ಬಂಟ್ವಾಳದಲ್ಲಿ ಗಮನ ಸೆಳೆಯುತ್ತಿದೆ ದಂಪತಿಯ ‘ಬೊಂಬೆ ದಸರಾ’

| Published : Oct 23 2023, 12:15 AM IST

ಬಂಟ್ವಾಳದಲ್ಲಿ ಗಮನ ಸೆಳೆಯುತ್ತಿದೆ ದಂಪತಿಯ ‘ಬೊಂಬೆ ದಸರಾ’
Share this Article
  • FB
  • TW
  • Linkdin
  • Email

ಸಾರಾಂಶ

ನಂದಕುಮಾರ್ ಹಾಗೂ ಅವರ ಪತ್ನಿ ಪುಷ್ಪಾ ನಂದಕುಮಾರ್ ಕಳೆದ 15 ವರ್ಷಗಳಿಂದ ತಮ್ಮೂರು ಮೈಸೂರಿನಿಂದ ಹೊರಗಿದ್ದರೂ ಅದೇ ಅನುಭವವನ್ನು ಬೊಂಬೆಗಳ ದಸರಾ ಆಚರಿಸುವ ಮೂಲಕ ಪಡೆಯುತ್ತಾರೆ.
ವಿಶೇಷ ವರದಿ ಕನ್ನಡಪ್ರಭ ವಾರ್ತೆ ಬಂಟ್ವಾಳ ಬಿ.ಸಿ.ರೋಡಿನಲ್ಲಿ ವಾಸ್ತವ್ಯವಿರುವ ಮೈಸೂರು ಮೂಲದ ಕುಟುಂಬ ತಮ್ಮ ವಾಸ್ತವ್ಯದ ಮನೆಯಲ್ಲಿಯೇ ಗೊಂಬೆಗಳನ್ನು ಜೋಡಿಸುವ ಮೂಲಕ ಮೈಸೂರು ದಸರಾದ ಪರಿಕಲ್ಪನೆ ಕಟ್ಟಿಕೊಟ್ಟು ಗಮನಸೆಳೆದಿದ್ದಾರೆ. ನಂದಕುಮಾರ್‌, ಎನ್.ಆರ್. ಕನ್‌ಸ್ಟ್ರಕ್ಷನ್‌ ಕಂಪನಿಯಲ್ಲಿ ಪಿ.ಆರ್.ಒ. ಆಗಿ ಕೆಲಸ ಮಾಡುತ್ತಿದ್ದು, ಕಳೆದ 4-5 ವರ್ಷಗಳಿಂದ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಎರಡು ವರ್ಷಗಳ ಹಿಂದೆ ಉಪ್ಪಿನಂಗಡಿಯ ನೆಕ್ಕಿಲಾಡಿಯಲ್ಲಿ ವಾಸ್ತವ್ಯ ಇದ್ದವರು ಪ್ರಸ್ತುತ ಬಂಟ್ವಾಳದಲ್ಲಿ ಮನೆ ಮಾಡಿಕೊಂಡಿದ್ದಾರೆ. ನಂದಕುಮಾರ್ ಹಾಗೂ ಅವರ ಪತ್ನಿ ಪುಷ್ಪಾ ನಂದಕುಮಾರ್ ಕಳೆದ 15 ವರ್ಷಗಳಿಂದ ತಮ್ಮೂರು ಮೈಸೂರಿನಿಂದ ಹೊರಗಿದ್ದರೂ ಅದೇ ಅನುಭವವನ್ನು ಬೊಂಬೆಗಳ ದಸರಾ ಆಚರಿಸುವ ಮೂಲಕ ಪಡೆಯುತ್ತಾರೆ. ಬೊಂಬೆಗಳ ಲೋಕವೇ ವಿಭಿನ್ನ: ಕರಾವಳಿ ಪ್ರದೇಶದಲ್ಲಿ ಮೂರ್ತಿ ಆರಾಧನೆಗೆ ಹೆಚ್ಚು ಒತ್ತು. ಇಲ್ಲಿ ಜನರು ಮನೆ ಮನೆಗಳಲ್ಲಿ ಬೊಂಬೆ ಇಟ್ಟು ಪೂಜೆ ಮಾಡುವ ಪದ್ಧತಿ ವಿರಳ. ಬಿ.ಸಿ.ರೋಡ್‌ನ ಕಿಂಗ್ಸ್ ಕೋರ್ಟ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿರುವ ನಂದಕುಮಾರ್ ದಂಪತಿ ಬೊಂಬೆಗಳ ಸಂಗ್ರಹವೇ ಒಂದು ವಿಭಿನ್ನ ಲೋಕಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ಸಾವಿರಕ್ಕೂ ಅಧಿಕ ಸಂಖ್ಯೆಯ ಗೊಂಬೆಗಳು ಇವರ ಸಂಗ್ರಹದಲ್ಲಿವೆ. ಅವೆಲ್ಲವೂ ಅಲಂಕಾರಗೊಳಿಸಿ, ಅಂದವಾಗಿ ಜೋಡಿಸಿ ವಿದ್ಯುತ್ ದೀಪಾಲಂಕಾರಗಳೊಂದಿಗೆ ತಮ್ಮ ಮನೆಯಲ್ಲೇ ಗೊಂಬೆಗಳನ್ನು ಇಟ್ಟು ಸಂಭ್ರಮಿಸುತ್ತಾರೆ. ಆಳೆತ್ತರಕ್ಕಿಂತಲೂ ಎತ್ತರದ ರ್‍ಯಾಕ್‌ನಲ್ಲಿ ಜೋಡಿಸಿಟ್ಟ ವಿಭಾಗದಲ್ಲಿ ದೇವದೇವತೆಯರ ದೃಶ್ಯ ವೈಭವವಿದ್ದರೆ, ಮತ್ತೊಂದರಲ್ಲಿ ಮೈಸೂರು ದಸರಾ ಮೆರವಣಿಗೆ ಇದೆ. ಇನ್ನೊಂದರಲ್ಲಿ ಕೂಡುಕುಟುಂಬವೊಂದು ಒಟ್ಟಿಗೆ ಹಬ್ಬದೂಟವನ್ನು ಮಾಡುವ ದೃಶ್ಯವಿದೆ. * ಹಬ್ಬದ ಕಳೆ ಮೂಡಿಸುವ ದೇವರ ಗೊಂಬೆ: ತಮ್ಮ ಮನೆ ದೇವರು ಕೃಷ್ಣ, ವಿಘ್ನ ನಿವಾರಕ ಗಣಪತಿ, ವಿಷ್ಣುವಿನ ಹತ್ತು ಅವತಾರಗಳು, ಸಪ್ತಮಾತೃಕೆಯರು, ರಾಮ, ಲಕ್ಷ್ಮಣ, ಸೀತೆ, ಆಂಜನೇಯ ಗೊಂಬೆಗಳು, ರಾಮನ ಪಟ್ಟಾಭಿಷೇಕ ಕಾರ್ಯಕ್ರಮದ ವಾತಾವರಣ, ನೃತ್ಯಗಾತಿಯರ ಗೊಂಬೆಗಳು, ವೆಂಕಟರಮಣ, ಶ್ರೀದೇವಿ, ಭೂದೇವಿ, ಅಷ್ಟಲಕ್ಷ್ಮೀಯರು, ಗೌರಿ, ನವದುರ್ಗೆಯರ ಗೊಂಬೆಗಳು ಇಲ್ಲಿವೆ. ಪ್ರತಿದಿನ ನವದುರ್ಗೆಯ ಅವತಾರಗಳನ್ನು ಇಡಲಾಗುತ್ತದೆ. ಮಹಿಷಾಸುರನ ಗೊಂಬೆಯೂ ಇದೆ. ಚಾಮುಂಡಿ ಮಹಿಷನನ್ನು ಕೊಲ್ಲುವ ದೃಶ್ಯವೂ ಕಾಣಸಿಗುತ್ತದೆ. ಪಟ್ಟದ ಗೊಂಬೆ ಎಂದು ಹೇಳಲಾಗುವ ಮರದ ಗೊಂಬೆಗಳನ್ನು ಸಂಪ್ರದಾಯದ ಪ್ರಕಾರ ಇಡಲಾಗಿದೆ. ಅದರ ಅಕ್ಕಪಕ್ಕ ಲಕ್ಷ್ಮೀ ಸರಸ್ವತಿ ಗೊಂಬೆಗಳು ಇವೆ. ಇದರಲ್ಲಿ ಹಿಂದಿನ ಕಾಲದ ಮದುವೆ ಸಂಪ್ರದಾಯ, ತೊಟ್ಟಿಲು ಇರುವ ದೃಶ್ಯಗಳಿವೆ. ಶ್ರೀಕೃಷ್ಣ ವಿವಿಧ ಭಕ್ಷ್ಯಭೋಜನಗಳನ್ನು ಸವಿಯುವ ದೃಶ್ಯಗಳು ಇಲ್ಲಿವೆ. ಅಲ್ಲದೇ, ಸಂಗೀತಗಾರರು, ವಾದ್ಯಗೋಷ್ಠಿಯ ದೃಶ್ಯಗಳೂ ಇಲ್ಲಿದೆ. ಹತ್ತು ದಿನ ನವರಾತ್ರಿಯಲ್ಲಿ ಏನೇನು ನಡೆಯುತ್ತದೆ ಎಂಬುದನ್ನು ಬೊಂಬೆಗಳಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇನೆ. ಕಾರ್ಯನಿಮಿತ್ತ ಹಲವಾರು ಪ್ರದೇಶಗಳಲ್ಲಿ ನಾವು ವಾಸಿಸುತ್ತಿದ್ದೇವೆ. ಆದರೆ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ, ಪ್ರತೀವರ್ಷ ಹೊಸಹೊಸ ಬೊಂಬೆಗಳನ್ನು ಖರೀದಿಸುತ್ತೇವೆ. -ಪುಷ್ಪಾ ನಂದಕುಮಾರ್‌, ಬೊಂಬೆ ಪ್ರದರ್ಶನ ಆಯೋಜಕರು.