ಪಶ್ಚಿಮ ಬಂಗಾಳದ ಕಾಳಿ ಮಾತಾ ಮಂದಿರದವರೆಗೆ ದಂಪತಿ ಪಾದಯಾತ್ರೆ

| Published : Apr 16 2024, 01:01 AM IST

ಪಶ್ಚಿಮ ಬಂಗಾಳದ ಕಾಳಿ ಮಾತಾ ಮಂದಿರದವರೆಗೆ ದಂಪತಿ ಪಾದಯಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಕೋಮು ಸಂಘರ್ಷಗಳಿಗೆ ಆಸ್ಪದ ನೀಡದೇ ಸೌಹಾರ್ದತೆಯಿಂದ ಜೀವನ ನಡೆಸುವಂತಾಗಲಿ ಎನ್ನುವ ಉದ್ದೇಶದಿಂದ ವೃದ್ಧ ದಂಪತಿ ಸುರಪುರ ತಾಲೂಕಿನ ಏವೂರ ಗ್ರಾಮದಿಂದ ಪಶ್ಚಿಮ ಬಂಗಾಳದ ಕಾಳಿ ಮಾತಾ ಮಂದಿರದ ವರೆಗೆ 2 ಸಾವಿರ ಕಿ.ಮೀ. ಪಾದಯಾತ್ರೆ ಕೈಗೊಂಡು ಎಲ್ಲರ ಗಮನ ಸೆಳೆದಿದ್ದಾರೆ.

ಮಲ್ಲಯ್ಯ ಪೋಲಂಪಲ್ಲಿ

ಕನ್ನಡಪ್ರಭ ವಾರ್ತೆ ಶಹಾಪುರ

ದೇಶದಲ್ಲಿ ಶಾಂತಿ-ಸೌಹಾರ್ದತೆ ನೆಲೆಸಲಿ. ಪ್ರತಿಯೊಬ್ಬರೂ ಜಾತಿ, ಕೋಮು ಸಂಘರ್ಷಗಳಿಗೆ ಆಸ್ಪದ ನೀಡದೇ ಸೌಹಾರ್ದತೆಯಿಂದ ಜೀವನ ನಡೆಸುವಂತಾಗಲಿ ಎನ್ನುವ ಉದ್ದೇಶದಿಂದ ವೃದ್ಧ ದಂಪತಿ ಸುರಪುರ ತಾಲೂಕಿನ ಏವೂರ ಗ್ರಾಮದಿಂದ ಪಶ್ಚಿಮ ಬಂಗಾಳದ ಕಾಳಿ ಮಾತಾ ಮಂದಿರದ ವರೆಗೆ 2 ಸಾವಿರ ಕಿ.ಮೀ. ಪಾದಯಾತ್ರೆ ಕೈಗೊಂಡು ಎಲ್ಲರ ಗಮನ ಸೆಳೆದಿದ್ದಾರೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಏವೂರ ಗ್ರಾಮದ ಶಾಂತಗೌಡ ಐರೆಡ್ಡಿಪ್ಪಗೌಡ ಮತ್ತು ನೀಲಮ್ಮ ದಂಪತಿ ಪಾದಯಾತ್ರೆ ಕೈಗೊಂಡಿದ್ದು, ಶನಿವಾರ ಬೆಳಗಿನ ಜಾವ ಗ್ರಾಮದ ವಿಶ್ವ ಪ್ರಖ್ಯಾತ ಸ್ವಯಂ ಸೋಮೇಶ್ವರ, ಗ್ರಾಮ ದೇವತೆ ಸೇರಿದಂತೆ ಎಲ್ಲ ಮಂದಿರಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಪಾದಯಾತ್ರೆ ಆರಂಭಿಸಿದ್ದಾರೆ.

ಶಹಾಪುರ ಮೂಲಕ ಯಾದಗಿರಿ, ನಾರಾಯಣ ಪೇಟೆ, ವಿಜಯವಾಡ, ವಿಶಾಖಪಟ್ಟಣ, ಒಡಿಶಾ ಮೂಲಕ ಪಶ್ಚಿಮ ಬಂಗಾಳದ ದಕ್ಷಿಣೇಶ್ವರದ ಕಾಳಿ ಮಾತಾ ಮಂದಿರ ತಲುಪಲಿದ್ದಾರೆ. ಪ್ರತಿನಿತ್ಯ 30 ರಿಂದ 35 ಕಿ.ಮೀ. ನಡೆಯುವ ಗುರಿ ಇಟ್ಟುಕೊಂಡಿದ್ದು, ಮಂದಿರ ತಲುಪಲು 70 ರಿಂದ 80 ದಿನಗಳು ಬೇಕಾಗುತ್ತದೆ ಎನ್ನುತ್ತಾರೆ ಪಾದಯಾತ್ರಿಗಳು. ಈ ಪಾದಯಾತ್ರೆ ಮೊದಲಲ್ಲ, ಕಳೆದ 13 ವರ್ಷಗಳಿಂದಲೂ ಪ್ರತಿ ವರ್ಷ ಶಿವರಾತ್ರಿಯ ದಿನದಂದು ಏವೂರ ಗ್ರಾಮದಿಂದ ಸಿಂಧನೂರು ತಾಲೂಕಿನ ಅಂಭಾಮಠಕ್ಕೆ ಪಾದಯಾತ್ರೆ ಮಾಡಿರುವುದಾಗಿ ಶಾಂತಗೌಡ ತಿಳಿಸಿದ್ದಾರೆ.

ಪಾದಯಾತ್ರೆಯಲ್ಲಿ ಗ್ರಾಮದವರಾದ ಸಿದ್ದಣ್ಣ ಹಡಪದ, ಚಂದಪ್ಪ ಗಿರಣಿ, ಮಲ್ಲಣ್ಣ ಟಣಕೇದಾರ್, ಜಾನಪ್ಪಗೌಡ ಕರ್ಕಳ್ಳಿ ಇದ್ದರು.ಹಿಂದೂ, ಮುಸ್ಲಿಂ, ಕ್ರೈಸ್ತ್, ಜೈನ, ಬೌದ್ಧ, ಸಿಖ್ ಧರ್ಮದವರು ಸಹ ಬಾಳ್ವೆಯಿಂದ ಇರಬೇಕೆಂಬುದು ಆಶಯವಾಗಿದೆ. ರಾಷ್ಟ್ರದ ಏಕತೆ ಮತ್ತು ಶಕ್ತಿಗೆ ಅವರಲ್ಲಿ ಪರಸ್ಪರ ಸೌಹಾರ್ದತೆ ಕಾಪಾಡುವುದು ಅತ್ಯಗತ್ಯ. ಆದ್ದರಿಂದ ಪಶ್ಚಿಮ ಬಂಗಾಳದ ಕಾಳಿ ಮಾತಾ ಮಂದಿರದವರೆಗೆ ಪಾದಯಾತ್ರೆ ಕೈಗೊಂಡಿದ್ದೇವೆ.

- ಶಾಂತಗೌಡ ಐರೆಡ್ಡಿಪ್ಪಗೌಡ, ಪಾದಯಾತ್ರಿ.

-

ಇಳಿ ವಯಸ್ಸಿನಲ್ಲಿ 2 ಸಾವಿರ ಕಿ.ಮೀ. ದೂರ ನಡೆಯುವುದು ಸಾಮಾನ್ಯ ಸಂಗತಿಯಲ್ಲ. ಅದು ತನ್ನ ಸ್ವಂತ ಲಾಭಕ್ಕಾಗಿ ಯಾತ್ರೆ ಮಾಡುತ್ತಿಲ್ಲ. ದೇಶದಲ್ಲಿ ಶಾಂತಿ, ಸೌಹಾರ್ದತೆ, ಏಕತೆಗಾಗಿ ನೆಲೆಸಲು ಮಾಡುತ್ತಿರುವ ಪಾದಯಾತ್ರೆಯಾಗಿದೆ. ಅವರ ಪಾದಯಾತ್ರೆ ಯಶಸ್ವಿಯಾಗಲಿ.

- ಭಾಸ್ಕರರಾವ್ ಮುಡಬೂಳ, ಸಂಶೋಧಕರು ಹಾಗೂ ಹಿರಿಯ ನ್ಯಾಯವಾದಿಗಳು ಶಹಾಪುರ

-

ಗಂಡನ ಜೊತೆ ಸಪ್ತಪದಿ ತುಳಿದ ಮೇಲೆ ಅವರ ಕಷ್ಟ-ಸುಖದಲ್ಲೂ ಸಹಭಾಗಿಯಾಗಿ ಅವರ ಜೊತೆ ನೆರಳಿನಂತೆ ಜೊತೆಯಾಗಿರೋದು ಸತಿ ಧರ್ಮ. ಲೋಕಕಲ್ಯಾಣಕ್ಕಾಗಿ ನಮ್ಮ ಯಜಮಾನರು ಕೈಗೊಂಡಿರುವ ಪಾದಯಾತ್ರೆಯಲ್ಲಿ ಭಾಗಿಯಾಗಿರುವುದು ನನ್ನ ಸೌಭಾಗ್ಯ.

- ನೀಲಮ್ಮ ಶಾಂತಗೌಡ, ಪಾದಯಾತ್ರೆ ಕೈಗೊಂಡಿರುವ ಶಾಂತಗೌಡರ ಪತ್ನಿ.

-

ಇಂದಿನ ದಿನಗಳಲ್ಲಿ ಪ್ರತಿಯೊಂದರಲ್ಲೂ ಸ್ವಂತ ಲಾಭ ಹುಡುಕುವವರೇ ಹೆಚ್ಚು. ಆದರೆ, ದೇಶಕ್ಕೊಸ್ಕರ ನಮ್ಮ ಏವೂರ ಗ್ರಾಮದ 75 ವರ್ಷದ ಶಾಂತಗೌಡ ಅವರು ದೇಶದಲ್ಲಿ ಶಾಂತಿ, ಸೌಹಾರ್ದತೆ, ಏಕತೆ ನೆಲೆಸಲು 2 ಸಾವಿರ ಕಿ.ಮೀ. ಪಾದಯಾತ್ರೆ ಮಾಡುವ ಕಾರ್ಯ ನಿಜಕ್ಕೂ ಮೆಚ್ಚುವಂಥದ್ದು.

- ತುಳಜಾ ರಾಮ್ ರಾಠೋಡ್, ಏವೂರ ತಾಂಡದ ಬಂಜಾರ ಸಮುದಾಯದ ಮುಖಂಡ.