ಸಾರಾಂಶ
ಸೋಮವಾರ ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ನಗರದ ಸಶಸ್ತ್ರ ಘಟಕದ ಮೈದಾನದಲ್ಲಿ ಆಯೋಜಿಸಿದ ಪೊಲೀಸ್ ಹುತಾತ್ಮರ ದಿನಾಚರಣೆಯ ಅಂಗವಾಗಿ ಮೃತರ ಗೌರವಾರ್ಥ ನಿರ್ಮಿಸಲಾದ ಹುತಾತ್ಮ ಸ್ಮಾರಕಕ್ಕೆ ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣನವರ್ ಪುಷ್ಪಗುಚ್ಛ ಅರ್ಪಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಪೊಲೀಸ್ ಹುತಾತ್ಮರ ತ್ಯಾಗ ಮತ್ತು ಬಲಿದಾನಗಳು ನಮ್ಮ ದೇಶದ ಅಖಂಡತೆ ಮತ್ತು ಸಾರ್ವಭೌಮತೆಯನ್ನು ಎತ್ತಿ ಹಿಡಿಯಲು ಕಾರಣವಾಗಿದೆ. ಆದ್ದರಿಂದ ಸಮಾಜ ಅವರಿಗೆ ಸದಾ ಕೃತಜ್ಞವಾಗಿರಬೇಕು ಎಂದು ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣನವರ್ ಅಭಿಪ್ರಾಯಪಟ್ಟರು.ಅವರು ಸೋಮವಾರ ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ನಗರದ ಸಶಸ್ತ್ರ ಘಟಕದ ಮೈದಾನದಲ್ಲಿ ಆಯೋಜಿಸಿದ ಪೊಲೀಸ್ ಹುತಾತ್ಮರ ದಿನಾಚರಣೆಯ ಅಂಗವಾಗಿ ಮೃತರ ಗೌರವಾರ್ಥ ನಿರ್ಮಿಸಲಾದ ಹುತಾತ್ಮ ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸಿ ಮಾತನಾಡಿದರು.ದೇಶವೆಂದರೆ ಕೇವಲ ಭೌಗೋಳಿಕ ವಸ್ತುಗಳಿಂದ ಆಗಿರುವಂತದಲ್ಲ. ಬದಲಾಗಿ ಅದು ಎಲ್ಲ ರೀತಿಯ ಮಾನವ, ಪ್ರಾಣಿ ಹಾಗೂ ಸಸ್ಯ ಸಂಕುಲಗಳನ್ನು ಒಳಗೊಂಡ ವ್ಯವಸ್ಥೆ. ಈ ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಬಲಿಕೊಟ್ಟ ಹುತಾತ್ಮರ ಬಲಿದಾನಗಳನ್ನು ನಾವು ನೆನೆದುಕೊಂಡು ಅದರ ಮೂಲಕ ದೇಶದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವಂತವರಾಗಬೇಕು. ದೇಶ ಕಟ್ಟುವಲ್ಲಿ ಪ್ರತಿಯೊಬ್ಬರು ಕಾಯಾ ವಾಚಾ ಮನಸಾ ಕರ್ತವ್ಯ ನಿರ್ವಹಿಸಬೇಕು ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಮಾತನಾಡಿ, ಕಳೆದ ಒಂದು ವರ್ಷದಲ್ಲಿ ದೇಶದಲ್ಲಿ ಒಟ್ಟು 216 ಜನ ಪೊಲೀಸ್ ಅಧಿಕಾರಿಗಳು ಹಾಗೂ ಸಿಬಂದಿ ಕರ್ತವ್ಯದ ವೇಳೆ ಪ್ರಾಣಾರ್ಪಣೆ ಮಾಡಿದ್ದಾರೆ. ಅದರಲ್ಲಿ ಕರ್ನಾಟಕದ ಐದು ಮಂದಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿದ್ದಾರೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ, ಕರಾವಳಿ ಕಾವಲು ಪೊಲೀಸ್ ಪಡೆಯ ವರಿಷ್ಠಾಧಿಕಾರಿ ಮಿಥುನ್ ಎಚ್.ಎನ್., ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಟಿ ಸಿದ್ದಲಿಂಗಪ್ಪ, ಪಿ.ಎ. ಹೆಗ್ಡೆ ಹಾಗೂ ಇತರರು ಉಪಸ್ಥಿತರಿದ್ದರು.