ಬನವಾಸಿ ಕದಂಬೋತ್ಸವಕ್ಕೆ ಕ್ಷಣಗಣನೆ: ಇಂದು ಸಿಎಂ ಚಾಲನೆ

| Published : Mar 05 2024, 01:35 AM IST

ಸಾರಾಂಶ

ಕನ್ನಡದ ಮೊದಲ ರಾಜಧಾನಿ ಬನವಾಸಿಯಲ್ಲಿ ಮಾ. ೫ ಮತ್ತು ೬ರಂದು ನಡೆಯಲಿರುವ ಕದಂಬೋತ್ಸವಕ್ಕೆ ಸಿದ್ಧತೆಗಳು ಪೂರ್ಣಗೊಂಡಿದ್ದು, ಬನವಾಸಿಯ ಸುತ್ತಮುತ್ತಲಿನ ಗ್ರಾಮಗಳು ತಳಿರು-ತೋರಣಗಳಿಂದ ಶೃಂಗಾರಗೊಂಡಿವೆ.

ಶಿರಸಿ:

ಕನ್ನಡದ ಮೊದಲ ರಾಜಧಾನಿ ಬನವಾಸಿಯಲ್ಲಿ ಮಾ. ೫ ಮತ್ತು ೬ರಂದು ನಡೆಯಲಿರುವ ಕದಂಬೋತ್ಸವಕ್ಕೆ ಸಿದ್ಧತೆಗಳು ಪೂರ್ಣಗೊಂಡಿದ್ದು, ಬನವಾಸಿಯ ಸುತ್ತಮುತ್ತಲಿನ ಗ್ರಾಮಗಳು ತಳಿರು-ತೋರಣಗಳಿಂದ ಶೃಂಗಾರಗೊಂಡಿವೆ.

ಕದಂಬೋತ್ಸವ ಮೈದಾನದಲ್ಲಿ ಪೆಂಡಾಲ್ ಹಾಕುವ ಕಾರ್ಯ ಮುಕ್ತಾಯಗೊಂಡಿದೆ. ೪,೫೦೦ಕ್ಕೂ ಅಧಿಕ ಖುರ್ಚಿ ಹಾಕಲಾಗಿದ್ದು, ಅಗತ್ಯವಿದ್ದರೆ ಇನ್ನೂ ಜಾಸ್ತಿ ಆಸನ ವ್ಯವಸ್ಥೆ ಮಾಡಲಾಗುತ್ತದೆ. ಕದಂಬೋತ್ಸದ ಮುಖ್ಯ ವೇದಿಕೆ ಬಳಿ ೧೫ಕ್ಕೂ ಅಧಿಕ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಕದಂಬೋತ್ಸವ ಮೈದಾನದಲ್ಲಿಯೇ ತೋಟಗಾರಿಕೆ ಇಲಾಖೆ ನಡೆಸುವ ಫಲಪುಷ್ಪ ಪ್ರದರ್ಶನಕ್ಕೂ ಸಿದ್ಧತೆಗಳು ಭರದಿಂದ ನಡೆದಿವೆ. ಹೂವುಗಳ ಜೋಡಣೆ, ಪ್ರದರ್ಶನದ ಆಕರ್ಷಣೆಯಾದ ಬನವಾಸಿಯ ಮಧುಕೇಶ್ವರ ದೇವರ ಪುಷ್ಪ ಮೂರ್ತಿ ತಯಾರಿಕೆ ನಡೆದಿದೆ.ಕದಂಬೋತ್ಸವದ ಪೂರ್ವ ಸಿದ್ಧತೆ ಪರಿಶೀಲಿಸಿದ ಶಾಸಕರಾದ ಶಿವರಾಮ ಹೆಬ್ಬಾರ, ಭೀಮಣ್ಣ ನಾಯ್ಕ ಅಧಿಕಾರಿಗಳಿಗೆ ಕೆಲ ಅಗತ್ಯ ಸಲಹೆ-ಸೂಚನೆ ನೀಡಿದರು.ಮಾಧ್ಯಮದೊಂದಿಗೆ ಮಾತನಾಡಿದ ಶಿವರಾಮ ಹೆಬ್ಬಾರ್, ಬನವಾಸಿಯ ಕದಂಬೋತ್ಸವ ನಾಡಿನ ಹೆಮ್ಮೆಯ ಕಾರ್ಯಕ್ರಮಗಳಲ್ಲಿ ಒಂದು. ಫಲಪುಷ್ಪ ಪ್ರದರ್ಶನವನ್ನು ಈ ಬಾರಿ ಬನವಾಸಿಯಲ್ಲಿ ಕದಂಬೋತ್ಸವದೊಂದಿಗೆ ಜೋಡಿಸಿರುವುದು ವಿಶೇಷವಾಗಿದೆ. ಈ ವರ್ಷ ಕದಂಬೋತ್ಸವವನ್ನು ವ್ಯವಸ್ಥಿತವಾಗಿ ಆಚರಿಸಬೇಕು ಎಂಬ ಉದ್ದೇಶ ನಮ್ಮದಾಗಿದೆ. ಮಂಗಳವಾರ ಸಂಜೆ ೬ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕದಂಬೋತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದರು.ಕನ್ನಡದ ಕಂಪು ಎಲ್ಲೆಡೆ ಹರಡಬೇಕು, ಬನವಾಸಿಯ ವಿಶೇಷತೆಗಳು ನಾಡಿಗೆ ತಲುಪಬೇಕು ಎಂಬುದು ಕದಂಬೋತ್ಸವದ ಮೂಲ ಉದ್ದೇಶ. ಇದು ಕೇವಲ ಬನವಾಸಿ, ಶಿರಸಿ ಕದಂಬೋತ್ಸವ ಆಗಬಾರದು. ಕದಂಬೋತ್ಸವ ರಾಜ್ಯದ ನಾಲ್ಕು ಪ್ರಮುಖ ಉತ್ಸವಗಳಲ್ಲಿ ಒಂದಾಗಿ ಗೆಜೆಟ್‌ನಲ್ಲಿಯೂ ಸೇರ್ಪಡೆ ಆಗಿದೆ. ರಾಜ್ಯದ ಮೂಲೆ ಮೂಲೆಯಿಂದಲೂ ಜನ ಬರಬೇಕು ಎಂಬುದು ನಮ್ಮ ಆಶಯ. ಈಗಾಗಲೇ ಪಂಪ ಪ್ರಶಸ್ತಿ ಪುರಸ್ಕೃತ ಸಾಹಿತಿ ನಾ. ಡಿಸೋಜಾ ಅವರನ್ನು ಮನೆಗೆ ಹೋಗೇ ಕರೆದಿದ್ದಾರೆ ಎಂದು ಹೆಬ್ಬಾರ್‌ ಮಾಹಿತಿ ನೀಡಿದರು.

ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಬನವಾಸಿಯಲ್ಲಿ ರಾಜ್ಯ ಸರ್ಕಾರದಿಂದ ಆಚರಿಸುವ ಕದಂಬೋತ್ಸವಕ್ಕೆ ಎಲ್ಲ ಸಿದ್ಧತೆಗಳು ನಡೆಯುತ್ತಿವೆ. ಜಿಲ್ಲೆ, ಹೊರ ಜಿಲ್ಲೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು. ಬನವಾಸಿ ಸುತ್ತಮುತ್ತಲಿನ ಹಳ್ಳಿಯ ನಿವಾಸಿಗಳು ಕದಂಬೋತ್ಸವಕ್ಕೆ ಆಗಮಿಸಲು ಅನುಕೂಲವಾಗಲೆಂದು ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗಿದೆ ಎಂದರು.ಶಿರಸಿ ಸಹಾಯಕ ಆಯುಕ್ತೆ ಅಪರ್ಣಾ ರಮೇಶ, ತಹಸೀಲ್ದಾರ್ ಶ್ರೀಧರ ಮುಂದಲಮನಿ, ತಾಪಂ ಇಒ ಸತೀಶ ಹೆಗಡೆ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಟರಾಜ, ದೀಪಕ ಹೆಗಡೆ ದೊಡ್ಡೂರು, ಗಣೇಶ ದಾವಣಗೆರೆ, ಶಿವಾಜಿ ಬನವಾಸಿ, ಬಸವರಾಜ ದೊಡ್ಮನಿ, ಸಿ.ಎಫ್. ನಾಯ್ಕ ಇದ್ದರು.

ಕದಂಬೋತ್ಸವಕ್ಕೆ ರಾಜ್ಯ ಸರ್ಕಾರ ₹ ೨ ಕೋಟಿ ಅನುದಾನವನ್ನು ಈಗಾಗಲೇ ಬಿಡುಗಡೆ ಮಾಡಿದ್ದು, ಕಳೆದ ಕದಂಬೋತ್ಸವದಲ್ಲಿ ಹೆಚ್ಚುಳಿದಿದ್ದ ₹ ೫೦ ಲಕ್ಷವನ್ನೂ ಬಳಕೆ ಮಾಡುತ್ತೇವೆ ಎಂದು ಶಾಸಕ ಶಿವರಾಮ ಹೆಬ್ಬಾರ್‌ ಹೇಳಿದರು.