ಕಾಂಗ್ರೆಸ್ ನಾಯಕರು ತಮ್ಮ ಪಕ್ಷದ ಪ್ರಮಾದಕ್ಕಾಗಿ ಈಗಲಾದರೂ ದೇಶದ ಕ್ಷಮೆ ಕೇಳಬೇಕು
ಕೊಪ್ಪಳ: ನೆರೆ ರಾಷ್ಟ್ರಗಳಲ್ಲಿ ದಂಗೆಗಳಿಂದ ಆಡಳಿತ ವ್ಯವಸ್ಥೆ ಕುಸಿದರೂ ಭಾರತದಲ್ಲಿ ಆಡಳಿತ ವ್ಯವಸ್ಥೆ ಸುಭದ್ರವಾಗಿರುವುದಕ್ಕೆ ಕಾರಣ ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದ ತಜ್ಞರು ಕೊಟ್ಟ ಸಂವಿಧಾನ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ಹೇಳಿದರು.
ನಗರದ ಜಿಲ್ಲಾ ಜೆಡಿಎಸ್ ಕಾರ್ಯಾಲಯದಲ್ಲಿ ನಡೆದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಡೀ ವಿಶ್ವದಲ್ಲಿಯೇ ಅತ್ಯಂತ ಸದೃಢ ಸಂವಿಧಾನ ಹೊಂದಿದ ಏಕೈಕ ರಾಷ್ಟ್ರ ಭಾರತ. ಅಧ್ಯಕ್ಷೀಯ ಮಾದರಿಯ ಅಮೆರಿಕದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಿಥಿಲಗಳು ಕಂಡುಬರುತ್ತವೆ. ಸದೃಢ ಸಂವಿಧಾನರಹಿತ ನೆರೆಯ ನೇಪಾಳ, ಬಾಂಗ್ಲಾದೇಶ ಹಾಗೂ ಶ್ರೀಲಂಕಾ ದೇಶಗಳಲ್ಲಿ ಸ್ಥಿತ್ಯಂತರಗಳಾಗಿವೆ. ಜಾಗತಿಕಗಳ ತಲ್ಲಣಗಳ ನಡುವೆಯೂ ಭಾರತ ದೇಶ ಸುಭದ್ರವಾಗಿರಲು ಮುಖ್ಯ ಕಾರಣ ನಾವು ಅಳವಡಿಸಿಕೊಂಡಿರುವ ಸಂವಿಧಾನ. ಇದು ವಿಶ್ವಕ್ಕೆ ಮಾದರಿ ಎಂದರು.ರಾಷ್ಟ್ರದ ಮೇಲೆ ತುರ್ತು ಪರಿಸ್ಥಿತಿ ಹೇರಿ ಹಾಗೂ ಸಂವಿಧಾನದ 356 ನೇ ವಿಧಿಯನ್ನು 90ಕ್ಕಿಂತಲೂ ಹೆಚ್ಚು ಸಲ ದುರ್ಬಳಕೆ ಮಾಡಿಕೊಂಡು ದಶಕಗಳ ಕಾಲ ಕಾಂಗ್ರೆಸ್ ಪಕ್ಷ ಸಂವಿಧಾನದ ಮೇಲೆ ಸವಾರಿ ನಡೆಸಿದೆ.ಕಾಂಗ್ರೆಸ್ ನಾಯಕರು ತಮ್ಮ ಪಕ್ಷದ ಪ್ರಮಾದಕ್ಕಾಗಿ ಈಗಲಾದರೂ ದೇಶದ ಕ್ಷಮೆ ಕೇಳಬೇಕು. ತಮ್ಮನ್ನು ಚುನಾಯಿಸಿದ ಜನರ ಬೇಡಿಕೆ ಸಂಪೂರ್ಣವಾಗಿ ನಿರ್ಲಕ್ಷಿಸಿ ಕೊಪ್ಪಳವನ್ನು ಖಾಸಗಿ ಕಾರ್ಖಾನೆಗಳ ಮಾಲೀಕರ ಕೈಗೆ ನೀಡಿದ ಕಾಂಗ್ರೆಸ್ ಪಕ್ಷದ ಕುತಂತ್ರದ ವಿರುದ್ಧ ಜೆಡಿಎಸ್ ಪ್ರತಿಭಟನೆ ನಡೆಸಲಿದೆ. ಆ ಪಕ್ಷದ ಸಂವಿಧಾನ ವಿರೋಧಿ ನೀತಿ ಜನರಿಗೆ ತಲುಪಿಸುವ ಕೆಲಸ ಮಾಡಲಿದೆ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ ಭೂಮರೆಡ್ಡಿ ಮಾತನಾಡಿ, ಸಂವಿಧಾನದ 371 ಜೆ ವಿಧಿಯಡಿ ನಮ್ಮ ಭಾಗಕ್ಕೆ ಸಿಗಬೇಕಾದ ಸವಲತ್ತು ಒದಗಿಸಿಕೊಡಲು ರಾಜ್ಯ ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದು ಆಗ್ರಹಿಸಿದರು. ಸಂವಿಧಾನ ಪೀಠಿಕೆ ಓದಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಜಡಿ, ಪೀಠಿಕೆಯನ್ನು ಓದುವ ಚಟುವಟಿಕೆಯನ್ನು ಸಂಸ್ಕೃತಿಯಾಗಿ ಬಳಸಬೇಕು ಎಂದರು.ಪಕ್ಷದ ಓಬಿಸಿ ಜಿಲ್ಲಾಧ್ಯಕ್ಷ ಕರಿಯಪ್ಪ ಹಾಲವರ್ತಿ, ಜಿಲ್ಲಾ ಸಂಸ್ಕೃತಿ ವಿಭಾಗದ ಅಧ್ಯಕ್ಷ ಮಂಜುನಾಥ್, ಎಸ್ಟಿ ಮೋರ್ಚಾ ವಿಭಾಗದ ಜಿಲ್ಲಾಧ್ಯಕ್ಷ ರಮೇಶ್ ಡಂಬ್ರಳ್ಳಿ, ತಾಲೂಕು ಗ್ರಾಮೀಣ ಘಟಕದ ಅಧ್ಯಕ್ಷ ವೀರೇಶಗೌಡ ದಳಪತಿ, ನಗರ ಘಟಕದ ಅಧ್ಯಕ್ಷ ಸೋಮನಗೌಡ, ನಗರ ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಲ ಎನ್. ಮೇದಾರ್, ವಸಂತಕುಮಾರ್ ಹಟ್ಟಿ, ಸುರೇಶ್ ದದೇಗಲ್, ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ ಏಣಿಗಿ, ಮಾರುತಿ ಗೌಡ ಹಿರೇಬಗನಾಳ, ಮಾರುತಿ ಹರಿಜನ, ಸಿದ್ದು ಪಾಟೀಲ್, ಅಭಿಷೇಕ್ ಡಂಬ್ರಳ್ಳಿ, ಮಲ್ಲೇಶ ಬೇಳೂರು, ಗಂಗಾಧರ್ ವಸ್ತ್ರದ, ವಿಜಯಕುಮಾರ್ ಕಂಪ್ಲಿ, ಬಸವರಾಜ್ ಗೊಂದಳಿ, ರಾಜು ನರೇಗಲ್, ಲಕ್ಷ್ಮಣ ಅಳವಂಡಿ, ರಂಗಪ್ಪ ಬೋವಿ, ರತ್ನಮ್ಮ ಹಿರೇಮಠ, ಶರಣಮ್ಮ ಸಂಗನಾಳ, ವೀಣಾ ಮೇದಾರ, ಅನ್ನಪೂರ್ಣ ಹಡಪದ, ಭಾಗ್ಯ ಐವಳಿ, ವಿಶಾಲಾಕ್ಷಿ ಕುರಬರ, ಅನಿತಾ ಹಡಪದ ಸೇರಿದಂತೆ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.