ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಅ.23ರಂದು ಮತದಾನ ನಡೆಯಲಿದೆ. ಆದರೆ, ಈಗ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಅಭ್ಯರ್ಥಿಗಳಿಗೆ ಮತದಾರರನ್ನು ಭೇಟಿಯಾಗಲು ದಸರಾ ರಜೆ ಅಡ್ಡಿಯಾಗಿದೆ.
ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ । ದಸರಾ ರಜೆಯಲ್ಲಿ ಊರು ಸೇರಿದ ಶಿಕ್ಷಕರು ಮತ್ತು ಉಪನ್ಯಾಸಕರು; ಮತಯಾಚನೆಗೆ ಪರದಾಟ
ರಿಯಾಜಅಹ್ಮದ ಎಂ. ದೊಡ್ಡಮನಿ
ಕನ್ನಡಪ್ರಭ ವಾರ್ತೆ ಡಂಬಳಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಅ.23ರಂದು ಮತದಾನ ನಡೆಯಲಿದೆ. ಆದರೆ, ಈಗ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಅಭ್ಯರ್ಥಿಗಳಿಗೆ ಮತದಾರರನ್ನು ಭೇಟಿಯಾಗಲು ದಸರಾ ರಜೆ ಅಡ್ಡಿಯಾಗಿದೆ.
ಶಾಲಾ ಕಾಲೇಜುಗಳಿಗೆ ಅ. 3ರಿಂದ 21ರವರೆಗೆ ದಸರಾ ರಜೆ ಘೋಷಣೆಯಾಗಿದೆ. ಹೀಗಾಗಿ ಮತದಾರರಾದ ಪದವೀಧರರಾಗಿರುವ ಶಿಕ್ಷಕರು ಮತ್ತು ಉಪನ್ಯಾಸಕರು ಊರು ಸೇರಿದ್ದಾರೆ. ಅವರನ್ನು ಭೇಟಿಯಾಗಿ ಮತಯಾಚನೆ ಮಾಡುವುದು ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರಿಗೆ ಸವಾಲಾಗಿ ಪರಿಣಮಿಸಿದೆ.ಮನೆಗೆ ಹೋದರೂ ಸಿಗದ ಪದವೀಧರರು, ಶಿಕ್ಷಕರು:
ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ, ಬಿಜೆಪಿ ಅಭ್ಯರ್ಥಿ ಎಸ್.ವಿ.ಸಂಕನೂರ ಈ ಇಬ್ಬರು, ಅವರ ಬೆಂಬಲಿಗರು ಕಾಲಿಗೆ ಚಕ್ರಕಟ್ಟಿಕೊಂಡು ಮನೆ ಮನೆಗೆ ತೆರಳಿ ಶಿಕ್ಷಣ ಸಂಸ್ಥೆ ಹಾಗೂ ಶಿಕ್ಷಕರ ಮನೆಗಳ ಕದ ತಟ್ಟುತ್ತಿದ್ದಾರೆ. ಆದರೆ, ಅನೇಕ ಪದವೀಧರರು ಕುಟುಂಬ ಸಮೇತ ಸಂಬಂಧಿಕರ ಊರು ಸೇರಿದ್ದಾರೆ. ಮತದಾರರು ಕೈಗೆ ಸಿಗದೆ ಮತದಾನ ಮಾಡಿ ಎಂದು ಹೇಳುವುದು ಕಷ್ಟಕರವಾಗಿದೆ. ಹಾಗಾಗಿ ಮತ ಭಿಕ್ಷೆ ಪಡೆಯುವುದು ಹೇಗೆ ಎಂಬುದು ಅಭ್ಯರ್ಥಿಗಳ ಮುಂದಿರುವ ಯಕ್ಷ ಪ್ರಶ್ನೆಯಾಗಿದೆ.ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರವು ಒಟ್ಟು 4 ಜಿಲ್ಲೆಗಳನ್ನು ಒಳಗೊಂಡಿದೆ. (ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ) ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಮತ್ತು ಪಕ್ಷೇತರರಾಗಿ ನಿಂತಿರುವ ಬೆಂಬಲಿಗರು ಈಗಾಗಲೇ ಮನೆ ಮನೆ ಪ್ರಚಾರ ಶುರು ಮಾಡಿ ಮತದಾರ ಪದವೀಧರರ ದೂರವಾಣಿ ಸಂಖ್ಯೆ ಸಂಗ್ರಹ ಮಾಡುತ್ತಿದ್ದಾರೆ. ಫೋನ್ ಕರೆ ಮೂಲಕ ನಮ್ಮ ಪರವಾಗಿ ಮತ ಚಲಾಯಿಸಬೇಕು ಎಂದು ಮನವಿ ಮಾಡುತ್ತಿದ್ದಾರೆ.
ಪದವೀಧದರರು ನೇರವಾಗಿ ಸಿಗದಿದ್ದರೂ, ದೂರವಾಣಿ, ವಾಟ್ಸ್ ಆ್ಯಪ್, ಟ್ವಿಟರ್ ಮೂಲಕ ಅವರನ್ನು ತಲುಪುವ ಪ್ರಯತ್ನ ನಡೆದಿದೆ. ಪ್ರತಿಯೊಬ್ಬ ಮತದಾರನಿಗೆ ಕರೆ ಮಾಡಿ ಮತಯಾಚನೆ ನಡೆಸುವುದಕ್ಕಾಗಿಯೇ ಪ್ರತಿಯೊಬ್ಬ ಅಭ್ಯರ್ಥಿಯೂ ಐಟಿ ಸೆಲ್ ತೆರೆದಿದ್ದಾರೆ. ಆನ್ಲೈನ್, ವಿಡಿಯೋ ಕಾಲ್ಗಳು, ಟೆಕ್ಸ್ಟ್ ಸಂದೇಶಗಳ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಯುತ್ತಿದೆ.ಕಳೆದ ಎರಡು ಅವಧಿಯಿಂದಲೂ ಎಸ್.ವಿ. ಸಂಕನೂರ ಗೆಲುವು ಸಾಧಿಸುತ್ತಾ ಬಂದಿದ್ದಾರೆ.
ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮೋಹನ ಲಿಂಬಿಕಾಯಿ ಪ್ರಯತ್ನ ಚುರುಕುಗೊಂಡಿದ್ದು ಎರಡು ಪಕ್ಷಗಳು ಗೆಲವಿಗಾಗಿ ಎಲ್ಲಾ ರೀತಿಯಲ್ಲಿ ಕಸರತ್ತು ನಡೆಸುತ್ತಿವೆ. ಉಭಯ ಪಕ್ಷಗಳ ಅಭ್ಯರ್ಥಿಗಳು ಗೆಲುವಿಗಾಗಿ ತಮ್ಮದೇ ಆದ ತಂತ್ರ ಹೂಡುತ್ತಿದ್ದಾರೆ. ಹೀಗಾಗಿ ಚುನಾವಣಾ ಅಖಾಡ ರಂಗೇರುತ್ತಿದೆ. ಮತದಾರರ ಒಲವು ಗಳಿಸಲು ಎರಡು ಪಕ್ಷದ ಅಭ್ಯರ್ಥಿಗಳು ಪ್ಲಾನ್ ಮಾಡಿಕೊಂಡಿದ್ದಾರೆ. ಹೀಗಾಗಿ ಲೆಕ್ಕಾಚಾರಗಳು ಬುಡಮೇಲಾಗುವ ಸಾಧ್ಯತೆ ದಟ್ಟವಾಗಿವೆ.