ಕೊಪ್ಪಳ: ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ಚುನಾವಣಾ ಫಲಿತಾಂಶಗಳು ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಿಂದ ನಿರ್ಗಮಿಸುವ ಕ್ಷಣಗಣನೆಯ ಆರಂಭದ ಸೂಚಕ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ಹೇಳಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ತಮಿಳುನಾಡು, ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ರಾಜ್ಯಗಳಲ್ಲಿ ಕಾಂಗ್ರೆಸ್ ಅಸ್ತಿತ್ವದಲ್ಲಿ ಇದೆಯೇ ಎಂಬುದನ್ನು ಹುಡುಕುವ ಪರಿಸ್ಥಿತಿ ಬಂದಿದೆ. ಕೇರಳದಲ್ಲಿ ಆಡಳಿತ ವಿರೋಧದ ಅಲೆಗೆ ಮತದಾರರು ಮತ ಚಲಾಯಿಸಿದ್ದಾರೆ. ಗುಂಪುಗಾರಿಕೆ ಹಾಗೂ ದೂರದೃಷ್ಟಿ ಕೊರತೆಯ ನಾಯಕತ್ವದ ಫಲವಾಗಿ ಕಾಂಗ್ರೆಸ್ ಸಂಪೂರ್ಣವಾಗಿ ನೆಲ ಕಚ್ಚಿದೆ. ಕರ್ನಾಟಕದಲ್ಲಿ ಅಧಿಕಾರ ಲಾಲಸೆ ಹಾಗೂ ಒಳಜಗಳದಿಂದ ಆ ಪಕ್ಷ ಜನರ ವಿಶ್ವಾಸ ಕಳೆದುಕೊಂಡಿದೆ ಎಂದು ಹೇಳಿದ್ದಾರೆ.

ಚುನಾವಣೆ ನಡೆದ ಪ್ರದೇಶಗಳಲ್ಲಿ ಎನ್‌ಡಿಎ ಒಕ್ಕೂಟದ ಮತ ಗಳಿಕೆ ಪ್ರಮಾಣ ಗಮನಾರ್ಹವಾಗಿ ಏರಿಕೆಯಾಗಿದೆ. ಒಕ್ಕೂಟದ ನಾಗಾಲೋಟ ಮುಂದುವರಿದಿದೆ. ಇದರಿಂದ ಪ್ರೇರೇಪಿತವಾಗಿ ಕರ್ನಾಟಕದಲ್ಲಿ ಮೈತ್ರಿಕೂಟ ಮತ್ತಷ್ಟು ಸಂಘಟನೆಗೊಂಡು ಕಾಂಗ್ರೆಸ್ ಅಧಿಕಾರದಿಂದ ಕಿತ್ತು ಎಸೆಯುವುದು ನಿಶ್ಚಿತ ಎಂದು ತಿಳಿಸಿದ್ದಾರೆ.

ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಮತಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ. ಸ್ವತಃ ಮುಖ್ಯಮಂತ್ರಿ ಹಾಗೂ ಅವರ ಸಂಪುಟದ ಸದಸ್ಯರು ಬಾಗಲಕೋಟೆಯಲ್ಲಿ ಗೆಲುವಿಗಾಗಿ ಠಿಕಾಣಿ ಹೂಡಿದರು. ದಾವಣಗೆರೆಯಲ್ಲಿ ಆ ಪಕ್ಷದ ಸಾಂಪ್ರದಾಯಕ ಮತ ಬ್ಯಾಂಕ್ ವಿಭಜನೆಗೊಂಡಿದೆ. ಇವು ಕಾಂಗ್ರೆಸ್ ಪಕ್ಷದ ಪತನದ ಸೂಚನೆಗಳು ಎಂದು ಹೇಳಿದ್ದಾರೆ.ಬಿಜೆಪಿ ಪರ ಒಲವು ದೇಶದಲ್ಲಿ ಸ್ಪಷ್ಟ-ಸುರೇಶ ಭೂಮರಡ್ಡಿ:

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಒಕ್ಕೂಟದಲ್ಲಿ ಮತದಾರ ವಿಶ್ವಾಸ ಇಟ್ಟಿರುವುದು ನಾಲ್ಕು ರಾಜ್ಯಗಳ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಚುನಾವಣಾ ಫಲಿತಾಂಶಗಳಲ್ಲಿ ಸ್ಪಷ್ಟವಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ್ ಭೂಮರಡ್ಡಿ ಹೇಳಿದರು.ಈ ಕುರಿತು ಪ್ರಕಟಣೆ ನೀಡಿರುವ ಅವರು, ಪಶ್ಚಿಮ ಬಂಗಾಳದಲ್ಲಿ ಒಕ್ಕೂಟದ ಗೆಲುವು ಐತಿಹಾಸಿಕ. ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಚುನಾವಣಾ ತಂತ್ರಗಾರಿಕೆ, ಉತ್ತರ ಪ್ರದೇಶ ಮತ್ತು ಅಸ್ಸಾಂ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್ ಮತ್ತು ಹಿಮಂತ್ ಬಿಸ್ವ ಶರ್ಮ ಅವರ ತಳಮಟ್ಟದ ಸಂಘಟನಾ ಕಾರ್ಯ ಫಲಿಸಿದೆ. ಅಸ್ಸಾಂನಲ್ಲಿ ಮೂರನೇ ಬಾರಿಗೆ ನಮ್ಮ ಮೈತ್ರಿ ಪಕ್ಷ ಅಧಿಕಾರಕ್ಕೆ ಬಂದಿದೆ. ಪುದುಚೇರಿಯಲ್ಲಿ ಒಕ್ಕೂಟ ಭಾರಿ ಗೆಲುವು ದಾಖಲಿಸಿದೆ. ಇಂಡಿ ಒಕ್ಕೂಟ ಎನ್‌ಡಿಎ ಒಕ್ಕೂಟಕ್ಕೆ ಸಮವಲ್ಲ ಎಂಬುದನ್ನು ಫಲಿತಾಂಶ ಸಾಬೀತುಪಡಿಸಿವೆ ಎಂದು ಹೇಳಿದ್ದಾರೆ.ಮೈತ್ರಿ ಪಕ್ಷದ ನಾಯಕರು ಮತ್ತು ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣದಲ್ಲಿ ವ್ಯಾಪಕ ಪ್ರಚಾರ ಮಾಡಿದರು. ಇದರಿಂದಾಗಿ ಕಾಂಗ್ರೆಸ್ ನಿರೀಕ್ಷಿತ ಪ್ರಮಾಣದಲ್ಲಿ ಮತ ಪಡೆಯಲಾಗಲಿಲ್ಲ. ಉಪಚುನಾವಣೆಗಳಲ್ಲಿ ಆಡಳಿತ ಪಕ್ಷ ಗೆಲ್ಲುವುದು ಸಹಜ. ಹಣ ಬಲ, ತೋಳ್ಬಲ ಹಾಗೂ ಅಧಿಕಾರ ದುರುಪಯೋಗಪಡಿಸಿಕೊಂಡು ಆ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ನಮ್ಮ ಮೈತ್ರಿ ಪಕ್ಷಗಳ ಒಗ್ಗಟ್ಟಿಗೆ ಮತದಾರ ವಿಶ್ವಾಸ ವ್ಯಕ್ತಪಡಿಸಿರುವುದು ಗಮನಾರ್ಹ ಎಂದು ತಿಳಿಸಿದ್ದಾರೆ.