ದೇಶಕ್ಕೆ ಮೋದಿಯಂತಹ ನಾಯಕನ ಅವಶ್ಯಕತೆಯಿದೆ: ಎಚ್ಡಿ ದೇವೇಗೌಡ

| Published : Apr 16 2024, 01:01 AM IST

ದೇಶಕ್ಕೆ ಮೋದಿಯಂತಹ ನಾಯಕನ ಅವಶ್ಯಕತೆಯಿದೆ: ಎಚ್ಡಿ ದೇವೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿದ್ದು ಸೋನಿಯಾಗಾಂಧಿ. ನಾನು ಅದನ್ನು ಇಲ್ಲ ಎನ್ನುವುದಿಲ್ಲ ಎಂದ ಅವರು, ನಾನು ಈ ಹಿಂದೆ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಬರುವ ಉದ್ದೇಶ ಹೊಂದಿರಲಿಲ್ಲ. ಆದರೂ ಕಾಂಗ್ರೆಸ್‌ನವರು ನನ್ನನ್ನು ಕರೆತಂದು ಸೋಲಿಸಿದರು. ಹಾಗಾಗಿ ನಾನು ರಾಜಕೀಯದಲ್ಲಿ ಯಾರನ್ನೂ ನಂಬುವುದಿಲ್ಲ .

ಕನ್ನಡಪ್ರಭ ವಾರ್ತೆ ತುಮಕೂರು

ಇಂಡಿಯಾ (ಐಎನ್‌ಡಿಎ) ಒಕ್ಕೂಟದಲ್ಲಿ ಯಾರಿಗೂ ಪ್ರಧಾನಿಯಾಗುವ ಯೋಗ್ಯತೆ ಇಲ್ಲ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಎಚ್.ಡಿ. ದೇವೇಗೌಡ ಹೇಳಿದರು.

ತುಮಕೂರು ತಾಲೂಕಿನ ಊರ್ಡಿಗೆರೆಯಲ್ಲಿ ಎನ್‌ಡಿಎ ಅಭ್ಯರ್ಥಿ ವಿ. ಸೋಮಣ್ಣ ಅವರ ಪರ ನಡೆದ ಕಾರ್ಯಕರ್ತರು ಹಾಗೂ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮದು ದೊಡ್ಡ ದೇಶ. ನಮ್ಮ ದೇಶಕ್ಕೆ ನರೇಂದ್ರ ಮೋದಿಯವರಂತಹ ದಿಟ್ಟ ಪ್ರಧಾನಿಯ ಅಗತ್ಯವಿದೆ. ಹಾಗಾಗಿ ನರೇಂದ್ರ ಮೋದಿಯವರನ್ನು 3ನೇ ಬಾರಿಗೆ ಪ್ರಧಾನಿ ಮಾಡಲು ನಾವೆಲ್ಲೂ ಪಣ ತೊಡಬೇಕು ಎಂದು ಕರೆ ನೀಡಿದರು.

ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿದ್ದು ಸೋನಿಯಾಗಾಂಧಿ. ನಾನು ಅದನ್ನು ಇಲ್ಲ ಎನ್ನುವುದಿಲ್ಲ ಎಂದ ಅವರು, ನಾನು ಈ ಹಿಂದೆ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಬರುವ ಉದ್ದೇಶ ಹೊಂದಿರಲಿಲ್ಲ. ಆದರೂ ಕಾಂಗ್ರೆಸ್‌ನವರು ನನ್ನನ್ನು ಕರೆತಂದು ಸೋಲಿಸಿದರು. ಹಾಗಾಗಿ ನಾನು ರಾಜಕೀಯದಲ್ಲಿ ಯಾರನ್ನೂ ನಂಬುವುದಿಲ್ಲ ಎಂದರು.

ಕುಮಾರಸ್ವಾಮಿ ಇಡೀ ದೇಶದಲ್ಲಿಯೇ ಉತ್ತಮವಾದ ಪಂಚರತ್ನ ಯೋಜನೆ ರೂಪಿಸಿದ್ದರು. ಇಡೀ ರಾಜ್ಯದ ನೀರನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಬಗ್ಗೆಯೂ ಯೋಜನೆ ರೂಪಿಸಿದ್ದರು. ಅಲ್ಲದೆ ಬಡವರು, ರೈತರ 25 ಕೋಟಿ ಸಾಲ ಮನ್ನಾ ಮಾಡಿದರು. ಇಂತಹ ಕುಮಾರಸ್ವಾಮಿ ಹೆಣ್ಣು ಮಕ್ಕಳ ಬಗ್ಗೆ ಕೀಳಾಗಿ ಮಾತನಾಡುತ್ತಾರೆಯೇ, ಇದೆಲ್ಲಾ ಕಾಂಗ್ರೆಸ್‌ನವರ ಚಿತಾವಣೆ ಎಂದು ಅವರು ಹೇಳಿದರು.

ಮಹಿಳೆಯರಿಗೆ ಮೀಸಲಾತಿ ಕೊಟ್ಟವರು ಯಾರು ಎಂದು ಪ್ರಶ್ನಿಸಿದ ಅವರು, ಮಹಿಳೆಯರಿಗೆ 68 ರು. ಮಾಸಾಶನವನ್ನು ನಾನು ಜಾರಿಗೆ ತಂದೆ. ಅದನ್ನು ನನ್ನ ಮಗ ಕುಮಾರಸ್ವಾಮಿ ೨ ಸಾವಿರ ರುಪಾಯಿಗೆ ಏರಿಕೆ ಮಾಡಿದ್ದರು ಎಂದರು.

ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳಿಗೆ ಮಾರು ಹೋಗಬೇಡಿ, ಈ ದೇಶವನ್ನು ಆಳುವ ಶಕ್ತಿ ಕೇವಲ ಮೋದಿಗೆ ಮಾತ್ರ ಇದ್ದು, ಎನ್‌ಡಿಎ ಅಭ್ಯರ್ಥಿ ಸೋಮಣ್ಣ ರವರಿಗೆ ಮತ ಚಲಾಯಿಸುವ ಮೂಲಕ ನರೇಂದ್ರ ಮೋದಿಯವರ ಕೈ ಬಲಪಡಿಸಬೇಕು ಎಂದರು.

ಸಮಾವೇಶದಲ್ಲಿ ಮಾಜಿ ಸಚಿವ ಗೋಪಾಲಯ್ಯ, ಮಾಜಿ ಶಾಸಕ ನಿಂಗಪ್ಪ, ನೆ.ಲ. ನರೇಂದ್ರಬಾಬು, ವೈ.ಎ. ನಾರಾಯಣಸ್ವಾಮಿ, ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಆರ್.ಸಿ. ಅಂಜಿನಪ್ಪ, ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ಲಕ್ಷ್ಮೀಶ್ , ಮುಖಂಡರಾದ ಅನ್ನದಾನಪ್ಪ, ತಿಪ್ಪೇಸ್ವಾಮಿ, ಹುಚ್ಚಯ್ಯ, ದೇವರಾಜು, ಗೂಳೂರು ಶಿವಕುಮಾರ್, ಲಕ್ಷ್ಮೀನಾರಾಯಣ್, ಮಾಜಿ ತಾ.ಪಂ. ಸದಸ್ಯೆ ಯಶೋಧಮ್ಮ, ಊರ್ಡಿಗೆರೆ ಗ್ರಾಪಂ ಅಧ್ಯಕ್ಷೆ ಅನ್ನಪೂರ್ಣ, ಮುಖಂಡರಾದ ಸಿದ್ದೇಗೌಡ, ರಾಜಶೇಖರ್, ಪ್ರಭಾಕರ್ ಸೇರಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.