಕಾಶ ಸಾಧ್ಯತೆ?ದ.ಕ.ಜಿಲ್ಲೆಯಿಂದ ಈ ಪರಿಷತ್‌ ಸ್ಥಾನಕ್ಕೆ ಹಿಂದೆ ಕಿಯೋನಿಕ್ಸ್‌ ಅಧ್ಯಕ್ಷರಾಗಿದ್ದ ಹಿರಿಯ ಮುಖಂಡ ಹರಿಕೃಷ್ಣ ಬಂಟ್ವಾಳ್‌, ಪಕ್ಷ ಸಂಘಟಕ, ದ.ಕ. ಬಿಜೆಪಿ ಮಾಜಿ ಅಧ್ಯಕ್ಷ ಸುದರ್ಶನ್‌ ಮೂಡುಬಿದಿರೆ, ಇವರಲ್ಲದೆ ಬಿಲ್ಲವೇತರ ಸಮುದಾಯದಲ್ಲಿ ಉಡುಪಿ ಬಿಜೆಪಿ ಮುಖಂಡ ಉದಯ ಕುಮಾರ್‌ ಶೆಟ್ಟಿ, ಮಾಜಿ ಶಾಸಕ ಪ್ರಮೋದ್‌ ಮಧ್ವರಾಜ್‌, ಮೋನಪ್ಪ ಭಂಡಾರಿ, ವಿಕಾಸ್‌ ಪಿ. ಹೆಸರೂ ಕೇಳಿಬರುತ್ತಿವೆ.

ದ.ಕ.ಜಿಲ್ಲೆಯಲ್ಲಿ ಮಂಗಳೂರು ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿಲ್ಲ. ಹೀಗಾಗಿ ಹಾಲಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲಗೆ ಅವಕಾಶ ನೀಡಿದರೆ ಆ ಕೊರತೆಯನ್ನು ನೀಗಿದಂತಾಗುತ್ತದೆ, ಬಿಲ್ಲವ ಸಮುದಾಯಕ್ಕೂ ಮತ್ತೆ ಪ್ರಾತಿನಿಧ್ಯ ನೀಡಿದಂತಾಗುತ್ತದೆ ಎಂಬ ಅಭಿಪ್ರಾಯವೂ ಪಕ್ಷ ವಲಯದಿಂದ ವ್ಯಕ್ತವಾಗಿದೆ.ಉಭಯ ಜಿಲ್ಲೆಯ ಪ್ರಭಾರಿಯಾಗಿದ್ದ ಉಡುಪಿಯ ಉದಯ ಕುಮಾರ್‌ ಶೆಟ್ಟಿ ಅವರ ಬಗ್ಗೆ ಸ್ಥಳೀಯವಾಗಿ ಹಾಗೂ ಪಕ್ಷದ ನಾಯಕರು ಹೆಚ್ಚಿನ ಒಲವು ಹೊಂದಿರುವುದಾಗಿ ಹೇಳಲಾಗಿದೆ. ಇದನ್ನು ಹೊರತುಪಡಿಸಿ ಅಷ್ಟಾಗಿ ರಾಜಕೀಯ ಪ್ರತಿನಿಧ್ಯ ಹೊಂದಿಲ್ಲದ ವಿಶ್ವಕರ್ಮ, ಗಾಣಿಗ, ಕುಲಾಲ ಸಮುದಾಯಕ್ಕೆ ಅವಕಾಶ ನೀಡಬೇಕು ಎಂಬ ಆಗ್ರಹವೂ ಕೇಳಿಬರುತ್ತಿದೆ.