ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
14 ಸಮಿತಿಗಳು, 68ಕ್ಕೂ ಹೆಚ್ಚು ಚಟುವಟಿಕೆ ಕಾರ್ಯಕ್ರಮಗಳು, 4 ಸಾವಿರಕ್ಕೂ ಹೆಚ್ಚು ಕಲಾವಿದರು, ಮೂರು ಆನೆಗಳು ಒಳಗೊಂಡು ಈ ಬಾರಿ ನಮ್ಮೂರ ನಾಡಹಬ್ಬ ಶಿವಮೊಗ್ಗ ದಸರಾವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮೈಸೂರು ದಸರಾ ಬಿಟ್ಟರೆ ಶಿವಮೊಗ್ಗ ದಸರಾ ನಾಡಿನಲ್ಲಿಯೇ ಹೆಸರಾಗಿದೆ. ನಮ್ಮೂರ ಈ ನಾಡಹಬ್ಬ ವನ್ನು ಈ ಬಾರಿ ಅತ್ಯಂತ ವಿಜೃಂಭಣೆಯಿಂದ ಅ.3ರಿಂದ ಅ.12ರವರೆಗೆ ಆಚರಿಸಲಾಗುವುದು. ಇದಕ್ಕಾಗಿ ಈಗಾಗಲೇ ಹಲವು ಸಮಿತಿಗಳನ್ನು ರಚಿಸಲಾಗಿದ್ದು, ಸಿದ್ಧತೆಗಳನ್ನು ಕೂಡ ಮಾಡಿಕೊಳ್ಳಲಾಗಿದೆ ಎಂದರು.ಸುಮಾರು 14 ಸಮಿತಿಗಳನ್ನು ಆಯೋಜಿಸಲಾಗಿದೆ. 68ಕ್ಕೂ ಹೆಚ್ಚು ಚಟುವಟಿಕೆ ಕಾರ್ಯಕ್ರಮಗಳು ನಡೆಯಲಿವೆ. 4 ಸಾವಿರಕ್ಕೂ ಹೆಚ್ಚು ಕಲಾವಿದರು ಭಾಗವಹಿ ಸಲಿದ್ದಾರೆ. ವಿಶೇಷವಾಗಿ ಮೆರವಣಿಗೆಯಲ್ಲಿ 3 ಆನೆಗಳು ಕೂಡ ಭಾಗವಹಿಸಲಿವೆ. ಚಲನಚಿತ್ರ ನಟ-ನಟಿಯರು ಭಾಗವಹಿಸುತ್ತಾರೆ. ಸಾಂಸ್ಕೃತಿಕ ಕಾರ್ಯಕ್ರಮ ಗಳು ನಡೆಯುತ್ತವೆ. ಜಾನಪದ ವೈಭವವಿರುತ್ತದೆ. ಸಂಗೀತ, ಸಾಹಿತ್ಯ ಕಾರ್ಯಕ್ರಮಗಳು ಕೂಡ ಈ ದಸರಾದಲ್ಲಿ ಮೇಳೈಸಲಿವೆ ಎಂದು ತಿಳಿಸಿದರು.ಮುಖ್ಯವಾಗಿ ಹಲವು ವಿಭಾಗಗಳನ್ನು ಮಾಡಲಾಗಿದೆ. ಅ.3ರಂದು ಸಾಂಸ್ಕೃತಿಕ ದಸರಾ ಕುವೆಂಪು ರಂಗಮಂದಿರದಲ್ಲಿ ನಡೆಯುತ್ತದೆ. ಅದೇ ದಿನ ಸಂಜೆ ಯಕ್ಷ ದಸರಾ ಕೂಡ ಇರುತ್ತದೆ. ಅ.4ರಂದು ಮಹಿಳಾ ದಸರಾ, ಸಂಜೆ 4.30ಕ್ಕೆ ಕುವೆಂಪು ರಂಗಮಂದಿರದಲ್ಲಿ, ಅದೇ ದಿನ ಬೆಳಗ್ಗೆ 9.30ಕ್ಕೆ ದಸರಾ ಚಲನಚಿತ್ರ ತೋತ್ಸವ, ಅ.4ರಂದು ಸಂಜೆ 4.30ಕ್ಕೆ ಪತ್ರಕರ್ತರ ದಸರಾ ಅಂಬೇಡ್ಕರ್ ಭವನದಲ್ಲಿ, ಮಕ್ಕಳ ದಸರಾ ಸಮಾರೋಪ ಸಮಾರಂಭ, ಅ.5ರಂದು ಸಂಜೆ 5ಕ್ಕೆ ಅಂಬೇಡ್ಕರ್ ಭವನದಲ್ಲಿ, ಯೋಗ ದಸರಾ ಅ.6ರಂದು ಬೆಳಗ್ಗೆ 6ಕ್ಕೆ ಕುವೆಂಪು ರಂಗಮಂದಿರದಲ್ಲಿ, ರೈತ ದಸರಾ ಅ.5ರಂದು ಬೆಳಗ್ಗೆ 9ಕ್ಕೆ ಸೈನ್ಸ್ ಮೈದಾನದಲ್ಲಿ ಅದೇ ದಿನ ಬೆಳಗ್ಗೆ 10ಕ್ಕೆ ಅಂಬೇಡ್ಕರ್ ಭವನದಲ್ಲಿ ಚಲನಚಿತ್ರ ರಸಗ್ರಹಣ ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.ಮಹಾನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ಮಾತನಾಡಿ, ಅ.5ರಂದು ಸಂಜೆ 5.30ಕ್ಕೆ ಕುವೆಂಪು ರಂಗಮಂದಿರದಲ್ಲಿ ರಂಗ ದಸರಾ ಕಾರ್ಯಕ್ರಮ ನಡೆಯಲಿದೆ. ಸಂಜೆ 7.30ಕ್ಕೆ ರಂಗಗೀತೆ ಗಾಯನ ತರಬೇತಿ ಮತ್ತು ಪ್ರಸ್ತುತಿ ಕಾರ್ಯಕ್ರಮ ನಡೆಯಲಿದೆ. ಅ.6ರಂದು ಯುವ ದಸರಾ, ಸಂಜೆ 6ಕ್ಕೆ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ. ಅದೇ ದಿನ ಬೆಳಿಗ್ಗೆ 10.15ಕ್ಕೆ ಕುವೆಂಪು ರಂಗಮಂದಿರದಲ್ಲಿ ಮಕ್ಕಳ ರಂಗ ದಸರಾ ನಡೆಯಲಿದ್ದು, ಇದರ ಅಂಗವಾಗಿ ಮಕ್ಕಳ ನಾಟಕ ಹಾಗೂ ಮಹಿಳಾ ನಿರ್ದೇಶಿತ ನಾಟಕಗಳು ಪ್ರದರ್ಶನವಾಗಲಿವೆ. ಅ.9ರಂದು ಫ್ರೀಡಂ ಪಾರ್ಕ್‌ನಲ್ಲಿ ಸಂಜೆ 5ಕ್ಕೆ ಯುವ ದಸರಾ ಕಾರ್ಯಕ್ರಮವಿದ್ದು, ಇದರ ಅಂಗವಾಗಿ ಮ್ಯೂಸಿಕಲ್ ನೈಟ್ ಕಾರ್ಯಕ್ರಮವಿರುತ್ತದೆ ಎಂದು ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್, ಉಪ ಆಯುಕ್ತ ಕೆ.ಲಿಂಗೇಗೌಡ ಇದ್ದರು.
ಬೆಳಗ್ಗೆ 9ಕ್ಕೆ ಉದ್ಘಾಟನೆ:ಈ ಬಾರಿಯ ಶಿವಮೊಗ್ಗ ದಸರಾ ಹಬ್ಬವನ್ನು ಖ್ಯಾತ ಸಿನಿಮಾ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಈ ಬಾರಿ ದಸರಾ ಮಹೋತ್ಸವ ಉದ್ಘಾಟಿಸಲಿದ್ದಾರೆ. ಅ.3ರಂದು ಬೆಳಗ್ಗೆ 9ಕ್ಕೆ ಮಹಾನಗರ ಪಾಲಿಕೆ ಆವರಣದಿಂದ ನಾಡದೇವಿ ಚಾಮುಂಡೇಶ್ವರಿಯ ಮೆರವಣಿಗೆ ಆರಂಭವಾಗಲಿದೆ. ಕೋಟೆ ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದವರೆಗೆ ಮೆರವಣಿಗೆ ನಡೆಯಲಿದೆ. ದೇಗುಲದ ಆವರಣದಲ್ಲಿ ಸಿನಿಮಾ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ದಸರಾ ಮಹೋತ್ಸವ ಉದ್ಘಾಟಿಸಲಿದ್ದಾರೆ.
ಅಂಬಾರಿ ಮೆರವಣಿಗೆ:ಪ್ರತಿ ವರ್ಷದಂತೆ ಈ ಬಾರಿ ಸಕ್ರೆಬೈಲ್‌ನಿಂದ 3 ಆನೆಗಳು ಬರಲಿದ್ದು, ಬೆಳ್ಳಿ ಮಂಟಪದಲ್ಲಿ ಶ್ರೀಚಾಮುಂಡೇಶ್ವರಿ ದೇವಿಯ ಅಂಬಾರಿ ಮೆರವಣಿಗೆ ಅತ್ಯಂತ ವಿಜೃಂಭಣೆ ಯಿಂದ ನಡೆಯಲಿದೆ. ಅ.12ರಂದು ಮಧ್ಯಾಹ್ನ 2.30ಕ್ಕೆ ಶಿವಪ್ಪನಾಯಕ ಅರಮನೆ ಆವರಣದಿಂದ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆ ಆರಂಭವಾಗಲಿದೆ. ಸಾಗರ ಆನೆ ಅಂಬಾರಿ ಹೊರಲಿದ್ದು, ಬಾಲಣ್ಣ, ಬಹದ್ದೂರ್ ಆನೆಗಳು ಸಾಥ್ ನೀಡಲಿವೆ. ಸಂಜೆ 6.30ಕ್ಕೆ ಅಲ್ಲಮಪ್ರಭು ಮೈದಾನ ದಲ್ಲಿ ತಹಶೀಲ್ದಾರ್ ಬಿ.ಎನ್ ಗಿರೀಶ್ ಅವರು ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ಬನ್ನಿ ಮುಡಿದ ನಂತರ ಅತ್ಯಾಕರ್ಷಕ ಪಟಾಕಿ-ಸಿಡಿಮದ್ದು ಸಿಡಿಸುವ ಮೂಲಕ ರಾವಣ ದಹನ ನಡೆಯಲಿದೆ.ಶಿವಮೊಗ್ಗ ದಸರಾಕ್ಕೆ ಸ್ಟಾರ್ ಮೆರಗು:
ಈ ಬಾರಿ ಶಿವಮೊಗ್ಗ ದಸರಾದಲ್ಲಿ ಸಾಲು ಸಾಲು ಸಿನಿಮಾ ಸ್ಟಾರ್‌ಗಳು ಭಾಗವಹಿಸಲಿದ್ದಾರೆ. ಶಿವಮೊಗ್ಗ ಮಹಾನಗರ ಪಾಲಿಕೆ ನವರಾತ್ರಿ ಕಾರ್ಯಕ್ರಮಕ್ಕೆ ಹೆಚ್ಚು ಜನರನ್ನು ಸೆಳೆಯಲು ಸಿನಿಮಾ ತಾರೆಯರನ್ನು ಆಹ್ವಾನಿಸಿದೆ.ಅ.4ರಂದು ಬೆಳಗ್ಗೆ 9.30ಕ್ಕೆ ನಟಿ, ಮಾಜಿ ಸಚಿವೆ ಉಮಾಶ್ರೀ ಅವರು ದಸರಾ ಚಲನಚಿತ್ರೋತ್ಸವ ಉದ್ಘಾಟಿಸಲಿದ್ದಾರೆ. ನಟಿ ಪ್ರಿಯಾ ಶಠವರ್ಷಣ್, ಶಾಖಾಹಾರಿ ಸಿನಿಮಾದ ನಿರ್ಮಾಪಕ ರಾಜೇಶ್ ಕೀಳಂಬಿ, ನಿರ್ದೇಶಕ ಸಂದೀಪ್ ಸುಂಕದ್ ಭಾಗವಹಿಸಲಿದ್ದಾರೆ.
ಅ.4ರಂದು ಕುವೆಂಪು ರಂಗಮಂದಿರದಲ್ಲಿ ಸಂಜೆ 4.30ಕ್ಕೆ ಮಹಿಳಾ ದಸರಾ ಉದ್ಘಾಟನೆಗೆ ನಟಿ ಪ್ರಿಯಾ ಶಠಮರ್ಷಣ್ ಆಗಮಿಸುತ್ತಿದ್ದಾರೆ. ಚಲನಚಿತ್ರ ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್ ಅವರು ಚಲನಚಿತ್ರ ಮತ್ತು ಸಾಹಿತ್ಯ ಕುರಿತ ಕಾರ್ಯಾಗಾರ ಮತ್ತು ಸಂವಾದ ನಡೆಸಲಿದ್ದಾರೆ. ಛಾಯಾಚಿತ್ರ - ಕ್ಯಾಮರಾ ಪ್ರದರ್ಶನ ವನ್ನು ಡಾ ವಿ.ನಾಗೇಂದ್ರ ಪ್ರಸಾದ್ ಉದ್ಘಾಟಿಸಲಿದ್ದಾರೆ. ಅ.5ರಂದು ಡಾ.ಅಂಬೇಡ್ಕರ್ ಭವನದಲ್ಲಿ ಸಂಜೆ 5ಕ್ಕೆ ಮಕ್ಕಳ ದಸರಾ ಸಮಾರೋಪ ಸಮಾರಂಭ ನಡೆಯಲಿದೆ. ಝಿ ಕನ್ನಡ ವಾಹಿನಿಯ ಆರ್ಯ ಸ್ವರೂಪ್ ಭಾಗವಹಿಸಲಿದ್ದಾರೆ. ಅ.5ರಂದು ಡಾ.ಅಂಬೇಡ್ಕರ್ ಭವನದಲ್ಲಿ ನಡೆಯಲಿರುವ ಚಲನಚಿತ್ರ ರಸಗ್ರಹಣ ಕಾರ್ಯಾಗಾರದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಡಿ.ಸತ್ಯಪ್ರಕಾಶ್ ಅವರು ಭಾಗವಹಿಸಲಿದ್ದಾರೆ. ಚಲನಚಿತ್ರ ಛಾಯಾಗ್ರಾಹಕ ಶ್ರೀಶ ಕೂದುವಳ್ಳಿ ಉಪಸ್ಥಿತರಿರಲಿದ್ದಾರೆ. ಅ.9 ರಂದು ಸಂಜೆ 5ಕ್ಕೆ ಫ್ರೀಡಂ ಪಾರ್ಕ್‌ನಲ್ಲಿ ಯುವ ದಸರಾ ಅಂಗವಾಗಿ ಮ್ಯೂಸಿಕಲ್ ನೈಟ್ ಕಾರ್ಯಕ್ರಮ ಆಯೋಜಿಸಲಾಗಿದೆ. ಖ್ಯಾತ ಗಾಯಕ ರಾಜೇಶ್ ಕೃಷ್ಣನ್, ಡಾ ಶಮಿತಾ ಮಲ್ನಾಡ್ ತಂಡ ಭಾಗವಹಿಸಲಿದೆ. ಅ.10ರಂದು ಸಂಜೆ 5.30ಕ್ಕೆ ಫ್ರೀಡಂ ಪಾರ್ಕ್‌ನಲ್ಲಿ ಸಾಂಸ್ಕೃತಿಕ ದಸರಾ ನಡೆಯಲಿದೆ. ಅಂದು ನಟಿ ಮಾಲಾಶ್ರೀ ಉದ್ಘಾಟಿಸಲಿದ್ದಾರೆ. ಅ.11ರಂದು ಸಂಜೆ 5.30ಕ್ಕೆ ಫ್ರೀಡಂ ಪಾರ್ಕ್‌ನಲ್ಲಿ ನಟಿ ಭವ್ಯ ಉದ್ಘಾಟಿಸಲಿದ್ದಾರೆ. ಸಂಗೀತ ವೈಭವ ಕಾರ್ಯಕ್ರಮದಲ್ಲಿ ಹಿನ್ನೆಲೆ ಗಾಯಕಿ ಮಂಗಳಾರವಿ, ಕನ್ನಡ ಕೋಗಿಲೆ ಖ್ಯಾತಿಯ ಸುರಕ್ಷಾ ದಾಸ್, ಪಾರ್ಥ ಚಿಂತನ್, ಮಲೆನಾಡು ಕೋಗಿಲೆ ವಿಜೇತ ಪೃಥ್ವಿಗೌಡ ಭಾಗವಹಿಸಲಿದ್ದಾರೆ.ಸಿನಿಮಾ ಉಚಿತ ಪ್ರದರ್ಶನ:ದಸರಾ ಚಲನಚಿತ್ರೋತ್ಸವದಲ್ಲಿ ನಾಲ್ಕು ಸಿನಿಮಾಗಳನ್ನು ಉಚಿತವಾಗಿ ಪ್ರದರ್ಶಿಸಲಾಗುತ್ತಿದೆ. ಅ.4 ರಂದು ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ‘ಶಾಖಾಹಾರಿ’ ಸಿನಿಮಾ ಪ್ರದರ್ಶಿಸಲಾಗುತ್ತಿದೆ. ಅ.5ರಂದು ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ‘ಟಗರು ಪಲ್ಯ’, ಅ.6 ರಂದು ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ‘ಕಂಬ್ಳಿಹುಳ’, ಅ.7ರಂದು ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ‘ಕಾಲಾಪತ್ಥರ್’ ಸಿನಿಮಾ ಪ್ರದರ್ಶನವಾಗಲಿದೆ. ಎಲ್ಲ ಸಿನಿಮಾಗಳು ಬೆಳಗ್ಗೆ 9 ಗಂಟೆಯಿಂದ ಪ್ರದರ್ಶನವಾಗಲಿದೆ.ಅಂಬಾರಿ ಆನೆಗಳಿಗೆ ಪಾಲಿಕೆ ಪೂಜೆ:ಶಿವಮೊಗ್ಗ: ರಾಜ್ಯದ ಎರಡನೇ ಅತಿ ದೊಡ್ಡ ದಸರಾ ಮಹೋತ್ಸವವಾದ ಶಿವಮೊಗ್ಗ ದಸರಾಕ್ಕೆ ಕ್ಷಣಗಣನೆ ಶುರುವಾಗಿದ್ದು, ಶಿವಮೊಗ್ಗ ದಸರಾದಲ್ಲಿ ಬೆಳ್ಳಿ ಅಂಬಾರಿ ಹೊರುವ ಆನೆಗಳಿಗೆ ಪೂಜೆ ಸಲ್ಲಿಸಿ ಅಧಿಕೃತವಾಗಿ ಮಹಾನಗರ ಪಾಲಿಕೆ ಆಯುಕ್ತರು, ಶಿವಮೊಗ್ಗ ನಗರ ಶಾಸಕರು ಬುಧವಾರ ಆಹ್ವಾನ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಸ್.ಎನ್.ಚನ್ನಬಸಪ್ಪ, ವಿಜೃಂಭಣೆಯಿಂದ ನಾಡ ಹಬ್ಬ ಸಾಂಸ್ಕೃತಿ ದಸರಾ ಮಾಡಲು ಬುಧವಾರ ಅಧಿಕೃತವಾಗಿ ಅಂಬಾರಿ ಉತ್ಸವ ಮಾಡಲು ಆನೆಗಳಿಗೆ ಪೂಜೆ ಮಾಡಿ ಆಹ್ವಾನ ನೀಡಲಾಗಿದೆ. ಸಾಗರ ಚಾಮುಂಡಿದೇವಿಯನ್ನು ಹೊತ್ತು ಅಂಬಾರಿ ಉತ್ಸವಕ್ಕೆ ಹೆಚ್ಚು ಶಕ್ತಿಯನ್ನು ನೀಡುತ್ತಿದೆ. ಸಾಗರ, ಬಾಲಣ್ಣ, ಬಹದ್ದೂರ್ ಮೂರು ಆನೆಗಳಿಗೂ ಪೂಜೆ ಮಾಡುವುದರ ಮೂಲಕ ಶಿವಮೊಗ್ಗ ದಸರಾ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಮೂರು ಆನೆಗಳಲ್ಲೂ ಪಾರ್ಥನೆ ಮಾಡಿದ್ದೇವೆ. ಈಗಾಗಲೇ ಸಂಬಂಧಪಟ್ಟಂತಹ ಅಧಿಕಾರಿಗಳು ಇದಕ್ಕೆ ಪೂರ್ಣವಾದಂತಹ ಯೋಚನೆಗಳನ್ನು ಮಾಡಿ, ಅಂಬಾರಿ ಉತ್ಸವಕ್ಕೆ ಶಕ್ತಿಯನ್ನು ಧಾರೆ ಎರೆಯುತ್ತಿದ್ದಾರೆ ಎಂದರು.ಈ ಬಾರಿಯ ಜಂಬೂ ಸವಾರಿಯನ್ನು ಎಂದಿನಂತೆ ಸಾಗರ್ ಆನೆ ಮಾಡಲಿದ್ದು, ಈ ಬಾರಿ ಮೂರು ಗಂಡಾನೆಗಳಿವೆ. ಹಾಗಾಗಿ ಈ ಬಾರಿ ಉತ್ಸವಕ್ಕೆ ಇನ್ನಷ್ಟು ಮೆರಗು ಇದೆ. ಕಳೆದ ಬಾರಿ ಮೂರು ಆನೆಗಳು ಒಟ್ಟಿಗೆ ಬರುತ್ತಿದ್ದವು. ಈ ಬಾರಿ ಒಂದರ ಹಿಂದೆ ಒಂದು ಬರುತ್ತದೆ.ಅಧಿಕಾರಿಗಳ ತೀರ್ಮಾನಕ್ಕೆ ತಕ್ಕಂತೆ ತಂಡ ಗಳನ್ನು ರಚನೆ ಮಾಡಲಾಗಿದೆ.ಅತ್ಯಂತ ಯಶಸ್ವಿಯಾಗಿ ನಿರ್ವಹಣೆ ಮಾಡಲು ಡಿಎಫ್‌ಓ , ಡಾ. ವಿನಯ್, ವಲಯ ಅರಣ್ಯ ಅಧಿಕಾರಿಗಳು ಸೇರಿದಂತೆ ಎಲ್ಲಾ ಅಧಿಕಾರಿಗಳು ಶ್ರಮ ವಹಿಸುತ್ತಿದ್ದಾರೆ ಎಂದರು.ಅ.3 ಅಥವಾ 4 ರಂದು ಆನೆಗಳು ಶಿವಮೊಗ್ಗಕ್ಕೆ ಬರಲಿವೆ. ಬೇಗ ಬಂದು ಅಲ್ಲಿ ತಾಲೀಮು ನಡೆಸಲು ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ತಾಲೀಮು ಜಾಸ್ತಿ ಬೇಕು ಎಂಬುದು ನಮ್ಮೆಲ್ಲರ ಅಪೇಕ್ಷೆ. ಅದಕ್ಕೆ ತಕ್ಕಂತೆ ಪೂರಕ ತಯಾರಿ ನಡೆಸಲಾಗಿದೆ ಎಂದರು.ಡಿಎಫ್‌ಓ ಪ್ರಸನ್ನ ಪಟಗಾರ ಮಾತನಾಡಿ, ಸುಮಾರು 15-20 ದಿನಗಳಿಂದ ತಾಲೀಮು ಆರಂಭವಾಗಿದೆ.ಅ.3 ಅಥವಾ 4 ರಂದು ಸಾಗರ, ಬಾಲಣ್ಣ, ಬಹದ್ದೂರ್ ಮೂರು ಆನೆಗಳು ಶಿವಮೊಗ್ಗಕ್ಕೆ ಕಳುಹಿಸಲಿದ್ದೇವೆ. ದಿನನಿತ್ಯದ ಫುಡ್‌ನ್ನು ನಾವು ಕೊಡುತ್ತಿದ್ದೇವೆ. ಹೆಚ್ಚುವರಿಯಾಗಿ ಮಹಾನಗರ ಪಾಲಿಕೆ ವತಿಯಿಂದ ಕೊಡಲಾ ಗುತ್ತದೆ. ಕ್ಯಾಂಪ್‌ನಲ್ಲಿ ಒಟ್ಟು 4 ಹೆಣ್ಣು ಆನೆಗಳಿದ್ದು, ಅದರಲ್ಲಿ 3 ಹೆಣ್ಣು ಆನೆಗಳ ಜೊತೆ ಮರಿ ಆನೆಗಳಿದ್ದಾವೆ. ಒಂದು ಗರ್ಭವತಿ ಆನೆ ಇದೆ. ಹೀಗಾಗಿ ಈ ಬಾರಿ ಗಂಡು ಆನೆಗಳನ್ನು ಮಾತ್ರ ಕಳುಹಿಸಲಾಗುತ್ತಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿಗಳು, ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು, ಆನೆ ಮಾವುತರು ಉಪಸ್ಥಿತರಿದ್ದರು.