ಅವ್ಯವಹಾರ ಕೇಸ್‌ನಲ್ಲಿ ಕೇರಳ ಸಿಎಂ ಪುತ್ರಿಗೆ ಕೋರ್ಟ್‌ ಶಾಕ್‌

| Published : Feb 17 2024, 01:17 AM IST

ಅವ್ಯವಹಾರ ಕೇಸ್‌ನಲ್ಲಿ ಕೇರಳ ಸಿಎಂ ಪುತ್ರಿಗೆ ಕೋರ್ಟ್‌ ಶಾಕ್‌
Share this Article
  • FB
  • TW
  • Linkdin
  • Email

ಸಾರಾಂಶ

ತಮ್ಮ ಕಂಪನಿಗಳ ವಿರುದ್ಧ ಕೇಂದ್ರ ಸರ್ಕಾರ ತನಿಖೆಗೆ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಕೇರಳ ಸಿಎಂ ಪಿಣರಾಯಿ ಪುತ್ರಿ ವೀಣಾ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ವಜಾಗೊಳಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರಿನ ಐಟಿ ಕಂಪನಿ ಎಕ್ಸಾಲಜಿಕ್ ಸಲ್ಯೂಷನ್ಸ್‌ ಪ್ರೈವೇಟ್‌ ಲಿಮಿಟೆಡ್‌ ಮತ್ತು ಕೊಚ್ಚಿನ್ ಮಿನರಲ್ಸ್‌- ರುಟೈಲ್ ಲಿಮಿಟೆಡ್‌ ನಡುವಿನ ಆರ್ಥಿಕ ವಹಿವಾಟುಗಳ ಅವ್ಯವಹಾರ ಆರೋಪ ಸಂಬಂಧ ತಮ್ಮ ವಿರುದ್ಧ ಗಂಭೀರ ವಂಚನೆಗಳ ತನಿಖಾ ಕಚೇರಿಯ (ಎಸ್‌ಎಫ್‌ಐಒ) ತನಿಖೆಗೆ ಆದೇಶಿಸಿದ್ದ ಕೇಂದ್ರ ಸರ್ಕಾರದ ಕ್ರಮ ಪ್ರಶ್ನಿಸಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ವೀಣಾ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶ ರದ್ದು ಕೋರಿ ಎಕ್ಸಾಲಜಿಕ್‌ ಸಲ್ಯೂಷನ್ಸ್‌ ಕಂಪನಿಯ ನಿರ್ದೇಶಕಿ ವೀಣಾ ಪಿಣರಾಯಿ ವಿಜಯನ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಶುಕ್ರವಾರ ಪ್ರಕಟಿಸಿದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಎರಡೂ ಕಂಪನಿಗಳ ನಡುವಿನ ಆರ್ಥಿಕ ವ್ಯವಹಾರದ ಮಾಹಿತಿ ನೀಡದಿರುವುದು ವಂಚನೆಯಾಗುವುದಿಲ್ಲ. ಯಾವುದೇ ಅಪರಾಧ ಎಸಗದಿದ್ದರೂ ಅರ್ಜಿದಾರರ ವಿರುದ್ಧ ಎಸ್‌ಎಫ್‌ಓ ತನಿಖೆಗೆ ಕೇಂದ್ರ ಸರ್ಕಾರ ಆದೇಶಿಸಿರುವುದು ಕಾನೂನು ಬಾಹಿರ ಕ್ರಮವಾಗಿದೆ ಎಂದು ವಾದಿಸಿದ್ದರು.

ಅದನ್ನು ಆಕ್ಷೇಪಿಸಿದ್ದ ಕೇಂದ್ರ ಸರ್ಕಾರದ ಪರ ವಕೀಲರು, ಕೊಚ್ಚಿನ್ ಮಿನರಲ್ಸ್ ಕಂಪನಿ ಅರ್ಜಿದಾರರ ಆಪೇಕ್ಷೆಯಂತೆ 135 ಕೋಟಿ ರು. ರಾಜಕೀಯ ವ್ಯಕ್ತಿಗಳಿಗೆ ನೀಡಿದೆ. ಸಾಫ್ಟ್‌ವೇರ್‌ ಸೇವೆಗೆಂದು 1.72 ಕೋಟಿ ರು. ನೀಡಿದೆ. ಆದರೆ, ವಾಸ್ತವವಾಗಿ ಯಾವುದೇ ಸೇವೆ ನೀಡದಿದ್ದರೂ ಎಕ್ಸಾಲಜಿಕ್‌ ಸಲ್ಯೂಷನ್ಸ್‌ ಕಂಪನಿಗೆ ಕೊಚ್ಚಿನ್ ಮಿನರಲ್ಸ್ ಹಣ ಸಂದಾಯ ಮಾಡಿದೆ. ಮಾಹಿತಿ ಕೇಳಿದರೆ ಜಿಎಸ್ ಟಿ ಪಾವತಿಸಿರುವುದಾಗಿ ಕಂಪನಿ ಹೇಳುತ್ತಿದೆ. ಈ ಎರಡು ಕಂಪನಿಗಳ ನಡುವಿನ ಹಲವು ವ್ಯವಹಾರಗಳು ಅನುಮಾನಾಸ್ಪದವಾಗಿದೆ. ಹಾಗಾಗಿ ಎಸ್‌ಎಫ್‌ಐಓ ತನಿಖೆ ಆದೇಶಿಸಿರುವುದು ಸೂಕ್ತವಾಗಿದ್ದು, ಅರ್ಜಿ ವಜಾಗೊಳಿಸಬೇಕು ಎಂದುಕೋರಿದರು.

ಕೇಂದ್ರ ಸರ್ಕಾರಿ ವಕೀಲರ ವಾದ ಪುರಸ್ಕರಿಸಿದ ಹೈಕೋರ್ಟ್‌, ಅರ್ಜಿ ವಜಾಗೊಳಿಸಿ ಆದೇಶಿಸಿದೆ.