ತುಮಕೂರು ದಸರಾ ಉತ್ಸವಕ್ಕೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಬೆಳಗ್ಗೆ 9 ಗಂಟೆಗೆ ವಿಧ್ಯುಕ್ತವಾಗಿ ಚಾಲನೆ ನೀಡಲಾಗುವುದು. ಮೊದಲನೇ ದಿನವಾದ ಅಕ್ಟೋಬರ್ 11 ರಂದು ಬೆಳಗ್ಗೆ 9 ಗಂಟೆಗೆ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಧಾರ್ಮಿಕ ಉತ್ಸವಗಳ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಧಾರ್ಮಿಕ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಸಿದ್ಧಗಂಗಾ ಮಠದ ಸಿದ್ಧಲಿಂಗ ಮಹಾಸ್ವಾಮೀಜಿ, ಎಲೆರಾಂಪುರ ಕುಂಚಿಟಿಗರ ಮಹಾಸಂಸ್ಥಾನ ಮಠದ ಡಾ: ಹನುಮಂತನಾಥ ಮಹಾಸ್ವಾಮೀಜಿ, ಸುಕ್ಷೇತ್ರ ಸಿದ್ದರಬೆಟ್ಟ ಬಾಳೆಹೊನ್ನೂರು ಮಠದ ವೀರಭದ್ರ ಶಿವಾಚಾರ್ಯರು ಹಾಗೂ ಬೆಳ್ಳಾವಿ ಕಾರದೇಶ್ವರ ಮಠದ ಕಾರದ ವೀರಬಸವ ಮಹಾಸ್ವಾಮೀಜಿ ವಹಿಸಲಿದ್ದಾರೆ. ಉಪಮುಖ್ಯಮಂತ್ರಿ ಡಾ: ಜಿ. ಪರಮೇಶ್ವರ ಹಾಗೂ ಸಂಸದ ವಿ. ಸೋಮಣ್ಣ ಅವರ ಉಪಸ್ಥಿತಿಯಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಲಿದೆ.
ಕನ್ನಡಪ್ರಭ ವಾರ್ತೆ ತುಮಕೂರು
ವಿಶ್ವವಿಖ್ಯಾತ ಮೈಸೂರು ದಸರಾ ಮಾದರಿಯಲ್ಲೇ ಕಳೆದ 2 ವರ್ಷದಿಂದ ತುಮಕೂರು ದಸರಾವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದ್ದು, 3ನೇ ವರ್ಷವಾದ ಈ ಬಾರಿ ಬರದ ನಡುವೆಯೂ ವೈಭವದ ದಸರಾ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ.ತುಮಕೂರು ದಸರಾವನ್ನು ವೈಭವೋಪೇತವಾಗಿ ಆಚರಿಸಲು ಜಿಲ್ಲಾಡಳಿತ ಸರ್ವ ಸನ್ನದ್ಧವಾಗಿದ್ದು, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಮಾರ್ಗದರ್ಶನದಲ್ಲಿ ಅಧಿಕಾರಿಗಳು ಜಿಲ್ಲೆಯ ಜನರು ದಸರಾ ಸಂಭ್ರಮದಲ್ಲಿ ಮಿಂದೇಳುವಂತೆ ಮಾಡಲು ಟೊಂಕಕಟ್ಟಿ ನಿಂತಿದ್ದಾರೆ.
ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಾಡಿನ ಶಕ್ತಿ ದೇವತೆ ಚಾಮುಂಡೇಶ್ವರಿ ದೇವಿಯನ್ನು ಭವ್ಯ ಮಂಟಪದಲ್ಲಿ ಪ್ರತಿಷ್ಠಾಪಿಸಿ ಪ್ರತಿ ದಿನ ವಿವಿಧ ಅಲಂಕಾರದಲ್ಲಿ ಪೂಜಿಸಿ ಶಾಸ್ತ್ರೋಕ್ತವಾಗಿ ಹೋಮ- ಹವನಗಳನ್ನು ನಡೆಸಲು ಭವ್ಯವಾದ ಧಾರ್ಮಿಕ ಮಂಟಪಗಳನ್ನು ಸಜ್ಜುಗೊಳಿಸಲಾಗಿದೆ. ಜತೆಗೆ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯುಕ್ರಮಗಳನ್ನು ನಡೆಯಲು ಭವ್ಯ ವೇದಿಕೆ ಮೈದಳೆದು ನಿಂತಿದೆ.ತುಮಕೂರು ದಸರಾ ಆಚರಣೆ ಹಿನ್ನೆಲೆ ಇಡೀ ನಗರದ ವಿದ್ಯುತ್ ದೀಪಾಲಂಕರದಿಂದ ಝಗಮಗಿಸುತ್ತಿದ್ದು, ಹಲವು ವೈಶಿಷ್ಟ್ಯಗಳನ್ನೊಳಗೊಂಡಂತೆ ಜಿಲ್ಲೆಯ ಜನರಿಗೆ ದಸರಾ ಹಬ್ಬದ ಸಂಭ್ರಮವನ್ನು ಉಣಬಡಿಸಲು ಸರ್ವ ರೀತಿಯಲ್ಲೂ ಜಿಲ್ಲಾಡಳಿತ ಸನ್ನದ್ಧವಾಗಿದೆ.
ದಸರಾದಲ್ಲಿ ಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಹೆಲಿಕಾಪ್ಟರ್ ಪ್ರವಾಸ (ಹೆಲಿ ರೈಡ್), ಕಾಲೇಜು ವಿದ್ಯಾರ್ಥಿಗಳಿಂದ ಪಂಜಿನ ಕವಾಯತು, ಫಲಫುಷ್ಪ ಪ್ರದರ್ಶನ, ಕಾರುಗಳ ಪ್ರದರ್ಶನ, ಮಹಿಳಾ ಬೈಕ್ ರೈಡ್, ರಂಗೋಲಿ ಸ್ಪರ್ಧೆ, ದೀಪಾಲಂಕಾರ, ಬಾಣ-ಬಿರುಸುಗಳ ಪ್ರದರ್ಶನ ನೋಡುಗರ ಕಣ್ಮನ ಸೆಳೆಯಲಿವೆ.ಮಹಿಳಾ ಮತ್ತು ಮಕ್ಕಳ ದಸರಾ, ಯುವ ದಸರಾ, ಕವಿಗೋಷ್ಠಿ ಹಾಗೂ ದಸರಾ ಕ್ರೀಡೆಯಲ್ಲಿ ನಾಡಕುಸ್ತಿ, ಕಬಡ್ಡಿ, ವಾಲಿಬಾಲ್, ಶೂಟಿಂಗ್, ಟೆನ್ನಿಸ್, ಜಿಮ್ನಾಸ್ಟಿಕ್, ಚೆಸ್ ಇತರೆ ಪಂದ್ಯಗಳು ನಡೆಯಲಿವೆ. ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳ ವಿಶೇಷ ದೀಪಾಲಂಕಾರವನ್ನು ನಗರದ ಜನತೆ ವೀಕ್ಷಿಸಲು ಈ ಬಾರಿ 2 ಅಂಬಾರಿ ಬಸ್ ವ್ಯವಸ್ಥೆ ಮಾಡಲಾಗಿದೆ.
ದಸರಾ ಅಂಗವಾಗಿ ಅಮಾನಿಕೆರೆಯಲ್ಲಿ ತುಮಕೂರು ಕಾರಂಜಿ ಹಾಗೂ ಎಸ್.ಎಸ್. ವೃತ್ತದಲ್ಲಿ ತುಮಕೂರು ಸ್ಕ್ವೇರ್ ಉದ್ಘಾಟನೆಯೂ ಸಹ ನಡೆಯಲಿದೆ.ಇಂದು ಚಾಲನೆ: