ಮಾಹಿತಿ ಹಕ್ಕು ಅರ್ಜಿ ವಿಲೇವಾರಿಗೆ ಅದಾಲತ್‌

| Published : Sep 21 2025, 02:00 AM IST

ಸಾರಾಂಶ

ಮಾಹಿತಿ ಹಕ್ಕು ಆಯೋಗದಲ್ಲಿ ಬಾಕಿ ಉಳಿದಿರುವ 41,104 ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸುವ ಉದ್ದೇಶದಿಂದ ಮಾಹಿತಿ ಆಯುಕ್ತರೇ ಜಿಲ್ಲಾ ಮಟ್ಟಕ್ಕೆ ಆಗಮಿಸಿ ಅದಾಲತ್ ನಡೆಸಿ ಸ್ಥಳದಲ್ಲೆ ಅರ್ಜಿದಾರರಿಗೆ ಮಾಹಿತಿ ತಲುಪಿಸುವ ಕಾರ್ಯ ಮುಂದಿನ ಕನ್ನಡ ರಾಜ್ಯೋತ್ಸವದ ವೇಳೆಗೆ ಆರಂಭವಾಗಬಹುದು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಮಾಹಿತಿ ಹಕ್ಕು ಕಾಯ್ದೆಯಡಿ ದ್ವಿತೀಯ ಮೇಲ್ಮನವಿ ಅರ್ಜಿಗಳನ್ನು ತ್ವರಿತವಾಗಿ ವಿಲೆವಾರಿ ಮಾಡಿ ಮಾಹಿತಿ ಹಕ್ಕು ಅರ್ಜಿಗಳನ್ನು ಶೂನ್ಯಕ್ಕಿಳಿಸಲು ಜಿಲ್ಲಾ ಮಟ್ಟದಲ್ಲಿಯೇ ಅದಾಲತ್ ನಡೆಸುವ ಚಿಂತನೆಯನ್ನು ಆಯೋಗ ಹೊಂದಿದೆ ಎಂದು ಕರ್ನಾಟಕ ರಾಜ್ಯ ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟೆ ತಿಳಿಸಿದರು.

ಜಿಲ್ಲಾಡಳಿತ ಭವನದ ಜಿಪಂ ಸಭಾಂಗಣದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಳೆದ 7 ತಿಂಗಳ ಹಿಂದೆ ರಾಜ್ಯ ಮಾಹಿತಿ ಆಯೋಗದಲ್ಲಿ ಸುಮಾರು 54 ಸಾವಿರಕ್ಕೂ ಹೆಚ್ಚು ಅರ್ಜಿಗಳು ವಿಲೆವಾರಿಗೆ ಬಾಕಿ ಇದ್ದವು. ಅವುಗಳಲ್ಲಿ 12,896 ಅರ್ಜಿಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದರು.

ರಾಜ್ಯೋತ್ಸವ ವೇಳೆಗೆ ಆರಂಭ

ಉಳಿದಿರುವ 41,104 ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸುವ ಉದ್ದೇಶದಿಂದ ಮಾಹಿತಿ ಆಯುಕ್ತರೇ ಜಿಲ್ಲಾ ಮಟ್ಟಕ್ಕೆ ಆಗಮಿಸಿ ಅದಾಲತ್ ನಡೆಸಿ ಸ್ಥಳದಲ್ಲೆ ಅರ್ಜಿದಾರರಿಗೆ ಮಾಹಿತಿ ತಲುಪಿಸುವ ಕಾರ್ಯ ಮುಂದಿನ ಕನ್ನಡ ರಾಜ್ಯೋತ್ಸವದ ವೇಳೆಗೆ ಆರಂಭವಾಗಬಹುದು. ಪ್ರಸ್ತುತ ರಾಜ್ಯದಲ್ಲಿ ಪ್ರತಿ ತಿಂಗಳು ಸರಾಸರಿ 1500 ಮಾಹಿತಿ ಹಕ್ಕು ಅರ್ಜಿಗಳು ಆಯೋಗಕ್ಕೆ ಸ್ವೀಕಾರವಾಗುತ್ತಿವೆ. ಈ ಅರ್ಜಿಗಳನ್ನು ಸಹ ಕಾಲೋಚಿತವಾಗಿ ಇತ್ಯರ್ಥ ಪಡಿಸುವ ಜೊತೆಗೆ ಬಾಕಿ ಇರುವ ಅರ್ಜಿಗಳನ್ನು ಶೂನ್ಯಕ್ಕಿಳಿಸುವ ಮೂಲಕ ಆಡಳಿತದಲ್ಲಿ ಹೆಚ್ಚು ಪಾರದರ್ಶಕತೆ ತರಲು ಆಯೋಗ ಉದ್ದೇಶಿಸಿದೆ ಎಂದು ಹೇಳಿದರು.

ರಾಜ್ಯದಲ್ಲಿ ಸರಿಯಾಗಿ ಮಾಹಿತಿ ನೀಡದ 10,699 ಸಾರ್ವಜನಿಕ ಮಾಹಿತಿಹಕ್ಕು ಅಧಿಕಾರಿಗಳಿಗೆ ಈವರೆಗೆ 10,08,46,450 ರೂ ರಷ್ಟು ದಂಡವನ್ನು ಆಯೋಗ ವಿಧಿಸಿದೆ. ಈ ಪೈಕಿ 2119 ಅಧಿಕಾರಿಗಳು 2.45 ಕೋಟಿ ದಂಡ ಪಾವತಿಸಿದ್ದು, ಉಳಿದ ಅಧಿಕಾರಿಗಳು ದಂಡ ಪಾವತಿ ಮಾಡುವಂತೆ ಸೂಚಿಸಿ ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ಬರೆಯಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 10,777 ಅರ್ಜಿ ಬಾಕಿ

ಮಾಹಿತಿ ಆಯುಕ್ತ ರಾಜಶೇಖರ .ಎಸ್. ಮಾತನಾಡಿ, ಜಿಲ್ಲೆಯಲ್ಲಿ ಕಳೆದ ಏಪ್ರಿಲ್ ನಿಂದ ಈ ವರೆಗೆ 10,777 ಮಾಹಿತಿ ಹಕ್ಕು ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ 9,837 ರಷ್ಟು ಅರ್ಜಿಗಳು ವಿಲೆವಾರಿಯಾಗಿ 10,777 ಮಾತ್ರ ಬಾಕಿ ಇವೆ. ಈ ಎಲ್ಲಾ ಅರ್ಜಿಗಳನ್ನು ಕಾಲಮಿತಿಯಲ್ಲಿ ಇತ್ಯರ್ಥ ಪಡಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಸರಿಯಾಗಿ ಮಾಹಿತಿ ನೀಡದ 287 ಅಧಿಕಾರಿಗಳಿಗೆ 28,70,000 ರೂ ದಂಡ ವಿಧಿಸಲಾಗಿದ್ದು ಈ ಪೈಕಿ 69 ಅಧಿಕಾರಿಗಳು 6,90,000 ರೂ. ದಂಡ ಪಾವತಿಸಿದ್ದಾರೆ ಎಂದು ತಿಳಿಸಿದರು.ಅಧಿಕಾರಿಗಳಿಗೆ ಕಾರ್ಯಾಗಾರ

ಪತ್ರಿಕಾಗೋಷ್ಠಿಗೂ ಮುನ್ನ ಜಿಲ್ಲಾ ಮಟ್ಟದ ಅಧಿಕಾರಿಗಳು, ಜಿಲ್ಲೆಯ ಪ್ರಥಮ ಮಾಹಿತಿ ಹಕ್ಕು ಅಧಿಕಾರಿ ಮತ್ತು ಮೇಲ್ಮನವಿ ಮಾಹಿತಿ ಹಕ್ಕು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮಾಹಿತಿ ಹಕ್ಕು ಕಾಯ್ದೆಯಡಿ ಸ್ವಿಕಾರವಾಗುವ ಅರ್ಜಿಗಳ ವಿಲೆವಾರಿ ಮಾಡುವ ಪ್ರಕ್ರಿಯೆಯನ್ನು ನಿದರ್ಶನಗಳ ಸಹಿತವಾಗಿ ವಿವರಿಸಲು ಕಾರ್ಯಾಗಾರ ನಡೆಸಲಾಯಿತು.

ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ವೈ.ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಡಾ.ಎನ್. ಭಾಸ್ಕರ್, ಉಪ ವಿಭಾಗಾಧಿಕಾರಿ ಡಿ.ಹೆಚ್ ಅಶ್ವಿನ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಅತಿಕ್ ಪಾಷಾ ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಇದ್ದರು.