ಸರ್ವ ದಾರ್ಶನಿಕರ ಜಯಂತ್ಯುತ್ಸವಕ್ಕೆ ಕ್ಷಣಗಣನೆ

| Published : Nov 25 2025, 01:45 AM IST

ಸಾರಾಂಶ

ಒಂದೇ ವೇದಿಕೆಯಲ್ಲಿ ಕರೆತರಲು ನಾಳೆ ಬುಧವಾರ ಬೃಹತ್‌ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶಾಸಕ ಸುರೇಶ ಬಾಬು ಹೇಳಿದರು.

ಕನ್ನಡಪ್ರಭವಾರ್ತೆ ಚಿಕ್ಕನಾಯಕನಹಳ್ಳಿ

ಸರ್ಕಾರಗಳು ಹಲವಾರು ಸಮುದಾಯಗಳ ದಾರ್ಶನಿಕರ ಹಾಗೂ ಸಮಾಜ ಸುಧಾರಕರು ಸಾಧಕರ ಜಯಂತಿಗಳನ್ನು ಸರ್ಕಾರ ಆಚರಿಸುವಂತೆ ತೀರ್ಮಾನ ಮಾಡಿದರೂ ಕೆಲವು ಜಯಂತಿಗಳ ಆಚರಣೆಯಲ್ಲಿ ಬೆರಳಣಿಕೆಯಷ್ಟು ಜನ ಮಾತ್ರ ಭಾಗವಹಿಸುತ್ತಿದ್ದು, ಅವರನ್ನು ಒಂದೇ ವೇದಿಕೆಯಲ್ಲಿ ಕರೆತರಲು ನಾಳೆ ಬುಧವಾರ ಬೃಹತ್‌ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶಾಸಕ ಸುರೇಶ ಬಾಬು ಹೇಳಿದರು.

ಪಟ್ಟಣದ ಸರ್ಕಾರಿ ಪ್ರೌಡಶಾಲೆಯ ಆವರಣದಲ್ಲಿ ಸಿದ್ಧತೆಗಳನ್ನು ಪರಿಶೀಲಿಸಿದ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಸರ್ಕಾರ ಘೋಷಿಸಿರುವ ಹಾಗೂ ಕ್ಯಾಲೆಂಡರ್‌ನಲ್ಲಿರುವಂತಹ ಎಲ್ಲಾ ದಾರ್ಶನಿಕರ ಜಯಂತಿಯನ್ನು ಒಂದೇ ವೇದಿಕೆಯಲ್ಲಿ ಎಲ್ಲಾ ಸಮುದಾಯದವರ ಸಹಕಾರದೊಂದಿಗೆ ಆಚರಣೆ ಮಾಡಲು ನಿರ್ಧರಿಸಿದ್ದೇವೆ. ಅಂಬೇಡ್ಕರ್‌ರವರ ಕೊಡುಗೆಯಾದ ಸಂವಿಧಾನವನ್ನು ನಮ್ಮ ದೇಶಕ್ಕೆ ಸಮರ್ಪಣೆ ಮಾಡಿದ ದಿನವೇ ಈ ಸರ್ವದಾರ್ಶನಿಕರ ಜಯಂತಿಯನ್ನು ಆಚರಿಸಲು ತೀರ್ಮಾನಿಸಲಾಗಿದೆ ಎಂದರು.

ತಾಲೂಕಿನ ೩೩ ಸಮಾಜಗಳ ೫೨ ದಾರ್ಶನಿಕರ ಭಾವಚಿತ್ರವನ್ನು ಮೆರವಣಿಗೆ ಮಾಡುವುದು. ಪ್ರತಿ ಸಮಾಜದಿಂದ ಸ್ವಾಮೀಜಿ, ರಾಜಕೀಯ ಮುಖಂಡರು, ಸಾಹಿತಿಗಳಿಗೆ ಆಹ್ವಾನ ನೀಡಲಾಗಿದೆ. ನವೆಂಬರ್ ೨೬ರ ಬುಧವಾರ ಬೆಳಗ್ಗೆ ೧೦ಗಂಟೆಗೆ ಪುತ್ಥಳಿಗಳ ಅನಾವರಣದೊಂದಿಗೆ ಪ್ರಾರಂಭವಾಗಲಿದ್ದು, ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಸಚಿವ ಶಿವರಾಜ್‌ತಂಗಡಗಿ ಅನಾವಾರಣಗೊಳಿಸಲಿದ್ದು, ಶಾಸಕ ಟಿ.ಬಿ.ಜಯಚಂದ್ರ ಮಹಾತ್ಮ ಗಾಂದೀಜಿಯವರ ಪುತ್ಥಳಿಯನ್ನು ಆನಾವರಣಗೊಳಿಸುವರು. ಆಡಳಿತ ಸೌಧದ ಮುಂಭಾಗದಿಂದ ದಾರ್ಶನಿಕರ ಭಾವಚಿತ್ರವನ್ನೊಳಗೊಂಡ ಎಲ್ಲಾ ಸ್ತಬ್ಧಚಿತ್ರಗಳ ಮೆರವಣಿಗೆ ಊರಿನ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ.

ಪಟ್ಟಣದ ಸರ್ಕಾರಿ ಪ್ರೌಡಶಾಲೆಯ ಆವರಣದಲ್ಲಿ ಬೆಳಗ್ಗೆ ೧೧.೩೦ಕ್ಕೆ ವೇದಿಕೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು ಈ ಕಾರ್ಯಕ್ರಮದ ಸಾನ್ನಿಧ್ಯವನ್ನು ಸಿದ್ದಗಂಗಾ ಶ್ರೀಗಳು ವಹಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್‌ ಕಾರ್ಯಕ್ರಮ ಉದ್ಘಾಟಿಸಲಿದ್ದು , ತಾಲೂಕಿನ ಲಾಂಛನವನ್ನು ಗುಬ್ಬಿ ಶಾಸಕಎಸ್.ಆರ್.ಶ್ರೀನಿವಾಸ್ ಬಿಡುಗಡೆ ಮಾಡಲಿದ್ದಾರೆ. ಸಲಾಂ ಸಂವಿಧಾನ ಸಲಾಂ ಇಂಡಿಯಾ ಕಿರುಚಿತ್ರವನ್ನು ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಕೆ.ಎನ್.ರಾಜಣ್ಣ ಬಿಡುಗಡೆಮಾಡುವರು. ಎಲ್ಲಾ ದಾರ್ಶನಿಕರ ಚರಿತ್ರೆಯನ್ನೊಳಗೊಂಡ ೬೦೦ಪುಟಗಳ ಆಕರ ಗ್ರಂಥವನ್ನು ನಾಡೋಜ ಡಾ.ಹಂಪ ನಾಗರಾಜಯ್ಯ ಬಿಡುಗಡೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ನಾನು ವಹಿಸಲಿದ್ದೇನೆ ಎಂದರು. ಕಾರ್ಯಕ್ರಮವು ಜರ್ಮನ್‌ಟೆಂಟ್‌ನ ಒಟ್ಟು ೧೦೦* ೧೫೦ಅಡಿಗಳ ವಿಸ್ತೀರ್ಣದಲ್ಲಿ ಒಟ್ಟು ೭೨*೪೪ ಆಳತೆಯ ವೇದಿಕೆಯಲ್ಲಿ ಒಟ್ಟು ನೂರು ಜನರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ತಾಲೂಕಿನ ಎಲ್ಲಾ ಸಮುದಾಯಗಳ ಅದ್ಯಕ್ಷರುಗಳಿಗೆ ವಿಶೇಷ ವಿಭಾಗದಲ್ಲಿ ಆಸನದ ವ್ಯವಸ್ಥೆ. ಕಾರ್ಯಕ್ರಮದ ಉದ್ಘಾಟನೆಯ ವೇಳೆ ಹಾಲುಗೊಣದ ವಿಶೇಷ ಚೇತನ ಮಕ್ಕಳಿಂದ ಸ್ವಾಗತ ನೃತ್ಯ, ಸಂವಿಧಾನಕ್ಕೆ ಗೌರವ ಸಮರ್ಪಣೆ ಆಯೋಜಿಸಲಾಗಿದೆ ಎಂದರು. ಈ ಕಾರ್ಯಕ್ರಮವನ್ನು ಕುರಿತಂತೆ ಶಾಸಕ ಸಿ.ಬಿ.ಸುರೇಶ್‌ ಬಾಬು ಮಾತನಾಡಿ, ಈ ದೊಡ್ಡ ಕಾರ್ಯಕ್ರಮ ಪಕ್ಷಾತೀತವಾಗಿ, ಜಾತ್ಯತೀತವಾಗಿ, ಧರ್ಮಾತೀತವಾಗಿ ಆಯೋಜನೆ ಮಾಡಿದ್ದೇವೆ. ಇದರಲ್ಲಿ ಯಾರು ಮೇಲೂ ಕೀಳು ಎಂಬ ಭಾವನೆ ಇಲ್ಲ. ಎಲ್ಲರೂ ಒಂದೇ ಎಂಬ ಭಾವನೆಯಿದೆ ಎಂದರು.