ಸಾರಾಂಶ
ಪಂಪನಗೌಡ ಬಾದನಹಟ್ಟಿ
ಕುರುಗೋಡು: ಪಟ್ಟಣದ ಐತಿಹಾಸಿಕ ದೊಡ್ಡ ಬಸವೇಶ್ವರ ಜಾತ್ರೆ ನಿಮಿತ್ತ ಮಾ. ೨೫ರಂದು ಜರುಗುವ ರಥೋತ್ಸವಕ್ಕೆ ಧಾರ್ಮಿಕ ದತ್ತಿ ಇಲಾಖೆ ಜಾತ್ರೆ ಸಿದ್ಧತೆ ಭರದಿಂದ ಕೈಗೊಂಡಿದ್ದು, ಕ್ಷಣಗಣನೆ ಶುರುವಾಗಿದೆ.ಸ್ಥಳೀಯ ಪುರಸಭೆ ಆಡಳಿತ ರಸ್ತೆಯ ಧೂಳು ನಿಯಂತ್ರಿಸಲು ನೀರು ಸಿಂಪರಣೆ ಮತ್ತು ಕುಡಿಯುವ ನೀರಿಗಾಗಿ ೬ ಟ್ಯಾಂಕರ್ ಏರ್ಪಡಿಸಲಾಗಿದೆ. ಎಲ್ಲೆಡೆ ಬೀದಿದೀಪ ಕಂಗೊಳಿಸುತ್ತಿವೆ. ನಾನಾ ಗ್ರಾಮದಿಂದ ಬರುವ ವಾಹನಗಳಿಗೆ ಐದು ಕಡೆ ನಿಲುಗಡೆ ಕೇಂದ್ರ ಸ್ಥಾಪಿಸಲಾಗಿದೆ. ಪಟ್ಟಣದಲ್ಲಿರುವ ರಸ್ತೆಗಳನ್ನು ಎರಡು ಜೆಸಿಬಿ ಯಂತ್ರದ ಮೂಲಕ ಸ್ವಚ್ಛಗೊಳಿಸಲಾಗಿದೆ. ನೀರು ಸರಬರಾಜು, ಕೊಳವೆ ದುರಸ್ತಿ, ಕುಡಿಯುವ ನೀರು ಸಂಗ್ರಹ, ಔಷಧ ಸಿಂಪರಣೆ ಕೈಗೊಳ್ಳಲಾಗಿದೆ.
ತೇರು ಬೀದಿಯಲ್ಲಿರುವ ರಥ ಸಾಗುವ ದಾರಿಯಲ್ಲಿ ಅಡ್ಡವಾಗುವ ಬೀದಿಬದಿ ಅಂಗಡಿಗಳನ್ನು ತಾತ್ಕಾಲಿಕವಾಗಿ ಬೇರೆಡೆ ಸ್ಥಳಾಂತರಿಸಲು ಅಂಗಡಿ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಸಹಾಯ ಕೋರಲಾಗಿದೆ ಎಂದು ಪುರಸಭೆ ಅಧಿಕಾರಿ ತಿಮ್ಮಪ್ಪ ತಿಳಿಸಿದ್ದಾರೆ.ಆರೋಗ್ಯ ಇಲಾಖೆ ಜಾತ್ರಾರ್ಥಿಗಳ ಆರೋಗ್ಯ ರಕ್ಷಣೆಗೆ ಸಿದ್ಧಗೊಂಡಿದೆ. ೬ ವೈದ್ಯರನ್ನು ನಿಯೋಜಿಸಲಾಗಿದೆ. ೪ ಸ್ಟಾಫ್‌ನರ್ಸ್ ಹಾಗೂ ಇಬ್ಬರು ಡಿ ಗ್ರೂಪ್ ಸಿಬ್ಬಂದಿಯನ್ನು ಬೇರೆಡೆಯಿಂದ ನಿಯೋಜಿಸಿಕೊಂಡಿದೆ. ರಾತ್ರಿ ವೇಳೆ ಹೆಚ್ಚಿನ ನಿಗಾ ವಹಿಸಿಲು ಪಾಳಿಯಲ್ಲಿ ವೈದ್ಯರನ್ನು ನಿಯೋಜಿಸಿದೆ. ಕುಡಿಯುವ ನೀರಿನ ಸ್ಯಾಂಪಲ್ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದೆ. ೧೧ರಲ್ಲಿ ೬ ಯೋಗ್ಯವಲ್ಲವೆಂದು ವರದಿ ಬಂದಿದ್ದು, ಇನ್ನುಳಿದೆಲ್ಲ ಕುಡಿಯಲು ಯೋಗ್ಯವಾಗಿದೆ. ಆಕಸ್ಮಿಕವಾಗಿ ಸಂಭವಿಸಬಹುದಾದ ಅವಘಡ ನಿಯಂತ್ರಿಸಲು ೫ ಆ್ಯಂಬುಲೆನ್ಸ್ ಸಿದ್ಧಗೊಳಿಸಲಾಗಿದೆ. ಬಳ್ಳಾರಿ ರಸ್ತೆ, ಬಾದನಹಟ್ಟಿರಸ್ತೆ, ಗೆಣಿಕೆಹಾಳ್ ರಸ್ತೆ, ಕಂಪ್ಲಿರಸ್ತೆ ಕಡೆಗಳಲ್ಲಿ ನಿಯೋಜಿಸಲಾಗಿದೆ. ಮತ್ತೊಂದು ಆ್ಯಂಬುಲೆನ್ಸ್‌ನ್ನು ಆಸ್ಪತ್ರೆ ಪ್ರಾಂಗಣದಲ್ಲಿ ನಿಯೋಜಿಸಲಾಗಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಮಂಜುನಾಥ ಜವಳಿ ತಿಳಿಸಿದ್ದಾರೆ.
ವಿದ್ಯುತ್ ಇಲಾಖೆ ವಿದ್ಯುತ್ ಸಂಪರ್ಕದ ತಂತಿಗಳ ದುರಸ್ತಿ ಕೈಗೊಂಡಿದೆ. ಸಂಪ್ರದಾಯದಂತೆ ತೇರು ಕಟ್ಟುವ ಕೆಲಸ ಮುಕ್ತಾಯ ಹಂತ ತಲುಪಿದೆ.ಶಿವರಾತ್ರಿ ದಿನ ೬೦ ಅಡಿ ತೇರು ಮನೆಯಿಂದ ಹೊರಗೆ ಬಂದಿದ್ದು, ರಥದ ಅಲಂಕಾರಕ್ಕೆ ಅಗತ್ಯವಾದ ನಾನಾ ಜೋಡಣೆ ಕಾರ್ಯದಲ್ಲಿ ಸಾಂಪ್ರದಾಯಿಕ ಕೈಕಸುಬುದಾರರು ಭರದಿಂದ ಕೆಲಸ ನಡೆಸಿದ್ದಾರೆ. ಒಂದು ವಾರದಿಂದ ಪ್ರತಿದಿನ ದೊಡ್ಡ ಬಸವೇಶ್ವರ ಸ್ವಾಮಿಗೆ ಮತ್ತು ನೀಲಮ್ಮದೇವಿಗೆ ಕಂಕಣ ಕಟ್ಟುವ ಕಾರ್ಯ, ನಾಗಾಭರಣ, ಸಿಂಹ, ನವಿಲು, ಅಶ್ವ, ಬಿಳಿ ಬಸವ, ನೀಲಮ್ಮದೇವತೆಗೆ ಉಡಿ ತುಂಬವ, ಗಜ ಉತ್ಸವ ನಡೆಯುತ್ತಿದೆ. ಮಾ. ೨೫ರಂದು ಸಂಜೆ ೫.೩೦ ಗಂಟೆಗೆ ಮಹಾ ರಥೋತ್ಸವ ನಡೆಯಲಿದೆ. ಎಲ್ಲ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ಧಾರ್ಮಿಕ ದತ್ತಿ ಇಲಾಖೆ ಪಕ್ಕದ ರೈತ ಸಮುದಾಯ ಭವನದಲ್ಲಿ ಅನ್ನದಾಸೋಹ ವ್ಯವಸ್ಥೆ ಮಾಡಿದೆ.
ಭಕ್ತರಿಗೆ ಕುಡಿಯುವ ನೀರು ಒದಗಿಸಲು ದೇವಸ್ಥಾನದ ಹೊರಗೆ ಮತ್ತು ರೈತ ಸಮುದಾಯ ಭವನದ ಪಕ್ಕದಲ್ಲಿ ೩೦ಕ್ಕೂ ಹೆಚ್ಚು ಸಾರ್ವಜನಿಕ ಟ್ಯಾಪ್ ನಿರ್ಮಿಸಲಾಗಿದೆ. ಭಕ್ತರ ರಕ್ಷಣೆಗೆ ದೇವಸ್ಥಾನದ ಪ್ರದೇಶದಲ್ಲಿ ೨೦ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿ ಹನುಮಂತಪ್ಪ ತಿಳಿಸಿದ್ದಾರೆ.ರಥೋತ್ಸವದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಬಂದೋಬಸ್ತ್ ಮಾಡಿದೆ ಎಂದು ಪಿಎಸ್ಐ ಸುಪ್ರೀತ್ ವಿರೂಪಾಕ್ಷಪ್ಪ ತಿಳಿಸಿದರು.