ಮುರುಡೇಶ್ವರದ ಸಾರ್ವಜನಿಕ ಸಿದ್ಧಿವಿನಾಯಕ ಟ್ರಸ್ಟ್ ಈ ಸಲ 50ನೇ ವರ್ಷದ ಸುವರ್ಣ ಸಂಭ್ರಮದ ಗಣೇಶೋತ್ಸವವನ್ನು ಅದ್ಧೂರಿಯಾಗಿ ಮಾಡುತ್ತಿದೆ. 11 ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ರಾಘವೇಂದ್ರ ಹೆಬ್ಬಾರ್

ಭಟ್ಕಳ: ತಾಲೂಕಿನಾದ್ಯಂತ ಹಿಂದೂಗಳು ಗಣೇಶ ಚತುರ್ಥಿಯ ಸಂಭ್ರಮದ ಸಡಗರದಲ್ಲಿದ್ದು, ಎಲ್ಲೆಡೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ವಿಜೃಂಭಣೆಯಿಂದ ಚೌತಿ ಹಬ್ಬ ಆಚರಿಸಲಾಗುತ್ತದೆ.

ತಾಲೂಕಿನಲ್ಲಿ ಮುರುಡೇಶ್ವರ 43, ಗ್ರಾಮಾಂತರ ಭಾಗದಲ್ಲಿ 64 ಹಾಗೂ ಭಟ್ಕಳ ಪಟ್ಟಣ ವ್ಯಾಪ್ತಿಯಲ್ಲಿ 18 ಸೇರಿ ಒಟ್ಟೂ 123 ಸಾರ್ವಜನಿಕವಾಗಿ ಗಣೇಶೋತ್ಸವವನ್ನು ಎರಡು, ಮೂರು, ಐದು, ಏಳು ಹಾಗೂ ಹನ್ನೊಂದು ದಿನಗಳ ಕಾಲ ಅದ್ಧೂರಿಯಾಗಿ ಆಚರಿಸಲಾಗುತ್ತದೆ.

ಮುರುಡೇಶ್ವರದ ಸಾರ್ವಜನಿಕ ಸಿದ್ಧಿವಿನಾಯಕ ಟ್ರಸ್ಟ್ ಈ ಸಲ 50ನೇ ವರ್ಷದ ಸುವರ್ಣ ಸಂಭ್ರಮದ ಗಣೇಶೋತ್ಸವವನ್ನು ಅದ್ಧೂರಿಯಾಗಿ ಮಾಡುತ್ತಿದೆ. 11 ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಮುರುಡೇಶ್ವರದಲ್ಲಿ ಗುಡಿಗಾರ ಸಹೋದರರು ಕಳೆದ 54 ವರ್ಷಗಳಿಂದ ಸಾರ್ವಜನಿಕ ಮತ್ತು ಮನೆಗಳಲ್ಲಿ ಪೂಜೆಗೊಳ್ಳಲಿರುವ ಪರಿಸರಸ್ನೇಹಿ ಗಣೇಶನ ಮೂರ್ತಿ ತಯಾರಿಸುತ್ತಾ ಬಂದಿದ್ದಾರೆ. ದಿ. ರಘುವೀರ ರಂಗ ಗುಡಿಗಾರರು ಕಳೆದ 54 ವರ್ಷಗಳ ಹಿಂದೆ ಆರಂಭಿಸಿದ ಗಣೇಶನ ಮೂರ್ತಿಗಳ ಸಿದ್ಧಪಡಿಸುವ ಕಾಯಕವನ್ನು ಅವರ ಮಕ್ಕಳಾದ ದೇವಿದಾಸ, ದಿನೇಶ, ಪ್ರದೀಪ ಗುಡಿಗಾರರು ಮತ್ತು ಗಣೇಶಪ್ರಸಾದ, ನಾಗರಾಜ ಉಮೇಶ ಗುಡಿಗಾರರು ಇಂದಿಗೂ ಮುಂದುವರಿಸಿಕೊಂಡು ಬರುತ್ತಿದ್ದಾರೆ.

ಇವರು ವರ್ಷಂಪ್ರತಿ ಸುಮಾರು 150ಕ್ಕೂ ಅಧಿಕ ಗಣೇಶನ ಮೂರ್ತಿಗಳನ್ನು ಪರಿಸರ ಸ್ನೇಹಿಯಾಗಿ ತಯಾರು ಮಾಡುತ್ತಿರುವುದು ವಿಶೇಷ. ಇವರು ಗಣೇಶ ಮೂರ್ತಿಯಲ್ಲದೇ ವಿವಿಧ ದೇವ, ನೇತ್ರಾಣಿ ಜಟಕ, ವೀರಮಾಸ್ತಿ, ಕುಂಟ ಮಾಸ್ತಿ, ಜಟ್ಕ ಮಾಸ್ತಿ, ನಾಗಯಕ್ಷೆ, ಸಹಿತ ಸುಮಾರು 18 ಮಾದರಿಯ ಮೂರ್ತಿಗಳನ್ನು ತಯಾರಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ.

ಮುರುಡೇಶ್ವರದ ಸಾರ್ವಜನಿಕ ಸಿದ್ಧಿವಿನಾಯಕ ಟ್ರಸ್ಟನವರು ಆಚರಿಸುವ ಗಣೇಶೋತ್ಸವಕ್ಕೂ ವರ್ಷಂಪ್ರತಿ ಸೇವಾರೂಪದಲ್ಲಿ ಗಣೇಶನ ಮೂರ್ತಿ ನೀಡುತ್ತಿರುವ ಇವರು ಈ ಸಲ 50ನೇ ವರ್ಷದ ಸುವರ್ಣ ಗಣೇಶೋತ್ಸವಕ್ಕೂ ಸಹ ಇವರು 10 ಅಡಿ ಎತ್ತರದ ಸುಂದರ ಗಣೇಶನ ಮೂರ್ತಿಯನ್ನು ಸೇವಾರೂಪದಲ್ಲಿ ಮಾಡಿಕೊಟ್ಟು ಗಮನ ಸೆಳೆದಿದ್ದಾರೆ.

ಮುರುಡೇಶ್ವರದ ಗುಡಿಗಾರ ಕುಟುಂಬ ಮೂರ್ತಿ ತಯಾರಿಕೆ ಮತ್ತು ಇನ್ನಿತರ ಸುಂದರ, ಅತ್ಯಾಕರ್ಷಕ ಕಲಾಕೃತಿ ಮಾಡುವುದರಲ್ಲಿ ಸಿದ್ಧಹಸ್ತರಾಗಿದ್ದಾರೆ. ಇವರು ಗಣೇಶನ ಮೂರ್ತಿ ತಯಾರಿಕೆಗೆ ಸಿದ್ದಾಪುರದಿಂದ ಅಗತ್ಯ ಮಣ್ಣನ್ನು ತರಿಸಿಕೊಳ್ಳುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಮೂರ್ತಿ ತಯಾರಿಕೆಯ ಮಣ್ಣು ಮತ್ತು ಸಾಗಾಟದ ಖರ್ಚು ಅಧಿಕವಾಗುತ್ತಿದ್ದರೂ ತಮ್ಮ ಹಿರಿಯರಿಂದ ಬಂದ ಕಲೆಯನ್ನು ಬಿಡಬಾರದು ಎನ್ನುವ ಏಕೈಕ ಉದ್ದೇಶದಿಂದ ಇಂದಿಗೂ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಮುರುಡೇಶ್ವರದ ಗುಡಿಗಾರರಂತೆ ಭಟ್ಕಳದ ಚೌತನಿಯ ಗುಡಿಗಾರ ಕುಟುಂಬದವರು, ಕಂಚುಗಾರ ಕುಟುಂಬದವರು ಮತ್ತಿತರರು ಗಣೇಶ ಮೂರ್ತಿ ತಯಾರಿಕೆಯ ಕೆಲಸವನ್ನು ತಮ್ಮ ಪೂರ್ವಜರ ಕಾಲದಿಂದಲೂ ಮುಂದುವರಿಸಿಕೊಂಡು ಬರುತ್ತಿದ್ದಾರೆ.