ಸಾರಾಂಶ
ಕನ್ನಡಪ್ರಭ ವಾರ್ತೆ, ಹನೂರು
ಸುಳ್ವಾಡಿ ವಿಷ ಪ್ರಸಾದ ಪ್ರಕರಣದ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದೆ.ಶ್ರೀ ಸಾಲೂರು ಬೃಹನ್ಮಠದ ಹಿರಿಯ ಗುರುಸ್ವಾಮೀಜಿ ಅನಾರೋಗ್ಯಕ್ಕೆ ಒಳಗಾಗಿದ್ದ ವೇಳೆಯಲ್ಲಿ ಶಾಂತಮಲ್ಲಿಕಾರ್ಜುನಸ್ವಾಮಿ ಅವರನ್ನು ಪೀಠಾಧ್ಯಕ್ಷರನ್ನಾಗಿ ಮಾಡುವ ಪ್ರಕ್ರಿಯೆ ನಡೆದಿತ್ತು. ಆ ಸಂದರ್ಭದಲ್ಲಿ ಜೈಲಿನಲ್ಲಿರುವ ಇಮ್ಮಡಿ ಮಹದೇವಸ್ವಾಮಿ, ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಇದು ಇನ್ನು ಇತ್ಯರ್ಥಗೊಂಡಿಲ್ಲ ಈ ಹಂತದಲ್ಲಿ ಉತ್ತರಾಧಿಕಾರಿಯನ್ನು ನೇಮಕ ಮಾಡುತ್ತಿರುವುದು ಸರಿಯಲ್ಲ. ತಾನು ನಿರಪರಾಧಿ ಎಂಬುದಾಗಿ ಸಾಭೀತಾಗಿ ಹೊರ ಬಂದು ನಾನೇ ಪೀಠಾಧ್ಯಕ್ಷನಾಗುವೆ. ಅಲ್ಲಿಯವರೆಗೆ ಉತ್ತರಾಧಿಕಾರಿ ನೇಮಕಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಕೊಳ್ಳೇಗಾಲದ ಸಿವಿಲ್ ನ್ಯಾಯಾಲಯದಲ್ಲಿ 2019 ರ ಆಗಸ್ಟ್ 28 ಮನವಿ ಸಲ್ಲಿಸಿದ್ದರು.
ತನ್ನನ್ನು ಮಠದಿಂದ ಉಚ್ಛಾಟನೆ ಮಾಡುತ್ತಾರೆ ಮತ್ತು ಬದಲಿ ಉತ್ತರಾಧಿಕಾರಿ ನೇಮಕ ಮಾಡಲಿದ್ದಾರೆ ಎಂಬುದನ್ನು ಅರಿತು 2019 ರ ಆಗಸ್ಟ್ 28 ರಂದು ಕೊಳ್ಳೇಗಾಲ ಸಿವಿಲ್ ನ್ಯಾಯಾಲಯದಲ್ಲಿ ತಾತ್ಕಾಲಿಕ ತಡೆಯಾಜ್ಞೆಯನ್ನು ಪಡೆದಿದ್ದರು. ಕೊಳ್ಳೇಗಾಲ ಸಿವಿಲ್ ನ್ಯಾಯಾಲಯವು ಈ ಪ್ರಕರಣವು ತಮ್ಮ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ ಎಂಬ ಅಂಶವನ್ನು ಪರಿಗಣಿಸಿ ಪಡೆದಿದ್ದ ತಾತ್ಕಾಲಿಕ ನಿರ್ಬಂಧ ತಡೆಯಾಜ್ಞೆಯನ್ನು 3 ಆಗಸ್ಟ್ 2020ರಂದು ಕೊಳ್ಳೇಗಾಲ ಸಿವಿಲ್ ನ್ಯಾಯಾಲಯ ರದ್ದುಗೊಳಿಸಿತ್ತು. ಅದಾದ ಬಳಿಕ, ಶಾಂತಮಲ್ಲಿಕಾರ್ಜುನಸ್ವಾಮಿ ಅವರನ್ನು ಸುತ್ತೂರು ಶ್ರೀ , ಸಿದ್ಧಗಂಗಾ ಶ್ರೀ ಮತ್ತು ದೇಗುಲಮಠ ಶ್ರೀಗಳ ನೇತೃತ್ವದಲ್ಲಿ ಶ್ರೀಮಠದ ಸಮಸ್ತ ಭಕ್ತರ ಸಮ್ಮುಖದಲ್ಲಿ ಶ್ರೀಮಠದ ಸಂಪ್ರದಾಯದ ಪ್ರಕಾರವಾಗಿ ಮಠಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು.ಈ ಕುರಿತು ಮೇಲ್ಮನವಿಯನ್ನು ವಿಚಾರಣೆ ನಡೆಸಿದ್ದ ನ್ಯಾಯಾಲಯ ಕಿರಿಯ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಇಮ್ಮಡಿ ಮಹದೇವಸ್ವಾಮಿ, 3 ಸೆಪ್ಟಂಬರ್ 2020ರಂದು ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್, "ಸಾಲೂರು ಮಠಕ್ಕೆ 600 ವರ್ಷಗಳ ಇತಿಹಾಸವಿದೆ. ಉತ್ತರಾಧಿಕಾರಿ ಪ್ರಕ್ರಿಯೆ ಹೇಗೆ ನಡೆಯುತ್ತಾ ಬಂದಿದೆಯೋ ಅದೇ ಬಗೆಯಲ್ಲಿ ಈಗಲೂ ಪ್ರಕ್ರಿಯೆ ನಡೆದಿದೆ,'''''''' ಹಿರಿಯ ಮಠಾಧಿಪತಿ ತನ್ನ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಿಕೊಳ್ಳುವ ಸಂಪೂರ್ಣ ಅಧಿಕಾರವಿದೆ ಎಂಬುದನ್ನು ನ್ಯಾಯಾಲಯ ಅಭಿಪ್ರಾಯಪಟ್ಟು ಮೇಲ್ಮನವಿಯನ್ನು ಕಳೆದ 18 ರಂದು ಕೊಳ್ಳೇಗಾಲದ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಸುನೀತಾ ಅವರು ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದ್ದಾರೆ.
ಈ ಮೂಲಕ ವಿಷ ಪ್ರಸಾದ ಪ್ರಕರಣದಲ್ಲಿ ಜಾಮೀನು ಪಡೆಯಲು ಹಾಗೂ ಉತ್ತರಾಧಿಕಾರಿ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳು ವಜಾಗೊಳ್ಳುವ ಮೂಲಕ ಇಮ್ಮಡಿ ಮಹಾದೇವಸ್ವಾಮಿ ಸತತ ಹಿನ್ನೆಡೆ ಅನುಭವಿಸಿದ್ದಾರೆ.ಸಾಲೂರು ಮಠದ ಪರವಾಗಿ ವಾದಿಸಿದ್ದ ಹೈಕೋರ್ಟ್ ನ ಹಿರಿಯ ವಕೀಲ ಸಿ.ಎಂ. ಜಗದೀಶ್ ಮಾತನಾಡಿ, ಸುಳ್ವಾಡಿ ವಿಷ ಪ್ರಾಶನ ಪ್ರಕರಣದಲ್ಲಿ ಹಲವರ ಸಾವಿಗೆ ಕಾರಣವಾದ ಸ್ವಾಮೀಜಿ ಪ್ರಮುಖ ಆರೋಪಿಯಾಗಿ ಕಾರಾಗೃಹದಲ್ಲಿದ್ದಾರೆ. ಈ ಹಂತದಲ್ಲಿ ಉತ್ತರಾಧಿಕಾರಿ ನೇಮಕಕ್ಕೆ ತಡೆಯಾಜ್ಞೆ ಕೊಡಿ ಎಂದು ಕೇಳುವ ಯಾವುದೇ ನೈತಿಕತೆ ಅವರಿಗಿಲ್ಲ. ಹೀಗಾಗಿ ಹಿರಿಯ ಶ್ರೀಗಳ ಇಚ್ಛಾನುಸಾರ ನಡೆದಿರುವ ಉತ್ತರಾಧಿಕಾರಿ ನೇಮಕಕ್ಕೆ ಯಾವುದೇ ತಡೆಯಾಜ್ಞೆ ನೀಡಬಾರದು ಎಂದು ನಾವು ವಾದ ಮಾಡಿದ್ದೇವು. ಎಲ್ಲವನ್ನೂ ಪರಿಶೀಲಿಸಿದ ಕೋರ್ಟ್ ನ್ಯಾಯ ಸಮ್ಮತ ತೀರ್ಪು ನೀಡಿದೆ ಎಂದು ತಿಳಿಸಿದ್ದಾರೆ.