ಜಲಾಶಯದ ಗರಿಷ್ಠ ಮಟ್ಟ 1819 ಅಡಿಯಾಗಿದ್ದು, ಮಂಗಳವಾರ ಬೆಳಗ್ಗೆ ಜಲಾಶಯದ ಮಟ್ಟ 1817.50 ಅಡಿಗೆ ತಲುಪಿದೆ. ಈ ಹಿನ್ನೆಲೆ ಅಧಿಕಾರಿಗಳು ಜಲಾಶಯದಿಂದ ನೀರು ಬಿಡುಗಡೆ ನಿರ್ಧಾರ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶರಾವತಿ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆ ಹಿನ್ನೆಲೆ ಲಿಂಗನಮಕ್ಕಿ ಜಲಾಶಯ ಭರ್ತಿಯತ್ತ ಸಾಗಿದೆ. ಜಲಾಶಯ ಭರ್ತಿಗೆ ಕೇವಲ ಒಂದೂವರೆ ಅಡಿ ಮಾತ್ರ ಬಾಕಿ ಇದ್ದು, ಮಂಗಳವಾರ ಜಲಾಶಯದ 11 ರೇಡಿಯಲ್‌ ಗೇಟ್‌ಗಳನ್ನು ತೆರೆದು 32,980 ಕ್ಯುಸೆಕ್‌ ನೀರು ನದಿಗೆ ಹರಿಸಲಾಗುತ್ತಿದೆ.

ಜಲಾಶಯದ ಗರಿಷ್ಠ ಮಟ್ಟ 1819 ಅಡಿಯಾಗಿದ್ದು, ಮಂಗಳವಾರ ಬೆಳಗ್ಗೆ ಜಲಾಶಯದ ಮಟ್ಟ 1817.50 ಅಡಿಗೆ ತಲುಪಿದೆ. ಈ ಹಿನ್ನೆಲೆ ಅಧಿಕಾರಿಗಳು ಜಲಾಶಯದಿಂದ ನೀರು ಬಿಡುಗಡೆ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಮೊದಲು ಆ.1ರಂದು ಮೂರು ರೇಡಿಯಲ್‌ ಗೇಟ್‌ ಮೂಲಕ 5 ಸಾವಿರ ಕ್ಯುಸೆಕ್‌ ನೀರು ಬಿಡುಗಡೆ ಮಾಡಲಾಗಿತ್ತು. ಬಳಿಕ ಮಳೆ ಪ್ರಮಾಣ ಹೆಚ್ಚಾದ ಕಾರಣ ಇದೀಗ ನೀರಿನ ಹೊರ ಹರಿವನ್ನು ಹೆಚ್ಚಿಸಲಾಗಿದೆ.

ಜಲಾಶಯಕ್ಕೆ ಸುಮಾರು 28,600 ಸಾವಿರ ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಜಲಾಶಯದ ಮಟ್ಟ 1817.50 ಅಡಿಗೆ ಏರಿಕೆಯಾಗಿದೆ. ಪೂರ್ಣಮಟ್ಟ ತಲುಪಲು ಒಂದೂವರೆ ಅಡಿ ಮಾತ್ರವಿದ್ದು, ಮಳೆ ಹೀಗೆಯೇ ಮುಂದುವರೆದಲ್ಲಿ ವಾರಾಂತ್ಯದಲ್ಲಿ ಜಲಾಶಯ ಭರ್ತಿಯಾಗಲಿದೆ.151 ಟಿಎಂಸಿ ಸಾಮಾರ್ಥ್ಯ ಹೊಂದಿರುವ ಲಿಂಗನಮಕ್ಕಿ ಜಲಾಶಯದಲ್ಲಿ ಪ್ರಸ್ತುತ 146.56 ಟಿಎಂಸಿ(ಶೇ.96.65) ನೀರು ಸಂಗ್ರಹವಿದೆ.

ಮರುಕಳಿಸಿದ ಜೋಗ ವೈಭವ:

ಕಳೆದ ಬಾರಿ ನೀರಿನ ಕೊರತೆ ಎದುರಿಸಿದ್ದ ಮಲೆನಾಡಿನಲ್ಲಿ ಈ ಬಾರಿ ಮಳೆ ಭೋರ್ಗರೆದಿದೆ. ಶರಾವತಿ ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರೆಯುತ್ತಿರುವುದರಿಂದ ಜಲಾಶಯ ಬಹುತೇಕ ಭರ್ತಿಯಾಗಿರುವುದರಿಂದ ಮಂಗಳವಾರ ಜಲಾಶಯದಿಂದ ಭಾರಿ ಪ್ರಮಾಣ ನೀರು ಹೊರಬಿಟ್ಟ ಪರಿಣಾಮ ವಿಶ್ವವಿಖ್ಯಾತ ಜೋಗ ಜಲಾಪಾತ ಮೈದುಂಬಿಕೊಂಡು ಭೋರ್ಗರೆಯುತ್ತಿದೆ.

ಜಲಪಾತದ ನಾಲ್ಕೂ ಧಾರೆಗಳಲ್ಲಿ ಧುಮ್ಮಿಕ್ಕುವ ಜಲಧಾರೆಯ ಸೌಂದರ್ಯ ಹೆಚ್ಚಿಸಿದ್ದು. ಬೆರಳೆಣಿಕೆ ಸಂಖ್ಯೆಯಲ್ಲಿದ್ದ ಪ್ರವಾಸಿಗರು ಈ ದೃಶ್ಯವನ್ನು ನೋಡಿ ಸಂತಸ ಪಟ್ಟರು.