ಕನ್ನಡ ನುಡಿ ಸಂಭ್ರಮಕ್ಕೆ ಸಕಲ ಸಿದ್ಧತೆ

| Published : Feb 01 2024, 02:03 AM IST

ಸಾರಾಂಶ

ನ್ನಡ ನುಡಿ ಸಂಭ್ರಮಕ್ಕೆ ಕ್ಷಣಗಣನೆ ಆರಂಭಗೊಂಡಿರುವಂತೆಯೇ ಪಟ್ಟಣ ಕನ್ನಡಮಯವಾಗುತ್ತಿದೆ.

ಕನ್ನಡಪ್ರಭ ವಾರ್ತೆ ಅಕ್ಕಿಆಲೂರು

ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಸಮಾರಂಭ ಆಯೋಜಿಸುತ್ತ ನಾಡಿನ ಮೂಲೆ-ಮೂಲೆಯಲ್ಲೂ ಪ್ರಚಲಿತದಲ್ಲಿರುವ ಅಕ್ಕಿಆಲೂರಿನಲ್ಲೀಗ ೩೨ನೇ ವರ್ಷದ ಕನ್ನಡ ನುಡಿ-ಸಂಭ್ರಮದ ಸಡಗರ-ಸಂಭ್ರಮ ಮನೆ ಮಾಡಿದೆ.

ಪಟ್ಟಣದ ಶ್ರೀ ದುಂಡಿಬಸವೇಶ್ವರ ಜನಪದ ಕಲಾ ಸಂಘದ ಆಶ್ರಯದಲ್ಲಿ ಕನ್ನಡ ನುಡಿ ಸಂಭ್ರಮ-೩೨ರ ವಿಶೇಷ ಸಾಂಸ್ಕೃತಿಕ ಸಮಾರಂಭ ಫೆ.೧ರಿಂದ ಫೆ.೩ ರವರೆಗೆ ಮೂರು ದಿನಗಳ ಕಾಲ ವೈಶಿಷ್ಟ್ಯಪೂರ್ಣವಾಗಿ ನೆರವೇರಲಿದ್ದು, ಸಮಾರಂಭದ ಹಿನ್ನೆಲೆ ಪೂರ್ವಭಾವಿಯಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಕನ್ನಡ ನುಡಿ ಸಂಭ್ರಮಕ್ಕೆ ಕ್ಷಣಗಣನೆ ಆರಂಭಗೊಂಡಿರುವಂತೆಯೇ ಪಟ್ಟಣ ಕನ್ನಡಮಯವಾಗುತ್ತಿದೆ. ಇಲ್ಲಿನ ಮುತ್ತಿನಕಂತಿಮಠ ಗುರುಪೀಠದ ಆವರಣದಲ್ಲಿ ಪ್ರದಾನ ವೇದಿಕೆ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಬಹುತೇಕ ಪೂರ್ಣಗೊಂಡಿದೆ.

ಐತಿಹಾಸಿಕ ಹಿನ್ನೆಲೆಯುಳ್ಳ ಅಕ್ಕಿಆಲೂರಿನಲ್ಲಿ ಕನ್ನಡ ನಾಡು-ನುಡಿಯ ಜಾಗೃತ ಸಂದೇಶ ಸಾರುವ ಸಮಾರಂಭ ಇದಾಗಿದ್ದು, ನಾಡಿನ ಮೂಲೆ-ಮೂಲೆಗಳಿಂದ ಕನ್ನಡಾಭಿಮಾನಿಗಳ ದಂಡು ಇತ್ತ ಕಡೆ ಧಾವಿಸಲು ಕಾತರತೆಯಿಂದ ಎದುರು ನೋಡುತ್ತಿದೆ.

ಕನ್ನಡ ನುಡಿ ಸಂಭ್ರಮದಲ್ಲಿ ಇಂದು:

ಸಮಾರಂಭದಲ್ಲಿ ಫೆ.೧ರಂದು ಬೆಳಗ್ಗೆ ೧೦ಕ್ಕೆ ಕನ್ನಡ ಧ್ವಜಾರೋಹಣ ನೆರವೇರಲಿದ್ದು, ಕಸಾಪ ತಾಲೂಕಾಧ್ಯಕ್ಷ ಷಣ್ಮುಖಪ್ಪ ಮುಚ್ಚಂಡಿ ಧ್ವಜಾರೋಹಣ ನೆರವೇರಿಸುವರು. ಮಧ್ಯಾಹ್ನ ೩ಕ್ಕೆ ಕನ್ನಡ ತಾಯಿ ಭುವನೇಶ್ವರಿಯ ಭಾವಚಿತ್ರದ ಭವ್ಯ ಶೋಭಾಯಾತ್ರೆ ನೆರವೇರಲಿದ್ದು, ಅರ್ಬನ ಬ್ಯಾಂಕಿನ ಉಪಾಧ್ಯಕ್ಷ ಸಿದ್ರಾಮಪ್ಪ ವಿರುಪಣ್ಣನವರ ಶೋಭಾಯಾತ್ರೆಗೆ ಚಾಲನೆ ನೀಡುವರು. ಸಂಜೆ ೭ಕ್ಕೆ ಸಾಮಾಜಿಕ ಹೋರಾಟಗಾರ ಫಕ್ಕೀರಪ್ಪ ಹೋತನಹಳ್ಳಿ ನಡೆಯಲಿರುವ ಉದ್ಘಾಟನಾ ಸಮಾರಂಭದ ಉದ್ಘಾಟನೆಯನ್ನು ಇಳಕಲ್‌ನ ಶಂಭು ಬಳಿಗಾರ ನೆರವೇರಿಸಲಿದ್ದು, ಹಾವೇರಿ ಹುಕ್ಕೇರಿಮಠದ ಸದಾಶಿವ ಶ್ರೀಗಳು ಸಾನಿಧ್ಯ ವಹಿಸುವರು. ಬೆಂಗಳೂರಿನ ವಾಗ್ಮಿ ಕಿರಣಕುಮಾರ ವಿವೇಕಾಂಶಿ ವಿಶೇಷ ನುಡಿಯಾಡಲಿದ್ದು, ಸಂಘದ ಅಧ್ಯಕ್ಷ ಬಸವರಾಜ ಕೋರಿ ಅಧ್ಯಕ್ಷತೆ ವಹಿಸುವರು. ನಿವೃತ್ತ ಉಪನ್ಯಾಸಕ ವ್ಹಿ.ಪಿ. ಗುರಪ್ಪನವರ ಗುರುವಂದನೆ ಸ್ವೀಕರಿಸುವರು. ಶಾಸಕ ಶ್ರೀನಿವಾಸ್ ಮಾನೆ, ಆನಂದ ಗಡ್ಡದೇವರಮಠ, ತಹಶೀಲ್ದಾರ ರೇಣುಕಮ್ಮ ಸೇರಿದಂತೆ ಪ್ರಮುಖರು ಪಾಲ್ಗೊಳ್ಳುವರು. ರಾತ್ರಿ ೯ಗಂಟೆಯಿಂದ ಗಾನ ಸಂಭ್ರಮ, ನೃತ್ಯ ಸಂಭ್ರಮ, ವೀರಗಾಸೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸ್ನೇಹಜೀವಿ ಮೆಲೋಡೀಸ್, ಶಿರಸಿಯ ಮಧುರ ಗಾನ ಸಾಂಸ್ಕೃತಿಕ ವೇದಿಕ, ಸ್ಮಾರ್ಟ್‌ ಡ್ಯಾನ್ಸ್ ಗ್ರುಪ್, ಸಿದ್ಧೇಶ್ವರ ಸಂಘದವರು ಕಾರ್ಯಕ್ರಮ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.