ವಿಮೆಗಾಗಿ ಬೇರೊಬ್ಬನನ್ನು ಕೊಲ್ಲಿಸಿದ ದಂಪತಿ

| Published : Aug 25 2024, 01:50 AM IST

ವಿಮೆಗಾಗಿ ಬೇರೊಬ್ಬನನ್ನು ಕೊಲ್ಲಿಸಿದ ದಂಪತಿ
Share this Article
  • FB
  • TW
  • Linkdin
  • Email

ಸಾರಾಂಶ

ವಿಮೆ ಹಣಕ್ಕಾಗಿ ಒಬ್ಬ ವ್ಯಕ್ತಿಯ ಬದಲಾಗಿ ಬೇರೊಬ್ಬ ವ್ಯಕ್ತಿಯನ್ನು ಕೊಲೆ ಮಾಡಿ ಅದನ್ನು ಅಪಘಾತ ಎಂದು ಬಿಂಬಿಸಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಗಂಡಸಿ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ. ಡಬಲ್ ಆಕ್ಸಿಡೆಂಟ್ ಬೆನಿಫಿಟ್ ಮಾಡಿಸಿದ್ದರು. ಅಪಘಾತದಲ್ಲಿ ಮೃತಪಟ್ಟರೆ ಕೋಟಿಗಟ್ಟಲೆ ಹಣ ಬರುತ್ತದೆ ಎಂದು ತಿಳಿದು, ಯಾರೋ ಅಪರಿಚಿತ ವ್ಯಕ್ತಿಯನ್ನು ಕರೆತಂದು, ಆರೋಪಿಗಳು ಇತರರ ಸಹಾಯದಿಂದ ಅಪರಿಚಿತ ವ್ಯಕ್ತಿಯ ಮೇಲೆ ಲಾರಿಯನ್ನು ಹತ್ತಿಸಿ ಕೊಲೆ ಮಾಡಿ, ಅದನ್ನೇ ಮುನಿಸ್ವಾಮಿಗೌಡನ ಸಾವು ಎಂದು ಬಿಂಬಿಸಿ, ಇನ್ಸೂರೆನ್ಸ್ ಹಣವನ್ನು ಪಡೆಯಲು ಕೊಲೆ ಮಾಡಲಾಗಿರುವುದು ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಹಾಸನ

ವಿಮೆ ಹಣಕ್ಕಾಗಿ ಒಬ್ಬ ವ್ಯಕ್ತಿಯ ಬದಲಾಗಿ ಬೇರೊಬ್ಬ ವ್ಯಕ್ತಿಯನ್ನು ಕೊಲೆ ಮಾಡಿ ಅದನ್ನು ಅಪಘಾತ ಎಂದು ಬಿಂಬಿಸಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಗಂಡಸಿ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜೀತಾ ತಿಳಿಸಿದರು.

ಎಸ್ಪಿ ಕಚೇರಿಯಲ್ಲಿ ಶನಿವಾರ ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಆಗಸ್ಟ್ ೧೩ರಂದು ಬೆಳಗಿನ ಜಾವ ೦೩:೧೫ ರಲ್ಲಿ ಗಂಡಸಿ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಗೊಲ್ಲರಹಳ್ಳಿ ಗೇಟ್ ಹತ್ತಿರ ಟವೆರಾ ಗಾಡಿಯ ಸ್ಟೆಪ್ನಿ ಬದಲಾಯಿಸುವಾಗ ಲಾರಿ ಗುದ್ದಿ ಸಾವು ಸಂಭವಿಸಿದೆ ಎಂದು ದೂರು ಬಂದಿತ್ತು. ಈ ಸಂಬಂಧ ಹೊಸಕೋಟೆ ನಗರ ನಿವಾಸಿ ಶಿಲ್ಪರಾಣಿರವರು ಅಪಘಾತದಲ್ಲಿ ಮೃತಪಟ್ಟಿರುವವರು ನನ್ನ ಗಂಡ ಮುನಿಸ್ವಾಮಿಗೌಡ ಎಂದು ಲಾರಿ ಚಾಲಕ ಗುದ್ದಿ ಅಪಘಾತಪಡಿಸಿ ಸಾಯಿಸಿರುತ್ತಾನೆಂದು ನೀಡಿದ ದೂರಿನ ಮೇರೆಗೆ ಗಂಡಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿತ್ತು.

ಈ ಪ್ರಕರಣದ ತನಿಖೆ ವೇಳೆ ದೂರು ಕೊಟ್ಟ ಮಹಿಳೆ ಹೇಳಿದಂತೆ ಆಕೆಯ ಪತಿ ಅಪಘಾತದಿಂದ ಮೃತಪಟ್ಟಿರುವುದಿಲ್ಲ ಎಂಬ ವಿಷಯವು ತಿಳಿದು ಬಂದಿದ್ದು, ಮೃತನ ಸಾವಿನಲ್ಲಿ ಅನುಮಾನ ಬಂದಿದ್ದರಿಂದ ಈ ಸಂಬಂಧ ನ್ಯಾಯಲಯಕ್ಕೆ ವರದಿ ಸಲ್ಲಿಸಲಾಯಿತು. ಆರೋಪಿಗಳ ಪತ್ತೆಗಾಗಿ ಪೊಲೀಸ್ ಅಧೀಕ್ಷಕರು, ಹಾಸನ ಜಿಲ್ಲೆ ಹಾಸನ ರವರ ನೇತೃತ್ವದಲ್ಲಿ, ಅಪರ ಪೊಲೀಸ್ ಅಧೀಕ್ಷಕರು, ಅಪರ ಪೊಲೀಸ್ ಅಧೀಕ್ಷಕರು ಪೊಲೀಸ್ ಉಪಾಧೀಕ್ಷಕರು, ಅರಸೀಕೆರೆ ಉಪವಿಭಾಗ, ಅವರ ಮಾರ್ಗದರ್ಶನದಲ್ಲಿ ತನಿಖಾಧಿಕಾರಿಯಾದ ರಾಘವೇಂದ್ರ ಎನ್.ಕೆ. ಪಕ್ರಾಶ್, ಗಂಡಸಿ ವೃತ್ತ ನಿರೀಕ್ಷಕರವರೊಂದಿಗೆ ಸುರೇಶ್, ಪಿ.ಎಸ್.ಐ., ಬಾಣಾವರ, ಆರತಿ ಪಿ.ಎಸ್.ಐ., ಗಂಡಸಿ ಮತ್ತು ಸಿಬ್ಬಂದಿ ತನಿಖೆಯನ್ನು ಚುರುಕುಗೊಳಿಸಿದರು. ಅಪಘಾತ ಮಾಡದ ಲಾರಿಯ ಚಾಲಕ ದೇವೇಂದ್ರನಾಯ್ಕನನ್ನು ಪತ್ತೆಮಾಡಿ ವಿಚಾರಣೆ ಮಾಡಲಾಗಿ, ಆ ದಿನ ಅಪಘಾತದಲ್ಲಿ ಸತ್ತವನು ಬೇರೆ ವ್ಯಕ್ತಿಯಾಗಿದ್ದು, ಮುನಿಸ್ವಾಮಿಗೌಡನು ಬದುಕಿರುತ್ತಾನೆಂದು ತಿಳಿಸಿ, ಅವನು ಇರುವ ಜಾಗವನ್ನು ತೋರಿಸಿದ್ದು, ಮುನಿಸ್ವಾಮಿಗೌಡನನ್ನು ವಶಕ್ಕೆ ಪಡೆದು ವಿಚಾರ ಮಾಡಲಾಗಿ, ತಾನು ಹೊಸಕೋಟೆಯಲ್ಲಿ ಟೈರ್ ಅಂಗಡಿ ನಡೆಸುತ್ತಿದ್ದು, ಅಂಗಡಿಯಲ್ಲಿ ನಷ್ಟ ಅನುಭವಿಸಿದ್ದು, ಈ ನಷ್ಟವನ್ನು ಸರಿದೂಗಿಸಲು ಮತ್ತು ಕೆಲವರ ಬಳಿ ಕೈಸಾಲ ಪಡೆದಿದ್ದು, ಇದನ್ನು ಸರಿ ಮಾಡಲು ಈಗಾಗಲೇ ಜೀವ ವಿಮಾ ನಿಗಮದಲ್ಲಿ ಹಲವು ಜೀವ ವಿಮಾ ಪಾಲಿಸಿ ಮಾಡಿಸಿದ್ದು, ಅದರಲ್ಲಿ ವಿಶೇಷವಾಗಿ ಡಬಲ್ ಆಕ್ಸಿಡೆಂಟ್ ಬೆನಿಫಿಟ್ ಮಾಡಿಸಿದ್ದರು. ಅಪಘಾತದಲ್ಲಿ ಮೃತಪಟ್ಟರೆ ಕೋಟಿಗಟ್ಟಲೆ ಹಣ ಬರುತ್ತದೆ ಎಂದು ತಿಳಿದು, ಯಾರೋ ಅಪರಿಚಿತ ವ್ಯಕ್ತಿಯನ್ನು ಕರೆತಂದು, ಆರೋಪಿಗಳು ಇತರರ ಸಹಾಯದಿಂದ ಅಪರಿಚಿತ ವ್ಯಕ್ತಿಯ ಮೇಲೆ ಲಾರಿಯನ್ನು ಹತ್ತಿಸಿ ಕೊಲೆ ಮಾಡಿ, ಅದನ್ನೇ ಮುನಿಸ್ವಾಮಿಗೌಡನ ಸಾವು ಎಂದು ಬಿಂಬಿಸಿ, ಇನ್ಸೂರೆನ್ಸ್ ಹಣವನ್ನು ಪಡೆಯಲು ಕೊಲೆ ಮಾಡಲಾಗಿರುವುದು ಬೆಳಕಿಗೆ ಬಂದಿದೆ ಎಂದು ಹೇಳಿದರು.