ಸಾರಾಂಶ
ಕನ್ನಡಪ್ರಭ ವಾರ್ತೆ ಸಿರಿಗೆರೆ
ಕನ್ನಡದ ಪ್ರಸಿದ್ಧ ಲೇಖಕ ಪೂರ್ಣಚಂದ್ರ ತೇಜಸ್ವಿಯವರ ಕೃಷ್ಣೇಗೌಡರ ಆನೆ ನೀಳ್ಗತೆ ಕುರಿತು ಇಲ್ಲಿನ ಗುರುಶಾಂತೇಶ್ವರ ದಾಸೋಹ ಭವನದಲ್ಲಿ ಸಂವಾದ ಗೋಷ್ಠಿ ನಡೆಯಿತು.ಕೃತಿಯ ಕುರಿತು ಮಾತನಾಡಿದ ಚಿಕ್ಕಮಗಳೂರಿನ ವಿಮರ್ಶಕ ಹಾಗೂ ಅಂಕಣಕಾರ ಎಚ್.ಎಸ್.ಸತ್ಯನಾರಾಯಣ ಅವರು, ಪ್ರಸ್ತುತ ಸಮಾಜದ ನೈಜ ಸಂಗತಿಗಳನ್ನು ಲೇಖಕರು ನೀಳ್ಗತೆಯ ಉದ್ದಕ್ಕೂ ಚಿತ್ರಿಸಿದ್ದಾರೆ. ಬದುಕಿನ ಗಂಭೀರ ಕಾಳಜಿ ಮತ್ತು ಕಾಣದ ಕ್ಷುದ್ರ ರಹಸ್ಯಗಳನ್ನು ಪತ್ತೆದಾರಿ ರೀತಿಯಲ್ಲಿ ಕಾಣಿಸುವ ಅಂಶಗಳು ಕಥೆಯಲ್ಲಿವೆ. ಪ್ರಸ್ತುತ ಭಾರತದ ಸಾಮಾಜಿಕ ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಅಧಿಕಾರಶಾಹಿ ವ್ಯವಸ್ಥೆಯ ಹಿಡಿತಗಳನ್ನು ಕೃತಿಯಲ್ಲಿ ತಿಳಿಹಾಸ್ಯದ ಮೂಲಕ ಹೇಳಿದ್ದಾರೆ ಎಂದರು.
ಕೃತಿಯಲ್ಲಿ ಬರುವ ಹಲವು ವೈರುಧ್ಯ ಹಾಗೂ ದುರಂತ ಸನ್ನಿವೇಶಗಳಿಗೆ, ಪ್ರಸ್ತುತ ಸಂದರ್ಭದಲ್ಲಿ ಹಲವು ಇಲಾಖೆಗಳಲ್ಲಿ ನಡೆಯುತ್ತಿರುವ ಅವ್ಯವಸ್ಥೆ, ಭ್ರಷ್ಟಾಚಾರ, ಮನುಷ್ಯನ ಸಂಕುಚಿತ ಮನಸ್ಥಿತಿಗಳಿಗೆ ಸಾಂಕೇತಿಕವಾಗಿ ಆನೆ ಬಳಸಿಕೊಳ್ಳುವ ಮೂಲಕ ಅದನ್ನು ಅಪರಾಧಿ ಎಂಬಂತೆ ಚಿತ್ರಿಸುವ ತಂತ್ರವು ಚೆನ್ನಾಗಿಯೇ ಮೂಡಿಬಂದಿದೆ ಎಂದು ಅಭಿಪ್ರಾಯಪಟ್ಟರು.ಬೆಂಗಳೂರಿನ ರಂಗಕರ್ಮಿ, ಪತ್ರಕರ್ತ ಶಶಿಕಾಂತ ಯಡಹಳ್ಳಿ ಮಾತನಾಡಿ, ತೇಜಸ್ವಿಯವರು ಸರಳಭಾಷೆ, ಹಾಸ್ಯಮಯವಾಗಿ ಕಥೆಯನ್ನು ಮಾನವಧರ್ಮ, ವಿಶ್ವಧರ್ಮದ ದೃಷ್ಠಿಕೋನ ಇಟ್ಟುಕೊಂಡು ಕಥೆ ಸೃಷ್ಠಿಸಿದ್ದಾರೆ. ಕೆಳವರ್ಗದ ನೌಕರರ ಬಗೆಗಿನ, ವ್ಯವಸ್ಥೆಯಲ್ಲಿನ ನೂನ್ಯತೆ ಹಾಗೂ ದೌರ್ಬಲ್ಯ ಹಾಗೂ ಇತ್ತೀಚಿನ ಘಟನೆ ಆಧರಿಸಿ ಕಥೆಗಾರರು ಇಲ್ಲಿ ವಿವರಿಸಿದ್ದರಿಂದ ಈ ಕಥೆಗೆ ರಾಷ್ಟ್ರೀಯ ಕಥಾಪುರಸ್ಕಾರ ಎಂಬ ಪ್ರಶಸ್ತಿ ದೊರೆತಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಶಿವನಗೌಡ ಕೆ. ಸುರಕೋಡ ಪ್ರಾಸ್ತಾವಿಕ ನುಡಿಗಳನ್ನಾಡಿ, ಗ್ರಾಮೀಣ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿರುವ ಲಿಂ.ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ನಾಡಿನ, ಶೈಕ್ಷಣಿಕ, ಸಾಮಾಜಿಕ, ಅಭಿವೃದ್ಧಿಗೆ ನಾಲ್ಕು ದಶಕಗಳ ಕಾಲ ಶ್ರಮಿಸಿ ಜನಮಾನಸದಲ್ಲಿ ಶಾಶ್ವತವಾಗಿ ವಿರಾಜಮಾನರಾಗಿದ್ದಾರೆ. ಪಠ್ಯೇತರ ಚಟುವಟಿಕೆಗಳಿಗೆ ಸಹಕಾರಿಯಾಗಿರುವ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ವಿದ್ಯಾರ್ಥಿಗಳಿಗೆ ಆಟದ ಮೂಲಕ ಪಾಠದ ವಿವರಣೆಯ ಕಾರ್ಯಕ್ರಮ ಆಯೋಜಿಸುತ್ತಿರುವುದು ಪ್ರಶಂಸನೀಯ ಎಂದರು.ಪ್ರಾಚಾರ್ಯ ಜಿ.ಸಿ.ಪ್ರವೀಣ್ ಕುಮಾರ್ ಹಾಗೂ ನರೇಂದ್ರ ಪಾಟೀಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂವಾದದಲ್ಲಿ ಉಪನ್ಯಾಸಕರಾದ ಈ.ದೇವರಾಜು, ನರೇಶ್ ಕುಮಾರ್, ಎಸ್.ಪಿ.ಸುಜಾತ ಮತ್ತು ರಮ್ಯಾ ಭಾಗವಹಿಸಿದ್ದರು. ನಯನ ಮತ್ತು ಸಂಗಡಿಗರು ಪ್ರಾರ್ಥಿಸಿದರು, ಎಸ್.ಪಿ.ಸುಜಾತ ಸ್ವಾಗತಿಸಿದರು, ಉಪನ್ಯಾಸಕಿ ರಮ್ಯಾ ನಿರೂಪಿಸಿದರು