ಸಾರಾಂಶ
ಸಹಕಾರ ಸಂಘಗಳ ರಚನೆ ಮತ್ತು ಉತ್ತಮ ಕಾರ್ಯನಿರ್ವಹಣೆಯಿಂದ ರೈತರ ಏಳಿಗೆ ಜೊತೆಗೆ ದೇಶದ ಅಭಿವೃದ್ಧಿ ಸಹ ಆಗುತ್ತದೆ ಎಂದು ಚಾಮುಲ್ ಅಧ್ಯಕ್ಷ ವೈ.ಸಿ.ನಾಗೇಂದ್ರ ತಿಳಿಸಿದರು. ಚಾಮರಾಜನಗರದಲ್ಲಿ ಸಹಕಾರದಿಂದ ಸಮೃದ್ಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಸಹಕಾರ ಸಂಘಗಳ ರಚನೆ ಮತ್ತು ಉತ್ತಮ ಕಾರ್ಯನಿರ್ವಹಣೆಯಿಂದ ರೈತರ ಏಳಿಗೆ ಜೊತೆಗೆ ದೇಶದ ಅಭಿವೃದ್ಧಿ ಸಹ ಆಗುತ್ತದೆ ಎಂದು ಚಾಮುಲ್ ಅಧ್ಯಕ್ಷ ವೈ.ಸಿ.ನಾಗೇಂದ್ರ ತಿಳಿಸಿದರು. ನಗರದ ಲ್ಯಾಂಪ್ ಸೊಸೈಟಿ ಸಭಾಂಣಗದಲ್ಲಿ ಸಹಕಾರ ಇಲಾಖೆಯಿಂದ ನಡೆದ ಸಹಕಾರದಿಂದ ಸಮೃದ್ಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಜಿಲ್ಲೆಯ ೧೭ ವಿವಿಧ ಸಹಕಾರ ಸಂಘಗಳ ನೂತನ ಅಧ್ಯಕ್ಷರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೃಢೀಕರಣ ಪತ್ರ ನೀಡಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರ ದೂರದೃಷ್ಟಿತ್ವದ ಯೋಜನೆಯ ಫಲವಾಗಿ ಸಹಕಾರ ಕ್ಷೇತ್ರದ ಹೆಚ್ಚಿನ ರೀತಿಯಲ್ಲಿ ಬೆಳವಣಿಗೆಯಾಗುತ್ತಿದೆ. ವಿವಿಧ ರಂಗಗಳಲ್ಲಿ ತಮ್ಮದೇ ಆದ ಸೇವೆಯಲ್ಲಿ ನಿರತರರಾಗಿರುವ ಸಹಕಾರ ಸಂಘಗಳ ಮೂಲಕ ಆರ್ಥಿಕ ಪ್ರಗತಿ ಹೊಂದುವ ಯೋಜನೆಯನ್ನು ಅಮಿತ್ ಶಾ ಅವರು ಮಾಡಿದ್ದಾರೆ ಎಂದರು. ಸಹಕಾರದಿಂದ ಸಮೃದ್ಧಿ ಕಾರ್ಯಕ್ರಮದಡಿಯಲ್ಲಿ ದೇಶಾದ್ಯಂತ ಏಕ ಕಾಲದಲ್ಲಿ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಮೀನಾಗಾರಿಕೆ, ಹಾಲು ಉತ್ಪಾದನೆ ಹಾಗೂ ಇತರೇ ಸಹಕಾರ ಸಂಘಗಳನ್ನು ಗ್ರಾಮಕ್ಕೆ ಒಂದರಂತೆ ರಚನೆ ಮಾಡುವ ಮೂಲಕ ರೈತರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ವಿಶೇಷ ಯೋಜನೆ ರೂಪಿಸಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಹಕಾರ ಸಚಿವ ಅಮಿತ್‌ಶಾ ಅವರು ಸಹಕಾರ ಸಚಿವಾಲಯನ್ನು ಪ್ರತ್ಯೇಕಗೊಳಿಸಿ, ಸಹಕಾರ ಸಂಘಗಳಿಗೆ ನೇರವಾಗಿ ಯೋಜನೆಗಳನ್ನು ತಲುಪಿಸುವ ಮೂಲಕ ಬಲವರ್ಧನೆಗೆ ಮುಂದಾಗಿದ್ದಾರೆ.ಸಹಕಾರ ಸಂಘಗಳಿಗೆ ಪ್ರಾಮಾಣಿಕರು ಹಾಗೂ ಸೇವಾ ಮನೋಭಾವನೆ ಹೊಂದಿರುವ ವ್ಯಕ್ತಿಗಳು ಆಯ್ಕೆಯಾಗುವುದು ಸೂಕ್ತ. ಈ ನಿಟ್ಟಿನಲ್ಲಿ ಸಂಘದ ಸದಸ್ಯರು ಇಂಥವರಿಗೆ ಮನ್ನಣೆ ನೀಡಿದರೆ ಸಹಕಾರ ಸಂಘಗಳು ಪ್ರಗತಿ ಹೊಂದಲು ಸಾಧ್ಯವಾಗುತ್ತದೆ. ಕೇಂದ್ರದಿಂದ ನೇರವಾಗಿ ಯೋಜನೆ ಸವಲತ್ತು ಪಡೆದುಕೊಂಡು ಆರ್ಥಿಕ ಅಭಿವೃದ್ಧಿ ಹೊಂದಿದರೆ ದೇಶದ ಅಭಿವೃದ್ಧಿ ಸಾಧ್ಯ ಎಂದರು.ಕಾರ್ಯಕ್ರಮದಲ್ಲಿ ನೂತನ ೧೭ವಿವಿಧ ಸಹಕಾರ ಸಂಘಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ರಾಯಪ್ಪನ್, ಸಹಕಾರ ಸಂಘಗಳ ಉಪ ನಿಬಂಧಕರಾದ ಜ್ಯೋತಿ ಅರಸ್, ಸಹಾಯಕ ನಿಬಂಧಕರಾದ ಶೋಭಾ, ಅಧೀಕ್ಷಕ ನಾಗೇಶ, ಯಳಂದೂರು ಸಿಡಿಒ ಸುಭಾಷಿನಿ, ಒಕ್ಕೂಟದ ಅಧಿಕಾರಿ ಡಾ.ಅಮರ್ ಶರತ್, ಜನಾರ್ಧನ್, ಶಿವಣ್ಣ ಮೊದಲಾದವರು ಇದ್ದರು.