ಹಕ್ಕು-ಕರ್ತವ್ಯಕ್ಕೆ ಬದ್ಧರಾಗಿ ದುಡಿದರೆ ದೇಶ ಅಭಿವೃದ್ಧಿ: ಸಿಇಒ ಕಾಂದೂ

| Published : Jan 27 2024, 01:20 AM IST

ಸಾರಾಂಶ

ಸಂವಿಧಾನದಲ್ಲಿ ತಿಳಿಸಿರುವ ನಮ್ಮ ಜವಾಬ್ದಾರಿ, ಹಕ್ಕು ಹಾಗೂ ಕರ್ತವ್ಯಗಳಿಗೆ ಬದ್ಧರಾಗಿ ಒಂದು ತಂಡವಾಗಿ ಒಗ್ಗಟ್ಟಿನಿಂದ ಕೆಲಸ, ಕಾರ್ಯ ಮಾಡಿದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿದೆ.

ಕಾರವಾರ:

ಸಂವಿಧಾನದಲ್ಲಿ ತಿಳಿಸಿರುವ ನಮ್ಮ ಜವಾಬ್ದಾರಿ, ಹಕ್ಕು ಹಾಗೂ ಕರ್ತವ್ಯಗಳಿಗೆ ಬದ್ಧರಾಗಿ ಒಂದು ತಂಡವಾಗಿ ಒಗ್ಗಟ್ಟಿನಿಂದ ಕೆಲಸ, ಕಾರ್ಯ ಮಾಡಿದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದು ಜಿಪಂ ಸಿಇಒ ಈಶ್ವರಕುಮಾರ ಕಾಂದೂ ಹೇಳಿದರು.ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ 75ನೇ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸಂವಿಧಾನ ರಚನೆಯ ವೇಳೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ಅಂಶವನ್ನು ಗಮನದಲ್ಲಿ ಇಸಿರಿಕೊಂಡೇ ಪೀಠಿಕೆಯಲ್ಲಿ ನಾವೆಲ್ಲರೂ ಭಾರತೀಯರು ಎಂಬ ಸಂಗತಿ ಸೇರಿಸಿದ್ದಾರೆ. ಹೀಗಾಗಿ ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿ ಸಂವಿಧಾನದ ಪೀಠಿಕೆಯನ್ನು ಸಮಗ್ರವಾಗಿ ಓದಿ ಅರ್ಥೈಸಿಕೊಂಡು ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು ಎಂದರು.ಕಳೆದ ಒಂದು ವರ್ಷದಿಂದ ಪ್ರಸ್ತುತ ಗಣರಾಜ್ಯೋತ್ಸವ ದಿನದ ವರೆಗೂ ಎಲ್ಲ ಅಧಿಕಾರಿಗಳು, ಸಿಬ್ಬಂದಿ ಉತ್ತಮವಾಗಿ ಕೆಲಸ-ಕಾರ್ಯ ನಿರ್ವಹಿಸುವ ಮೂಲಕ ಅಗತ್ಯ ಸಹಾಯ, ಸಹಕಾರ ನೀಡಿದ್ದೀರಿ. ಇದರ ಪರಿಣಾಮವಾಗಿ ಜನಪರ ಯೋಜನೆಗಳಾದ ಮಹಾತ್ಮಗಾಂಧಿ ನರೇಗಾ, ಎಸ್‌ಬಿಎಂ, ಎನ್‌ಆರ್‌ಎಲ್‌ಎಂ, ವಸತಿ, 14-15ನೇ ಹಣಕಾಸು ಹಾಗೂ ಜೆಜೆಎಂ ಕಾಮಗಾರಿಗಳನ್ನು ಸಮರ್ಪಕವಾಗಿ ಗ್ರಾಮೀಣ ಜನರಿಗೆ ತಲುಪಿಸುವ ಪ್ರಯತ್ನ ಮಾಡಲಾಗಿದೆ ಎಂದರು.ಕಳೆದ ವಿಧಾನಸಭೆ ಚುನಾವಣೆ ವೇಳೆ ಎಲ್ಲ ಸಿಬ್ಬಂದಿ ಅಚ್ಚುಕಟ್ಟಾಗಿ ನೀಡಿದ ಕೆಲಸ ಮಾಡಿದ್ದರಿಂದ ಜಿಲ್ಲೆಯ ಸ್ವೀಪ್ ನೋಡಲ್ ಅಧಿಕಾರಿಯಾಗಿ ಸ್ವೀಪ್ ಚಟುವಟಿಕೆ ಆಯೋಜಿಸುವ ಮೂಲಕ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ. ಇದನ್ನು ರಾಜ್ಯ ಚುನಾವಣಾ ಆಯೋಗ ಗುರುತಿಸಿ ರಾಷ್ಟ್ರೀಯ ಮತದಾರರ ದಿನ-2024ರ ನಿಮಿತ್ತ ಕೊಡಮಾಡುವ ರಾಜ್ಯಮಟ್ಟದ ಅತ್ಯುತ್ತಮ ಸ್ವೀಪ್ ನೋಡಲ್ ಅಧಿಕಾರಿ ಪ್ರಶಸ್ತಿ ನೀಡಿದೆ ಎಂದು ತಿಳಿಸಿದರು.ಜಿಪಂ ಮುಖ್ಯ ಲೆಕ್ಕಾಧಿಕಾರಿ ಡಾ. ಆನಂದ ಸಾಹಬೀಬ್, ಆಡಳಿತ ಶಾಖೆಯ ಸಹಾಯಕ ಕಾರ್ಯದರ್ಶಿ ಸುನೀಲ ನಾಯ್ಕ, ಅಭಿವೃದ್ಧಿ ಶಾಖೆಯ ಸಹಾಯಕ ಕಾರ್ಯದರ್ಶಿ ಜಿ.ಆರ್. ಭಟ್, ಸಹಾಯಕ ಯೋಜನಾಧಿಕಾರಿ ಸುರೇಶ ನಾಯ್ಕ ಇದ್ದರು.