ಸಾರಾಂಶ
ದಾಖಲೆ ಪರಿಶೀಲಿಸದೆ ವಿದೇಶಿಗನ ವೀಸಾ ವಿಸ್ತರಣೆಗೆ ಹೈಕೋರ್ಟ್ ಅಸಮಾಧಾನ
ಕನ್ನಡಪ್ರಭ ವಾರ್ತೆ ಬೆಂಗಳೂರು
ವೈದ್ಯಕೀಯ ದಾಖಲೆಗಳ ಸತ್ಯಾಸತ್ಯತೆ ಪರಿಶೀಲಿಸದೆ ಯೆಮೆನ್ ದೇಶದ ಪ್ರಜೆಯೊಬ್ಬನ ವಿಸಿಟೇಷನ್ (ಭೇಟಿ) ವೀಸಾವನ್ನು ವೈದ್ಯಕೀಯ ವೀಸಾವಾಗಿ ಪರಿವರ್ತಿಸಿ ಹಲವು ವರ್ಷಗಳ ಕಾಲ ಅದರ ಅವಧಿಯನ್ನೂ ವಿಸ್ತರಿಸಿದ್ದ ಬೆಂಗಳೂರಿನ ಪ್ರಾದೇಶಿಕ ವಿದೇಶಿಯರ ನೋಂದಣಿ ಅಧಿಕಾರಿಯ (ಎಫ್‌ಆರ್‌ಆರ್‌ಒ) ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ವೈದ್ಯಕೀಯ ವೀಸಾ ಅಥವಾ ಅದರ ವಿಸ್ತರಣೆಗೆ ಕೋರಿದ ವೇಳೆ ಅಗತ್ಯ ವೈದ್ಯಕೀಯ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕೆಂದು ಆದೇಶಿಸಿದೆ.ವೈದ್ಯಕೀಯ ವೀಸಾ ಅವಧಿ ವಿಸ್ತರಣೆ ಮಾಡದ ಎಫ್‌ಆರ್‌ಆರ್‌ಒ ಕ್ರಮ ಪ್ರಶ್ನಿಸಿ ಯೆಮೆನ್ ದೇಶದ ಪ್ರಜೆ ಮೊಹಮ್ಮದ್ ನೋಮನ್ ಅಹ್ಮದ್ ಅಲ್ಮೇರಿ ಎಂಬಾತ ಸಲ್ಲಿಸಿದ್ದ ತಕರಾರು ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿದೆ.
ಅಲ್ಲದೆ, ವೈದ್ಯಕೀಯ ವೀಸಾ ಅವಧಿ ವಿಸ್ತರಣೆಗೆ ಮನವಿ ಸಲ್ಲಿಸಿದ ಕೂಡಲೇ ಅದನ್ನು ಪುರಸ್ಕರಿಸುವ ಧೋರಣೆ ಕೈಬಿಡಬೇಕು. ಯಾವ ಆಧಾರದಲ್ಲಿ ಮೆಡಿಕಲ್ ವೀಸಾ ವಿಸ್ತರಣೆಗೆ ಆಸ್ಪತ್ರೆಗಳು ಶಿಫಾರಸು ಮಾಡುತ್ತಿವೆ ಎಂಬುದನ್ನು ಪರಿಶೀಲಿಸಬೇಕು. ವೀಸಾಗಳ ವಿಸ್ತರಣೆ/ಪರಿವರ್ತನೆಗೆ ಆಸ್ಪತ್ರೆಗಳು ವಿದೇಶಿಯರೊಂದಿಗೆ ಕೈಜೋಡಿಸಲು ಅವಕಾಶ ನೀಡಬಾರದು ಎಂದು ನಿರ್ದೇಶಿಸಿದೆ.+++
ಪ್ರಕರಣದ ವಿವರ ಯೆಮೆನ್‌ನಲ್ಲಿ ಜನಿಸಿದ್ದ ಅರ್ಜಿದಾರ ಅಲ್ಮೇರಿ, ವಿವಾಹವಾಗಿ ಮೂವರು ಹೆಣ್ಣು ಮಕ್ಕಳನ್ನು ಪಡೆದಿದ್ದ. 2013ರಲ್ಲಿ ಮೂರು ವರ್ಷಗಳ ಮಾಸ್ಟರ್ ಆಫ್ ಸೈನ್ಸ್ ಕೋರ್ಸ್ ಅಭ್ಯಸಿಸಲು ಭಾರತಕ್ಕೆ ಬಂದು ಬೆಂಗಳೂರಿನ ಟಿ.ಜಾನ್ ಕಾಲೇಜ್ ಆಫ್ ನರ್ಸಿಂಗ್‌ನಲ್ಲಿ ಪ್ರವೇಶ ಪಡೆದುಕೊಂಡಿದ್ದನು. ಆತನಿಗೆ 2013ರ ಆ.7ರಿಂದ 2004ರ ಆ.6ರವರೆಗೆ ವಿದ್ಯಾರ್ಥಿ ವೀಸಾ ನೀಡಲಾಗಿತ್ತು. ಭಾಷೆ ಮತ್ತು ಅನಾರೋಗ್ಯ ಸಮಸ್ಯೆಯಿಂದ ವ್ಯಾಸಂಗ ಮೊಟಕುಗೊಳಿಸಿ 2016ರ ಮೇ 28ರಂದು ಯೆಮೆನ್‌ಗೆ ಹಿಂದಿರುಗಿದ್ದ. ನಂತರ ವಾಸಂಗ ಮುಂದುವರಿಸಲು ಮರು ಪ್ರವೇಶಕ್ಕೆ 2016ರ ಅ.14ರಂದು ವಿಸಿಟೇಷನ್ ವೀಸಾ ಪಡೆದು ಭಾರತಕ್ಕೆ ಮರಳಿದ್ದ. ಭಾರತಕ್ಕೆ ಬಂದ ಬಳಿಕ ಆರೋಗ್ಯವು ಮತ್ತೆ ಹದಗೆಟ್ಟಿರುವ ಕಾರಣ ನೀಡಿ ವಿಸಿಟೇಷನ್ ವೀಸಾವನ್ನು ವೈದ್ಯಕೀಯ ವೀಸಾವಾಗಿ ಪರಿವರ್ತಿಸಿಕೊಂಡಿದ್ದ. ನಂತರ ಕಾಲ ಕಾಲಕ್ಕೆ ಆ ವೀಸಾ ಅವಧಿ ವಿಸ್ತರಣೆ ಮಾಡಿಕೊಂಡಿದ್ದ. ಕೊನೆಯದಾಗಿ ವೀಸಾ ಅವಧಿ 2023ರ ಜೂ.5ಕ್ಕೆ ಕೊನೆಗೊಂಡಿತ್ತು.ಇದರಿಂದ ವೀಸಾ ವಿಸ್ತರಣೆಗೆ ಕೋರಿ ಅಲ್ಮೇರಿ ಎಫ್‌ಆರ್‌ಆರ್‌ಒಗೆ ಅರ್ಜಿ ಸಲ್ಲಿಸಿದ್ದ. ಆ ಅರ್ಜಿ ಪರಿಗಣನೆಗೆ ಬಾಕಿಯಿರುವಾಗಲೇ ಅಲ್ಮೇರಿ, ಭಾರತದಲ್ಲಿ ಮಹಿಳೆಯೊಬ್ಬರನ್ನು ವಿವಾಹವಾಗಿದ್ದರು. ತಾನು ಏಳು ವರ್ಷಕ್ಕಿಂತ ಹೆಚ್ಚುಕಾಲ ಭಾರತದಲ್ಲಿ ನೆಲೆಸಿದ್ದು, ಭಾರತೀಯ ಪ್ರಜೆಯನ್ನು ವಿವಾಹವಾಗಿರುವ ಕಾರಣ ತನಗೆ ಪೌರತ್ವ ನೀಡುವಂತೆ ಕೋರಿದ್ದ. ಅದನ್ನು ಎಫ್‌ಆರ್‌ಆರ್ ತಿರಸ್ಕರಿಸಿದ್ದರು. ಬಳಿಕ ವೈದ್ಯಕೀಯ ವೀಸಾ ವಿಸ್ತರಣೆಗೆ ಕೋರಿದ್ದ ಅರ್ಜಿಯನ್ನೂ ತಿರಸ್ಕರಿಸಿದ್ದರು. ಆ ಆದೇಶ ಪ್ರಶ್ನಿಸಿ ಅಲ್ಮೇರಿ ಹೈಕೋರ್ಟ್ ಮೆಟ್ಟಿಲೇರಿದ್ದರು.ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಉಪ ಸಾಲಿಸಿಟರ್ ಜನರಲ್ ಎಚ್.ಶಾಂತಿ ಭೂಷಣ್ ಹಲವು ದಾಖಲೆ ಸಲ್ಲಿಸಿ, ಅಲ್ಮೇರಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದು, ಹಲವು ಯೆಮೆನ್ ಪ್ರಜೆಗಳನ್ನು ಭಾರತಕ್ಕೆ ಕರೆತಂದು ಹಲವಾರು ಸ್ಥಳಗಳಲ್ಲಿ ಉದ್ಯೋಗ ಕಲ್ಪಿಸಿದ್ದಾನೆ. ಅದೂ ಟ್ರಸ್ಟ್‌ವೆಲ್ ಆಸ್ಪತ್ರೆ ನೀಡಿದ ದಾಖಲೆಗಳ ಆಧಾರದಲ್ಲಿ ಎಂಬುದು ನ್ಯಾಯಪೀಠಕ್ಕೆ ಬಹಿರಂಗಪಡಿಸಿದ್ದರು.ಇದರಿಂದ ತೀವ್ರ ಅಸಮಾಧಾನಗೊಂಡ ಹೈಕೋರ್ಟ್, ಅರ್ಜಿದಾರ ಸಲ್ಲಿಸಿದ ದಾಖಲೆ ಅಥವಾ ಆತನಿಗಿರುವ ಕಾಯಿಲೆ ಪರಿಶೀಲಿಸದೆ ವಿಸಿಟೇಷನ್ ವೀಸಾವನ್ನು ವೈದ್ಯಕೀಯ ವೀಸಾವಾಗಿ ಪರಿವರ್ತಿಸಿರುವ ಎಫ್‌ಆರ್‌ಆರ್‌ಒ ಕ್ರಮ ಆಘಾತಕಾರಿಯಾಗಿದೆ. ವೀಸಾ ಪರಿವರ್ತನೆಗಾಗಿ ಮ್ಯಾಕ್ಸ್ ಪಥ್ ಲ್ಯಾಬ್ಸ್‌ನ ಕ್ಲಿನಿಕಲ್ ಪ್ರಯೋಗಾಲಯ ನೀಡಿರುವ ವರದಿಯಲ್ಲಿ ಅರ್ಜಿದಾರರು ಕೊಲೆಸ್ಟ್ರಾಲ್ ಹಾಗೂ ಮಧುಮೇಹದಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದೆ. ಈ ಅಂಶ ಪರಿಗಣಿಸಿ ವೀಸಾ ಪರಿವರ್ತಿಸುವುದು ನಿಜಕ್ಕೂ ಆಶ್ಚರ್ಯಕರ ಎಂದು ಕಟುವಾಗಿ ನುಡಿದಿದೆ.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))