ಅವೈಜ್ಞಾನಿಕ ಕಾಮಗಾರಿ ವಿರುದ್ಧ ನ್ಯಾಯಾಲಯದ ಮೊರೆ: ಡಾ. ನಾಗೇಶ ನಾಯ್ಕ

| Published : Oct 18 2024, 12:16 AM IST

ಅವೈಜ್ಞಾನಿಕ ಕಾಮಗಾರಿ ವಿರುದ್ಧ ನ್ಯಾಯಾಲಯದ ಮೊರೆ: ಡಾ. ನಾಗೇಶ ನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಅನುಚಿತ ಟೋಲ್ ವಸೂಲಾತಿಯನ್ನು ಮಾಡಲಾಗುತ್ತಿದ್ದು, ಚತುಷ್ಪಥ ಹೆದ್ದಾರಿ ಕಾಮಗಾರಿ ಮುಕ್ತಾಯವಾಗುವವರೆಗೆ ಅದನ್ನು ನಿಲ್ಲಿಸಬೇಕು.

ಹೊನ್ನಾವರ: ಸಾರ್ವಜನಿಕ ನ್ಯಾಯಕ್ಕಾಗಿ ನಡೆಸುವ ಹೋರಾಟದ ಧ್ವನಿಯನ್ನು ಹತ್ತಿಕ್ಕುವ ಎನ್ಎಚ್ಎಐ ಮತ್ತು ಐಆರ್‌ಬಿ ಹುನ್ನಾರದ ವಿರುದ್ಧ ಜಿಲ್ಲೆಯಲ್ಲಿ ಜನಾಂದೋಲನ ರೂಪಿಸಿ ಉಗ್ರ ಹೋರಾಟ ರೂಪಿಸಲಾಗುವುದು. ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಯ ಕುರಿತು ದಾಖಲೆಗಳನ್ನು ಸಂಗ್ರಹಿಸಿ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಾ. ನಾಗೇಶ ನಾಯ್ಕ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಅನುಚಿತ ಟೋಲ್ ವಸೂಲಾತಿಯನ್ನು ಮಾಡಲಾಗುತ್ತಿದ್ದು, ಚತುಷ್ಪಥ ಹೆದ್ದಾರಿ ಕಾಮಗಾರಿ ಮುಕ್ತಾಯವಾಗುವವರೆಗೆ ಅದನ್ನು ನಿಲ್ಲಿಸಬೇಕು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿಯಂತ್ರಣದಡಿ ಐಆರ್‌ಬಿ ಗುತ್ತಿಗೆದಾರ ಕಂಪನಿಯ ವತಿಯಿಂದ ಬಾಕಿ ಉಳಿದಿರುವ ಕಾಮಗಾರಿಯನ್ನು ಭೂವಿಜ್ಞಾನ ಸಮೀಕ್ಷಾ ವರದಿ, ಎಲ್ಲ ಮುಂಜಾಗ್ರತಾ ಸುರಕ್ಷಾ ಕ್ರಮಗಳನ್ನು ಸಂಪೂರ್ಣ ಅಳವಡಿಸಬೇಕು. ಶೀಘ್ರವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.

ಶಿರೂರು ಗುಡ್ಡಕುಸಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಹಾಗೂ ಸಂತ್ರಸ್ತರಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಸೆ. ೧೨ರಂದು ಹೊನ್ನಾವರದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿದ ವಿವಿಧ ಸಂಘಟನೆಗಳ ಮುಖಂಡರ ಮೇಲೆ ದಾಖಲಿಸಿರುವ ಸುಮೋಟೋ ಪ್ರಕರಣವನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.

ನಮ್ಮ ಹೊನ್ನಾವರ ಉಳಿಸಿ ಬೆಳೆಸಿ ಜನಪರ ವೇದಿಕೆಯ ಅಧ್ಯಕ್ಷ ಜಿ.ಎನ್. ಗೌಡ ಕೊಡಾಣಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರು ಟೋಲ್ ಬಂದ್ ಮಾಡಿಸುತ್ತೇನೆ ಎಂದು ಹೇಳಿಕೆ ನೀಡಿದ್ದರು. ಬಂದ್ ಮಾಡಿಸಲು ತಾಕತ್ತಿಲ್ಲವೇ? ತಾಕತ್ತಿಲ್ಲದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ಕ್ರಾಂತಿ ರಂಗದ ಜಿಲ್ಲಾಧ್ಯಕ್ಷ ಮಂಗಲದಾಸ ನಾಯ್ಕ ಮಾತನಾಡಿ, ಐಆರ್‌ಬಿ ಮತ್ತು ಎನ್ಎಚ್ಎಐನಿಂದ ಮಂಕಿ ವ್ಯಾಪ್ತಿಯಲ್ಲಿ ೧೫ ಕಿಮೀಗಳವರೆಗೆ ಆಗಿರುವ ಅಸಮರ್ಪಕ ಕಾಮಗಾರಿ ಹಾಗೂ ಎಫ್‌ಐಆರ್‌ಗಳ ದಾಖಲೆಗಳನ್ನು ಸಂಗ್ರಹಿಸಿದ್ದೇನೆ. ಅ. ೨೯ರಂದು ಮಂಕಿಯಲ್ಲಿ ಕರ್ನಾಟಟಕ ಕ್ರಾಂತಿರಂಗದ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಅದೇ ದಿನ ಹೈಕೋಟ್ ವಕೀಲರ ಮೂಲಕ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಲಾಗುವುದು ಎಂದರು.

ಲಾರಿ ಚಾಲಕ- ಮಾಲೀಕರ ಸಂಘದ ಅಧ್ಯಕ್ಷ ಮೋಹನ ಆಚಾರ್ಯ ಮಾತನಾಡಿದರು. ಡಾ. ಎಸ್.ಡಿ. ಹೆಗಡೆ, ಸಚಿನ್ ನಾಯ್ಕ, ಅನಂತ ನಾಯ್ಕ ಹೆಗ್ಗಾರ, ಮುನಾಫ್‌ ಶೇಖ್, ವೀರಭದ್ರ ನಾಯ್ಕ, ವಿ.ಎನ್. ನಾಯ್ಕ ಮತ್ತಿತರರು ಇದ್ದರು.21ರಂದು ಭಟ್ಕಳದಲ್ಲಿ ಅತಿಕ್ರಮಣದಾರರ ಸಭೆ

ಭಟ್ಕಳ: ಪಟ್ಟಣದ ಸಿಟಿ ಹಾಲ್‌ನಲ್ಲಿ ಅ. 21ರಂದು ಬೆಳಗ್ಗೆ ೧೦ ಗಂಟೆಗೆ ತಾಲೂಕಿನ ಅರಣ್ಯ ಅತಿಕ್ರಮಣದಾರರ ಸಭೆಯನ್ನು ಕರೆಯಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಸಭೆಯಲ್ಲಿ ನೋಂದಾಯಿತ ಸದಸ್ಯರಿಗೆ ಜಿಪಿಎಸ್ ಮೇಲ್ಮನವಿ ಸ್ವೀಕೃತಿ ಪ್ರತಿ, ಗುರುತಿನ ಪತ್ರ ವಿತರಿಸಲಾಗುವುದು. ಅಲ್ಲದೇ ಸಭೆಯಲ್ಲಿ ನ. ೭ರಂದು ಬೆಂಗಳೂರಿನಲ್ಲಿ ನಡೆಯಲಿರುವ ಬೆಂಗಳೂರು ಚಲೋ ಕಾರ್ಯಕ್ರಮ ಕುರಿತು ಚರ್ಚಿಸಲಾಗುವುದು. ಆಸಕ್ತರು ಸಭೆಗೆ ಆಗಮಿಸಲು ಅವರು ಕೋರಿದ್ದಾರೆ.