ಮೋದಿ ಆಡಳಿತದಿಂದ ದೇಶ ಸುಭದ್ರವಾಗಿರಲು ಸಾಧ್ಯ

| Published : Apr 16 2024, 01:01 AM IST

ಸಾರಾಂಶ

ಕಾಂಗ್ರೆಸ್ ನವರು ರಾಹುಲ್ ಗಾಂಧಿಯನ್ನು ಲೀಡರ್ ಮಾಡಲು ಹೊರಟಿದ್ದಾರೆ. ಆದರೆ, ಅವರು ಲೀಡರ್ ಆಗಲು ಸಿದ್ದರಿಲ್ಲ

ಶಿರಹಟ್ಟಿ: ಮೋದಿ ಅವರ ಆಡಳಿತದಿಂದ ಮಾತ್ರ ದೇಶ ಸುಭದ್ರವಾಗಿರಲು ಸಾಧ್ಯ ಎನ್ನುವುದನ್ನು ದೇಶದ ಜನರು ಮನಗಂಡಿದ್ದು, ಈ ಬಾರಿ 400ಕ್ಕೂ ಹೆಚ್ಚು ಸ್ಥಾನ ಬಿಜೆಪಿ ಗೆದ್ದು ಮತ್ತೊಮ್ಮೆ ಮೋದಿ ಪ್ರಧಾನಿಯಾಗಲಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

ಅವರು ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದರು.

ಇದೊಂದು ಮಹತ್ವದ ಚುನಾವಣೆ. ಈ ದೇಶದ ಚುಕ್ಕಾಣಿ ಯಾರು ಹಿಡಿಯಬೇಕು ಎನ್ನುವುದು ಮುಖ್ಯ. ಪ್ರತಿಯೊಬ್ಬ ಮತದಾರನಿಗೂ ತನ್ನ ಮತ ಗೆಲ್ಲಬೇಕೆಂಬ ಆಸೆ ಇರುತ್ತದೆ. ಯಾರು ದೇಶದ ಚುಕ್ಕಾಣಿ ಹಿಡಿಯಲಿದ್ದಾರೆ ಅವರಿಗೆ ಮತ ಹಾಕಿದರೆ ಮತ ಗೆಲ್ಲುತ್ತದೆ ಎನ್ನುವುದು ಜನರ ಭಾವನೆ.

ಕಾಂಗ್ರೆಸ್ ನವರು ರಾಹುಲ್ ಗಾಂಧಿಯನ್ನು ಲೀಡರ್ ಮಾಡಲು ಹೊರಟಿದ್ದಾರೆ. ಆದರೆ, ಅವರು ಲೀಡರ್ ಆಗಲು ಸಿದ್ದರಿಲ್ಲ. ಮದುವೆ ಮಾಡಲು ಮದುಮಗನ ರೆಡಿ ಇಲ್ಲ. ಮದುವೆ ಆಗದ ಹುಚ್ಚು ಬಿಡುವುದಿಲ್ಲ, ಹುಚ್ಚು ಬಿಡದೆ ಮದುವೆ ಆಗುವುದಿಲ್ಲ. ಎನ್ನುವಂತಾಗಿದೆ ಕಾಂಗ್ರೆಸ್ ಪರಿಸ್ಥಿತಿ ಎಂದು ಲೇವಡಿ ಮಾಡಿದರು.

ಮೋದಿ ಅಧಿಕಾರಕ್ಕೆ ಬಂದ ಮೇಲೆ 25 ಕೋಟಿ ಜನರು ಬಡತನದಿಂದ ಮೇಲೆ ಬಂದಿದ್ದಾರೆ. ಜನಸಂಖ್ಯೆ ಶಾಪ ಅಂತಿದ್ದರು. ಅದೇ ಜನಸಂಖ್ಯೆಯನ್ನು ಆಸ್ತಿಯನ್ನಾಗಿ ಬಳಕೆ ಮಾಡಿಕೊಂಡವರು ಪ್ರಧಾನಿ ಮೋದಿಯವರು, 4 ಕೋಟಿ ಮನೆ ನಿರ್ಮಾಣ ಮಾಡಿದ್ದಾರೆ. ಪ್ರತಿ ಮನೆಗೂ ಉಚಿತ ಹತ್ತು ಕೆಜಿ ಅಕ್ಕಿ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಒಂದುಕಾಳು ಅಕ್ಕಿ ಕೂಡ ಕೊಟ್ಟಿಲ್ಲ. ಈಗ ಲಕ್ಷಗಟ್ಟಲೆ ರೇಷನ್ ಕಾರ್ಡ್ ರದ್ದು ಮಾಡಿದ್ದಾರೆ. ರೇಷನ್ ಕಾರ್ಡ್ ಮಾಡಿಕೊಡಲು ₹15 ಸಾವಿರ ಮಾಮೂಲಿ ಕೇಳುತ್ತಿದ್ದಾರೆ ಎಂದು ಜನರು ಹೇಳುತ್ತಿದ್ದಾರೆ ಎಂದು ಹೇಳಿದರು.

ಮಾಜಿ ಸಚಿವ, ನರಗುಂದ ಶಾಸಕ ಸಿ.ಸಿ. ಪಾಟೀಲ, ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ, ಮಾಜಿ ಜಿಲ್ಲಾಧ್ಯಕ್ಷ ಎಂ.ಎಸ್.ಕರಿಗೌಡ್ರ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರುಡಗಿ ಮುಂತಾದವರು ಮಾತನಾಡಿದರು. ಜಿಪಂ ಮಾಜಿ ಸದಸ್ಯರುಗಳಾದ ಶಿವಪ್ರಕಾಶ ಮಹಾಜನಶೆಟ್ಟರ, ಎಂ.ಎಸ್. ದೊಡ್ಡಗೌಡ್ರ ಸಾವಿರಾರು ಬೆಂಬಲಿಗರೊಂದಿಗೆ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಚಂದ್ರಕಾಂತ ನೂರಶೆಟ್ಟರ, ಜಿಪಂ ಮಾಜಿ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ, ಭೀಮಸಿಂಗ್ ರಾಠೋಡ, ಜಿಪಂ ಮಾಜಿ ಅಧ್ಯಕ್ಷ ನಿಂಗಪ್ಪ ಕೆಂಗಾರ, ಸುನೀಲ ಮಹಾಂತಶೆಟ್ಟರ, ತಿಮ್ಮರಡ್ಡಿ ಮರಡ್ಡಿ, ಮೋಹನ ಗುತ್ತೆಮ್ಮನವರ, ಶಂಕರ ಮರಾಠೆ, ಫಕ್ಕೀರೇಶ ರಟ್ಟಿಹಳ್ಳಿ, ಹೇಮಗಿರೀಶ ಹಾವಿನಾಳ, ನಂದಾ ಪಲ್ಲೇದ, ಬಸವರಾಜ ಸಜ್ಜನರ ಸೇರಿದಂತೆ ಹಲವಾರು ಮುಖಂಡರು, ಕಾರ್ಯಕರ್ತರು ಹಾಜರಿದ್ದರು.

ಕಾಂಗ್ರೆಸ್ ಅವಧಿಯಲ್ಲಿ ಎಲ್ಲವೂ ದುಬಾರಿ:

ರಾಜ್ಯದಲ್ಲಿ ಬರಗಾಲ ಬಂದಿದೆ. ಒಂದು ಬೋರ್ ವೆಲ್ ಹಾಕಿಸಲು ಆಗುತ್ತಿಲ್ಲ. ಬೊರ್ ವೆಲ್‌ ಕರೆಂಟ್ ಪಡೆಯಲು ಟಿಸಿ ಹಾಕಿಸಲು ಎರಡೂವರೆ ಲಕ್ಷ ರೂ.ಪಡೆಯುತ್ತಿದ್ದಾರೆ. ಕಾಂಗ್ರೆಸ್ ಅವಧಿಯಲ್ಲಿ ಎಲ್ಲವೂ ದುಬಾರಿಯಾಗಿದೆ. .ಕೋವಿಡ್ ಸಂದರ್ಭದಲ್ಲಿ ಮೋದಿ ದೇಶದ ಎಲ್ಲ ಪ್ರಜೆಗಳಿಗೂ ಮೂರು ಬಾರಿ ಲಸಿಕೆ ಹಾಕಿಸಿದರು. ಅವರಿಗೆ ಧನ್ಯವಾದ ಹೇಳುವ ಸಮಯ ಬಂದಿದೆ. ಮೋದಿಯವರು ಅನ್ನ, ನೀರು ಕೊಟ್ಟಿದ್ದಾರೆ. ಅವರಿಗೆ ಮತದಾನ ಮಾಡುವ ಮೂಲಕ ಕೃತಜ್ಞತೆ ಸಲ್ಲಿಸಬೇಕು ಎಂದು ಹೇಳಿದರು.