ಪುರಾತನ ಈಶ್ವರ ದೇವಸ್ಥಾನದ ಸರ್ಕಾರಿ ಜಾಗ ಒತ್ತುವರಿ ತೆರವಿಗೆ ಕೋರ್ಟ್‌ ಸೂಚನೆ

| Published : Feb 06 2025, 12:17 AM IST

ಪುರಾತನ ಈಶ್ವರ ದೇವಸ್ಥಾನದ ಸರ್ಕಾರಿ ಜಾಗ ಒತ್ತುವರಿ ತೆರವಿಗೆ ಕೋರ್ಟ್‌ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮಸ್ಥರು ಧಾರ್ಮಿಕ ಕಾರ್ಯಕ್ರಮಗಳಿಗೆ ಬಳಕೆ ಮಾಡುತ್ತಿದ್ದರು

ಬೆಂಗಳೂರು: ವಿಜಯನಗರ ಜಿಲ್ಲೆಯ ಅರಸೀಕೆರೆ ಹೋಬಳಿಯ ಉಚ್ಚಂಗಿದುರ್ಗ ಗ್ರಾಮದ ಪುರಾತನ ಈಶ್ವರ ದೇವಸ್ಥಾನದ ಸುತ್ತಲಿನ ಸರ್ಕಾರಿ ಜಾಗದ ಒತ್ತುವರಿ ತೆರವುಗೊಳಿಸುವ ಸಂಬಂಧ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ದೇವಸ್ಥಾನದ ಜಾಗದ ಒತ್ತುವರಿ ತೆರವುಗೊಳಿಸಲು ನಿರ್ದೇಶಿಸುವಂತೆ ಕೋರಿ ಉಚ್ಚಂಗಿದುರ್ಗ ನಿವಾಸಿ ಎ.ಮನೋಹರ ಸೇರಿದಂತೆ 12 ಮಂದಿ ಗ್ರಾಮಸ್ಥರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿ ವಿಚಾರಣೆಯನ್ನು ಮಾ.17ಕ್ಕೆ ಮುಂದೂಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಉಚ್ಚಂಗಿದುರ್ಗ ಗ್ರಾಮಕ್ಕೆ ಸೇರಿದ ಜಮೀನಿನ ಸರ್ವೇ ನಂಬರ್ 541ರಲ್ಲಿ 35 ಸೆಂಟ್‌ ಸರ್ಕಾರಿ ಜಮೀನಿನಲ್ಲಿ ಪುರಾತನ ಈಶ್ವರ ದೇವಸ್ಥಾನವಿದೆ. ಇದಕ್ಕೆ ಹೊಂದಿಕೊಂಡಿರುವ ಧರ್ಮಛತ್ರ 1930ರಲ್ಲಿ ಉದ್ಘಾಟನೆಗೊಂಡಿದ್ದು, ಗ್ರಾಮಸ್ಥರು ಧಾರ್ಮಿಕ ಕಾರ್ಯಕ್ರಮಗಳಿಗೆ ಬಳಕೆ ಮಾಡುತ್ತಿದ್ದರು ಎಂದು ವಿವರಿಸಿದರು.

ಈ ಧರ್ಮಛತ್ರದ ಸುತ್ತಲಿನ ಜಾಗವನ್ನು ಸ್ಥಳೀಯ ಪ್ರಭಾವಿಗಳಾದ ಎಂ.ಜಿ. ಉದಶಂಕ್ರಗೌಡ, ಎಂ.ಜಿ. ರಾಜಶೇಖರಗೌಡ, ಎಂ.ಜಿ.ಸಿದ್ದನಗೌಡ ಈ ಜಾಗವನ್ನು ಒತ್ತುವರಿ ಮಾಡಿಕೊಂಡು 12 ವಾಣಿಜ್ಯ ಮಳಿಗೆ ನಿರ್ಮಿಸಿದ್ದಾರೆ. ದೇವಸ್ಥಾನಕ್ಕೆ ಬೀಗ ಹಾಕಿ, ಗ್ರಾಮಸ್ಥರು ಮತ್ತು ಭಕ್ತಾದಿಗಳು ದೇವಸ್ಥಾನ ಹಾಗೂ ಧರ್ಮಛತ್ರ ಬಳಸದಂತೆ ಮಾಡಿದ್ದಾರೆ. ಹಾಗಾಗಿ, ಈ ಒತ್ತುವರಿಯನ್ನು ತೆರವುಗೊಳಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಬೇಕು ಎಂದು ಕೋರಿದರು.