ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಲೋಕಸಭಾ ಚುನಾವಣೆಯ ಮೊದಲ ಹಂತದಲ್ಲಿ ಕರ್ನಾಟಕದ ಕರಾವಳಿ ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಏ.14ರಂದು ಭೇಟಿ ನೀಡುತ್ತಿದ್ದಾರೆ. ಈ ಮೂಲಕ ಕರಾವಳಿ ಜಿಲ್ಲೆಯಲ್ಲಿ ಬಿಜೆಪಿ ಮೋದಿ ಸುನಾಮಿಯ ನಿರೀಕ್ಷೆಯಲ್ಲಿದೆ.ಕರಾವಳಿಯ ದ.ಕ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಜೆಪಿ ಅಧಿಪತ್ಯ ಮಣಿಸಿ ಕೈ ವಶಕ್ಕೆಕಾಂಗ್ರೆಸ್ ಶತಾಯಗತಾಯ ಯತ್ನಿಸುತ್ತಿರುವಂತೆಯೇ ಮೋದಿ ಅಲೆ ಬೀಸುವ ಪ್ರಯತ್ನಕ್ಕೆ ಬಿಜೆಪಿ ಮುಂದಾಗಿದೆ. ಕಾಂಗ್ರೆಸ್‌ಗೆ ಸೂಕ್ತ ಎದುರೇಟು ನೀಡಲು ನರೇಂದ್ರ ಮೋದಿಯ ರೋಡ್‌ಶೋ ಮಿಂಚಿನ ಸಂಚಲನ ಮೂಡಿಸುವ ನಿರೀಕ್ಷೆಯನ್ನು ಬಿಜೆಪಿ ಹೊಂದಿದೆ. ಮೋದಿ ಸಮೀಪ ದರ್ಶನಕ್ಕೆ ರೋಡ್‌ಶೋ:
ಪ್ರಧಾನಿ ನರೇಂದ್ರ ಮೋದಿ ದ.ಕ. ಜಿಲ್ಲೆಗೆ ಈ ಹಿಂದೆ ಆಗಮಿಸಿ ನಾಲ್ಕೈದು ರ್‍ಯಾಲಿ ನಡೆಸಿದ್ದಾರೆ. ಆಗ ಸಮಾವೇಶಕ್ಕೆ ಆಗಮಿಸಿ ತೆರಳುವುದು ಬಿಟ್ಟರೆ ಮೋದಿ ಅವರ ಸಮೀಪ ದರ್ಶನ ಜನತೆಗೆ ಆಗಿಲ್ಲ. ಅದಕ್ಕಾಗಿ ಬಿಜೆಪಿ ನಾಯಕರು ಈ ಬಾರಿ ರೋಡ್‌ಶೋ ಮೊರೆ ಹೋಗಿದ್ದಾರೆ.ರೋಡ್‌ಶೋ ಮೂಲಕ ಮೋದಿಯನ್ನು ಹತ್ತಿರದಿಂದ ಕಾಣಲು ಸಾಧ್ಯವಿದೆ ಎಂದು ಜನರಿಗೆ ಬಿಜೆಪಿ ಪ್ರಚಾರ ಮಾಡುತ್ತಿದೆ. ಇದರಿಂದಾಗಿ ಮೋದಿ ರೋಡ್‌ಶೋಗೆ ಜನಸಾಗರ ಸೇರುವ ನಿರೀಕ್ಷೆ ಇದೆ.ಹೊಸ ದಾಖಲೆ ನಿರ್ಮಿಸಲಿದೆಯೇ ರೋಡ್‌ಶೋ?:
ಕರಾವಳಿ ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ರೋಡ್‌ಶೋ ಇದೇ ಮೊದಲು. ಹೀಗಾಗಿ ಏ.14ರಂದು ಮಂಗಳೂರಲ್ಲಿ ನಡೆಯುವ ಮೋದಿ ರೋಡ್‌ಶೋ ಹೊಸ ದಾಖಲೆ ನಿರ್ಮಿಸುವ ಸಾಧ್ಯತೆಯನ್ನು ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ.ಇಡೀ ದ.ಕ.ಲೋಕಸಭಾ ಕ್ಷೇತ್ರದಿಂದ ಕಾರ್ಯಕರ್ತರು ಹಾಗೂ ಜನತೆಯನ್ನು ರೋಡ್‌ಶೋಗೆ ಆಹ್ವಾನಿಸಲಾಗಿದೆ. ಮಂಗಳೂರು, ಮಂಗಳೂರು ದಕ್ಷಿಣ, ಉತ್ತರ ಹಾಗೂ ಮೂಡುಬಿದಿರೆ ಕ್ಷೇತ್ರಗಳಿಂದ ಹೆಚ್ಚಿನ ಸಂಖ್ಯೆಗೆ ಒತ್ತು ನೀಡಲಾಗಿದೆ. ಈ ಮೂಲಕ ಶಕ್ತಿ ಪ್ರದರ್ಶನಕ್ಕೆ ಬಿಜೆಪಿ ಮುಂದಾಗಿದೆ.
ವಿಷುವಿಗೆ ಮೋದಿ ಮತ ಬೇಟೆ!ಕರಾವಳಿಯಲ್ಲಿ ಈ ದಿನ ಸೌರ ಯುಗಾದಿ, ಹೊಸ ವರ್ಷಾಚರಣೆ. ಬೆಳೆದ ಫಲವಸ್ತುಗಳನ್ನು ದೇವರಿಗೆ ಅರ್ಪಿಸಿ ಇಡೀ ವರ್ಷ ಸಮೃದ್ಧ ಫಸಲು ಬೇಡುವ ದಿನ. ಅಲ್ಲದೆ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಜನ್ಮದಿನ. ಈ ಎಲ್ಲ ಲೆಕ್ಕಾಚಾರಗಳನ್ನು ಮುಂದಿಟ್ಟುಕೊಂಡು ಬಿಜೆಪಿ ನಾಯಕರು ಮೋದಿ ಮೂಲಕ ಮತ ಬೇಟೆಗೆ ವೇದಿಕೆ ಸಜ್ಜುಗೊಳಿಸಿದ್ದಾರೆ. ಕಾಂಗ್ರೆಸ್‌ಗೆ ಠಕ್ಕರ್‌ದ.ಕ. ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ನ್ಯಾಯವಾದಿ ಪದ್ಮರಾಜ್ ಆರ್.ಪೂಜಾರಿ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿಯಿಂದ ಬಂಟ ಸಮುದಾಯದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸ್ಪರ್ಧಿಸುತ್ತಿದ್ದಾರೆ. ಬಿಲ್ಲವ ಸಮುದಾಯ ಓಲೈಸುವ ದೃಷ್ಟಿಯಿಂದ ಕಾಂಗ್ರೆಸ್‌ಗೆ ಠಕ್ಕರ್ ನೀಡಲು ಲೇಡಿಹಿಲ್ ಬ್ರಹ್ಮಶ್ರೀನಾರಾಯಣಗುರು ವೃತ್ತದಿಂದ ಮೋದಿ ರೋಡ್‌ಶೋ ಆರಂಭಿಸಲಿದ್ದಾರೆ. ಇದಕ್ಕೂ ಮುನ್ನ ನಾರಾಯಣಗುರು ಪ್ರತಿಮೆಗೆ ಮೋದಿ ಮಾಲಾರ್ಪಣೆ ಮಾಡುವ ತಂತ್ರಗಾರಿಕೆಯನ್ನು ಬಿಜೆಪಿ ಹೆಣೆದಿದೆ. ಇದೇ ವೇಳೆ ರೋಡ್‌ಶೋ ಮುಕ್ತಾಯಗೊಳ್ಳುವ ನವಭಾರತ ವೃತ್ತದಲ್ಲಿ ಇರುವ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಪ್ರತಿಮೆಗೆ ಮೋದಿಯಿಂದ ಹಾರಾರ್ಪಣೆ ಮಾಡಿಸಬೇಕು ಎಂಬ ಒತ್ತಾಯವೂ ಕೇಳಿಬರತೊಡಗಿದೆ.
ಮೋದಿ ಸ್ವಾಗತಕ್ಕೆ ಸಾಮಾನ್ಯ ಕಾರ್ಯಕರ್ತರು!ಮಂಗಳೂರು ವಿಮಾನ ನಿಲ್ದಾಣದಲ್ಲಿ ಮೋದಿ ಆಗಮನ ಹಾಗೂ ನಿರ್ಗಮನ ವೇಳೆ ತಲಾ 15 ಮಂದಿ ಸಾಮಾನ್ಯ ಕಾರ್ಯಕರ್ತರು ಮೋದಿ ಅವರನ್ನು ಸ್ವಾಗತಿಸಲಿದ್ದಾರೆ. ಬೂತ್ ಅಧ್ಯಕ್ಷರು, ಊರಿನ ಪ್ರಮುಖರು, ಪಕ್ಷದ ಪದಾಧಿಕಾರಿಗಳು ಸೇರಿದಂತೆ 15 ಮಂದಿಯ ತಂಡ ಸಜ್ಜುಗೊಳಿಸಲಾಗಿದೆ.
ವಿಮಾನ ನಿಲ್ದಾಣದಿಂದ ಮೋದಿ ಅವರು ನೇರವಾಗಿ ರಸ್ತೆ ಮೂಲಕ ಲೇಡಿಹಿಲ್‌ನ ನಾರಾಯಣಗುರು ವೃತ್ತಕ್ಕೆ ಆಗಮಿಸಲಿದ್ದಾರೆ. ಅಲ್ಲಿ ದ.ಕ. ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಉಡುಪಿ-ಚಿಕ್ಕಮಗಳೂರು ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್ ರಾಜ್ಯ ಬಿಜೆಪಿ ಚುನಾವಣಾ ಸಂಚಾಲಕ ಸುನಿಲ್ ಕುಮಾರ್, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್, ಉತ್ತರ ಶಾಸಕ ಡಾ.ಭರತ್ ಶೆಟ್ಟಿ, ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಇವರು ಸ್ವಾಗತಿಸಲಿದ್ದಾರೆ. ಮಂಗಳೂರು ಭೇಟಿಯ ನೆನಪಿಗಾಗಿ ಪೇಟ, ಶಾಲು, ರುದ್ರಾಕ್ಷಿ ಮಾಲೆ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಿದ್ದಾರೆ. ರೋಡ್‌ಶೋ ಬಳಿಕ ಮೋದಿ ಅವರು ಕೇರಳದ ಕೊಚ್ಚಿಗೆ ತೆರಳಲಿದ್ದಾರೆ.ರೋಡ್‌ಶೋ ಸಾಗುವ ದಾರಿಯುದ್ಧಕ್ಕೂ ಪಕ್ಷದ ಮುಖಂಡರು, ಕಾರ್ಯಕರ್ತರು ಇರುತ್ತಾರೆ, ಪಿವಿಎಸ್ ಬಿಜೆಪಿ ಜಿಲ್ಲಾ ಕಚೇರಿ ಬಳಿ ಬಿಜೆಪಿಯ ಇತರೆ ಶಾಸಕರು, ಪದಾಧಿಕಾರಿಗಳು ಇರುತ್ತಾರೆ. ಅದೇ ರೀತಿ ರೋಡ್‌ಶೋ ಕೊನೆಗೊಳ್ಳುವ ನವಭಾರತ ವೃತ್ತದ ಬಳಿಯೂ ಪಕ್ಷ ನಾಯಕರು, ಪ್ರಮುಖರು ಇರುತ್ತಾರೆ. ರೋಡ್‌ಶೋ ಸುಮಾರು ಒಂದರಿಂದ ಒಂದೂಕಾಲು ಗಂಟೆ ನಡೆಯಲಿದೆ ಎಂದು ಪಕ್ಷ ನಾಯಕರು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಆಗಮನ ಹಾಗೂ ರೋಡ್‌ಶೋ ಸಾಗುವ ಹಾದಿಯಲ್ಲಿ ಜೇನುಗೂಡು ಇದ್ದರೆ ತೆರವುಗೊಳಿಸುವಂತೆ ನಗರಪೊಲೀಸ್ ಕಮಿಷನರ್ ಸೂಚನೆ ನೀಡಿದ್ದು, ಅಂತಹದ್ದು ಯಾವುದೂ ಕಂಡುಬಂದಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.