ಹಾವೇರಿ ಜಿಲ್ಲೆಯ ಜಾನಪದ ಕ್ರೀಡೆ ಎನಿಸಿರುವ ಹೋರಿ ಹಬ್ಬದ ಆಚರಣೆಗೆ ರಾಜ್ಯ ಸರ್ಕಾರ ವಿಧಿಸಿದ್ದ ಷರತ್ತುಗಳಿಗೆ ಹೈಕೋರ್ಟ್ ತಡೆ ನೀಡಿದೆ ಎಂದು ಹೋರಿ ಮಾಲೀಕರು ಹಾಗೂ ಅಭಿಮಾನಿಗಳು ಘೋಷಿಸಿ ನಗರದಲ್ಲಿ ಶನಿವಾರ ವಿಜಯೋತ್ಸವ ಆಚರಿಸಿದರು.
ಹಾವೇರಿ: ಜಿಲ್ಲೆಯ ಜಾನಪದ ಕ್ರೀಡೆ ಎನಿಸಿರುವ ಹೋರಿ ಹಬ್ಬದ ಆಚರಣೆಗೆ ರಾಜ್ಯ ಸರ್ಕಾರ ವಿಧಿಸಿದ್ದ ಷರತ್ತುಗಳಿಗೆ ಹೈಕೋರ್ಟ್ ತಡೆ ನೀಡಿದೆ ಎಂದು ಹೋರಿ ಮಾಲೀಕರು ಹಾಗೂ ಅಭಿಮಾನಿಗಳು ಘೋಷಿಸಿ ನಗರದಲ್ಲಿ ಶನಿವಾರ ವಿಜಯೋತ್ಸವ ಆಚರಿಸಿದರು.
ಹೋರಿ ಬೆದರಿಸುವ ಸ್ಪರ್ಧೆಗೆ 18 ಷರತ್ತು ವಿಧಿಸಿರುವುದನ್ನು ಖಂಡಿಸಿ ಪ್ರತಿಭಟನೆಗೆ ಕರೆ ನೀಡಿದ್ದ ಹೋರಿ ಮಾಲೀಕರು, ರಾಜ್ಯ ಸರ್ಕಾರದ ಈ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ ಎಂದು ನಗರದಲ್ಲಿರುವ ಹುತಾತ್ಮ ಮೈಲಾರ ಮಹದೇವಪ್ಪ ವೃತ್ತದಲ್ಲಿ ಸೇರಿದ್ದ ಹೋರಿ ಮಾಲೀಕರು ಹಾಗೂ ಅಭಿಮಾನಿಗಳು ವಿಜಯೋತ್ಸವ ನಡೆಸಿ ಸಂಭ್ರಮಿಸಿದರು.ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ, ಹೋರಿ ಹಬ್ಬಕ್ಕೆ ವಿಧಿಸಿದ್ದ ಷರತ್ತುಗಳನ್ನು ಖಂಡಿಸಿ ಪ್ರತಿಭಟನೆ ನಡೆಸಲು ಹೋರಾಟ ಆರಂಭವಾಗಿತ್ತು. ಈಗ, ಅದೇ ಹೋರಾಟ ವಿಜಯೋತ್ಸವವಾಗಿ ಆಚರಣೆ ಆಗುತ್ತಿದೆ. ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ಜಿಲ್ಲೆಯಲ್ಲಿ ಹೋರಿ ಹಬ್ಬಕ್ಕೆ ವಿಶೇಷತೆಯಿದೆ. ಹೋರಿ ಹಬ್ಬವೆಂದರೆ, ನಮ್ಮ ಗ್ರಾಮೀಣ ಜನರ ಬಹುದೊಡ್ಡ ಮನೆ, ಮನದ ಹಬ್ಬ. ಈ ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸದಂತೆ ಸರ್ಕಾರ ನಿಷೇಧ ಮಾಡಿತ್ತು. ಹಬ್ಬಕ್ಕೆ ಪರವಾನಗಿ ನೀಡಬೇಕೆಂದು ಎಲ್ಲರೂ ಕೋರ್ಟ್‌ಗೆ ಹೋಗಿದ್ದರು. ಈಗ ಅನುಮತಿ ಸಿಕ್ಕಿರುವುದಾಗಿ ಹಲವರು ಹೇಳುತ್ತಿದ್ದಾರೆ ಎಂದರು.
ಎತ್ತುಗಳ ಸ್ವರೂಪದಲ್ಲಿರುವ ಬಸವಣ್ಣನಿಗೆ ದೊಡ್ಡ ಗೌರವ ಹಾಗೂ ಅಭಿಮಾನ ನೀಡಿದವರು ನಾವು. ನಾವೆಲ್ಲ ದುಡಿದು ಮನೆಗೆ ಅನ್ನ ನೀಡುತ್ತೇವೆ. ಬಸವಣ್ಣ ಮಾತ್ರ ರೈತರ ಜೀವನಾಡಿಯಾಗಿದ್ದಾನೆ. ಹಬ್ಬದ ಸಂದರ್ಭದಲ್ಲಿ ಹೋರಿಗಳು ಓಡುವಾಗ ಹಿಡಿಯಲು ಹೋಗಿ ಸಾವು–ನೋವುಗಳು ಸಂಭವಿಸುತ್ತದೆ. ಮುಂಬರುವ ಹಬ್ಬಗಳಲ್ಲಿ ದಯವಿಟ್ಟು ಯಾರೊಬ್ಬರೂ ಹೋರಿಗಳಿಗೆ ಮದ್ಯ ಹಾಗೂ ಇತರ ಮಾದಕ ವಸ್ತುಗಳನ್ನು ನೀಡಬಾರದು. ಸಾಂಸ್ಕೃತಿಕ ಹಾಗೂ ಧಾರ್ಮಿಕ ಮನೋಭಾವದಿಂದ ಆಚರಿಸಿಕೊಂಡು ಬಂದಿರುವ ಹಬ್ಬವನ್ನು, ಅರ್ಥಪೂರ್ಣವಾಗಿ ಆಚರಿಸಬೇಕು. ಅವಾಗ ನಮಗೂ ಹಾಗೂ ಬಸವಣ್ಣನಿಗೂ ಏನು ಆಗುವುದಿಲ್ಲ ಎಂದರು.ಹೋರಿ ಹಬ್ಬದ ಷರತ್ತುಗಳನ್ನು ಪ್ರಶ್ನಿಸಿದ ಹೈಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸಿದ್ದ ವಕೀಲ ಸಂದೀಪ ಪಾಟೀಲ ಅವರನ್ನು ವಿಜಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.