ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಪ್ರಸಿದ್ಧ ಯಾತ್ರಾ ಸ್ಥಳ ಶ್ರೀ ಮಲೆ ಮಹದೇಶ್ವರ ಬೆಟ್ಟದ ದೇವಾಲಯದ ಸಮೀಪದ ರಂಗ ಮಂದಿರದಲ್ಲಿ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸೋಮವಾರ ಆಯೋಜಿಸಿದ್ದ ಉಚಿತ ಸಾಮೂಹಿಕ ವಿವಾಹದಲ್ಲಿ 93 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.ಸೋಮವಾರ ಬೆಳಗ್ಗೆ 9.20 ರಿಂದ 10.10 ರೊಳಗೆ ಸಲ್ಲುವ ಶುಭ ಕನ್ಯಾ ಲಗ್ನದಲ್ಲಿ ಸುತ್ತೂರು ಶ್ರೀ ಶಿವರಾತ್ರಿದೇಶಿ ಕೇಂದ್ರ ಸ್ವಾಮೀಜಿ ಹಾಗೂ ಸಾಲೂರು ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು. ವಧುವಿಗೆ ಸೀರೆ, ಮಾಂಗಲ್ಯ, ಬಳೆ, ರವಿಕೆ,ಕಾಲುಂಗುರ ಹಾಗೂ ವರನಿಗೆ ಪಂಚೆ, ಶರ್ಟ್, ಟವೆಲ್ ಪ್ರಾಧಿಕಾರದಿಂದ ನೀಡಲಾಯಿತು.ಸುತ್ತೂರು ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಮಲೆ ಮಹದೇಶ್ವರರು ಜನರಲ್ಲಿ ಜಾಗೃತಿ ಮೂಡಿಸಿದ ಪವಾಡ ಪುರುಷರು. ಇಂತಹ ಪುಣ್ಯ ಕ್ಷೇತ್ರದಲ್ಲಿ ಉಚಿತ ವಿವಾಹ ಮಹೋತ್ಸವ ನಡೆಯುತ್ತಿದೆ ಎಂದರೆ ನೀವೆಲ್ಲರೂ ಪುಣ್ಯವಂತರು. ಇಂತಹ ಕ್ಷೇತ್ರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೇಲೆ ನೀವು ಒಳ್ಳೇಯ ಜೀವನ ನಡೆಸಬೇಕು. ದಂಪತಿಗಳು ಇಬ್ಬರೂ ಆದರೂ ಮಾನಸಿಕವಾಗಿ ಒಂದೇ ಆಗಬೇಕು. ಪರಸ್ಪರ ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಂಡು ಜೀವನ ನಡೆಸಿದರೆ ಬದುಕು ಸುಂದರವಾಗಿರುತ್ತದೆ. ಜೊತೆಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶ್ರೀ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ. ಇಲ್ಲಿನ ಶಾಸಕ ಎಂ.ಆರ್. ಮಂಜುನಾಥ್ ಸಹ ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ನೀಡುತ್ತಿದ್ದಾರೆ. ಹೀಗಾಗಿ ಧಾರ್ಮಿಕ ಕ್ಷೇತ್ರದಲ್ಲಿ ಇಂತಹ ಉತ್ತಮ ಕಾರ್ಯಕ್ರಮಗಳು ಇನ್ನೂ ಹೆಚ್ಚಾಗಿ ನಡೆಯಲಿ ಎಂದರು.
ಶಾಸಕ ಎಂ. ಆರ್. ಮಂಜುನಾಥ್ ಮಾತನಾಡಿ, ಮಲೆ ಮಹದೇಶ್ವರ ಬೆಟ್ಟದಲ್ಲಿ ಉಚಿತ ಸಾಮೂಹಿಕ ವಿವಾಹ ಆದರೇ ಪುಣ್ಯದ ಕೆಲಸ ಆದಂತೆ. ದೇವರು ಸದಾ ನಿಮ್ಮ ಬಾಳನ್ನು ಹಸನು ಮಾಡುತ್ತಾನೆ. ಜೊತೆಗೆ ನಿಮಗೆ ಆರ್ಥಿಕವಾಗಿ ಒಂದಷ್ಟು ಸಹಾಯ ಆದಂತೆ ಆಗುತ್ತದೆ. ದುಂದು ವೆಚ್ಚಕ್ಕೆ ಕಡಿವಾಣ ಹಾಕಿದಂತಾಗಿದೆ.ಹಾಗಾಗಿ ಸಾಮೂಹಿಕ ವಿವಾಹಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು.ದೇವಾಲಯದಲ್ಲಿ ಮದುವೆಯಾದರೆ ಜೋಡಿಗಳ ಜೀವನ ನೆಮ್ಮದಿಯಾಗಿರುತ್ತದೆ ಎಂಬುದು ವಾಡಿಕೆ ಅದರಂತೆ ನಿಮ್ಮೆಲ್ಲರ ಬದುಕು ಚೆನ್ನಾಗಿರಲಿ ಎಂದು ಮಹದೇಶ್ವರರಲ್ಲಿ ಪ್ರಾರ್ಥನೆ ಮಾಡುತ್ತೇನೆ, ಇಲ್ಲಿಯವರೆಗೆ 1989ರಿಂದ 2024 ಸಾಲಿನವರೆಗೆ ನವ ದಂಪತಿಗಳು ಜೀವನಕ್ಕೆ ಕಾಲಿಟ್ಟಿದ್ದಾರೆ. ನಿಮಗಲ್ಲರಿಗೂ ಮಾದಪ್ಪನ ಆಶೀರ್ವಾದ ಸಿಕ್ಕಿದೆ ಎಂದು ನಾನು ಭಾವಿಸುತ್ತೇನೆ.
ಅಧಿಪತಿ ಮಾದಪ್ಪನ ದಯೆಯಿಂದ ಮಲೆ ಮಹದೇಶ್ವರ ಬೆಟ್ಟದ ಸುತ್ತ ಮುತ್ತಲಿನ ಹಳ್ಳಿಗಳಿಗೆ ₹20 ಕೋಟಿ ವೆಚ್ಚದಲ್ಲಿ ಕೇಬಲ್ ಮೂಲಕ ವಿದ್ಯುತ್ ಹಾಗೂ ರಸ್ತೆ ನಿರ್ಮಾಣ ಸೇರಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಶೀರ್ವಾದದಿಂದ ಶ್ರೀ ಕ್ಷೇತ್ರದಲ್ಲಿ ಉತ್ತಮ ಕೆಲಸ ಕಾರ್ಯಗಳು ನಡೆಯುತ್ತಿದೆ. ಹೀಗಾಗಿ ಶ್ರೀ ಕ್ಷೇತ್ರದ ಸುತ್ತಮುತ್ತಲಿನ ಗ್ರಾಮಗಳ ಅಭಿವೃದ್ಧಿಗೂ ಸಹ ಮೂಲಭೂತ ಸೌಲಭ್ಯ ಕಲ್ಪಿಸಲು ಈಗಾಗಲೇ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ಸಾಲೂರು ಬೃಹನ್ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಹಣ ಉಳ್ಳವರಿಗೆ ತಿರುಪತಿ ಆದರೆ ಬಡವರಿಗೆ ಮಾದಪ್ಪನ ಬೆಟ್ಟ. ಶ್ರೀ ಕ್ಷೇತ್ರ 93 ಜೋಡಿಗಳು ನವಜೀವನಕ್ಕೆ ಕಾಲಿಟ್ಟಿರುವುದು ಮಾದಪ್ಪನ ಶ್ರೀರಕ್ಷೆಯೊಂದಿಗೆ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆಯುತ್ತಿರುವ ಉಚಿತ ಸಾಮೂಹಿಕ ವಿವಾಹದಲ್ಲಿ ರಾಜ್ಯದ ನಾನಾ ಭಾಗಗಳಿಂದ ಮಾದಪ್ಪನ ಬೆಟ್ಟಕ್ಕೆ ಬಂದು ವಿವಾಹವಾಗಿರುವ ನವ ವಧುಗಳಿಗೆ ಶುಭವಾಗಲಿ ಎಂದು ತಿಳಿಸಿದರು.
ಮೆಟ್ಟೂರು ಶಾಸಕ ಸದಾಶಿವಂ ಮಾತನಾಡಿ, ಕರ್ನಾಟಕದ ಈ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಹಲವು ವರ್ಷಗಳಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯುತ್ತಿರುವುದರಿಂದ ಬಡ ಕುಟುಂಬದವರು ಹಾಗೂ ಮಧ್ಯಮ ವರ್ಗದವರಿಗೆ ಹೆಚ್ಚಿನ ಅನುಕೂಲವಾಗಿದೆ. ನವೆಂಬರ್ ನಲ್ಲಿ ತಮಿಳುನಾಡಿನಲ್ಲಿ ಅಧಿವೇಶನ ನಡೆಯಲಿದ್ದು ತಮಿಳುನಾಡಿನ ಪ್ರಮುಖ ದೇವಾಲಯಗಳಲ್ಲಿಯೂ ಉಚಿತ ಸಾಮೂಹಿಕ ಕಾರ್ಯಕ್ರಮವನ್ನು ಆಯೋಜನೆ ಮಾಡಲು ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು. ಸಾಮೂಹಿಕ ವಿವಾಹ ಪ್ರಯುಕ್ತ ಮಲೆ ಮಹದೇಶ್ವರ ಬೆಟ್ಟದ ದಾಸೋಹ ಭವನದಲ್ಲಿ ವಿಶೇಷ ಸಿಹಿ ಭೋಜನ ವ್ಯವಸ್ಥೆ ಮಾಡಲಾಗಿತ್ತು.ಗಮನಸೆಳೆದ ವಿಕಲಚೇತನ ಮದುವೆ : ಕೆ ಸಿ ರಾಜು ಮೈಸೂರು ವಿಕಲಚೇತನರಾಗಿದ್ದು, ಶ್ರೀ ರಂಗಪಟ್ಟಣ ಶ್ವೇತಾ ಎಂಬುವವರನ್ನು ವಿವಾಹವಾಗಿ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.ಸಾಲೂರು ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಮೆಟ್ಟೂರು ಶಾಸಕರಾದ ಸದಾಶಿವಂ, ಗ್ರಾರಂಟಿ ಯೋಜನೆ ಗಳ ಅಧ್ಯಕ್ಷ ಚಂದ್ರು, ಜಿಲ್ಲಾ ಪಂಚಾಯಿತಿ ಸಿ ಇ ಒ ಮೋನಾ ರೋತ್, ಎಸ್ ಪಿ ಡಾ. ಬಿ ಟಿ ಕವಿತಾ, ಪ್ರಾಧಿಕಾರದ ಕಾರ್ಯದರ್ಶಿ ಎ. ಇ. ರಘು ,ಉಪ ಕಾರ್ಯದರ್ಶಿ ಚಂದ್ರಶೇಖರ್,ಡಿ ವೈ ಎಸ್ ಪಿ ಧರ್ಮೇoದ್ರ, ಹನೂರು ತಹಸೀಲ್ದಾರ್ ಚೈತ್ರ, ನಾಮನಿರ್ದೇಶಿತ ಸದಸ್ಯರಾದ ಭಾಗ್ಯಮ್ಮ, ಮರಿಸ್ವಾಮಿ,ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅರ್ಚನಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು.