ಶಿರಸಿಯಲ್ಲಿ ಮತ್ತೆ ಕೋವಿಡ್‌ ಬೀಜಾಂಕುರ

| Published : Dec 28 2023, 01:45 AM IST

ಶಿರಸಿಯಲ್ಲಿ ಮತ್ತೆ ಕೋವಿಡ್‌ ಬೀಜಾಂಕುರ
Share this Article
  • FB
  • TW
  • Linkdin
  • Email

ಸಾರಾಂಶ

ಕೋವಿಡ್ ಸ್ಥಿತಿಯಲ್ಲಿ ಆಮ್ಲಜನಕದ ಕೊರತೆ ಉಂಟಾಗುವ ಕಾರಣ ಶಿರಸಿ ಆಸ್ಪತ್ರೆ ಆವರಣದಲ್ಲಿಯೇ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪಿಸಲಾಗಿದೆ. ಈ ಮೂಲಕ ಕೋವಿಡ್ ಸೌಲಭ್ಯ ತಂದುಕೊಟ್ಟಿದೆ.

ಮಂಜುನಾಥ ಸಾಯೀಮನೆಕನ್ನಡಪ್ರಭ ವಾರ್ತೆ ಶಿರಸಿ

ತಾಲೂಕಿನಿಂದ ಸಂಪೂರ್ಣ ಮರೆಯಾಗಿ ಜನತೆ ಕೋವಿಡ್ ನಿಯಮಾವಳಿಗಳನ್ನು ಒಂದೆಡೆ ಮರೆಯುತ್ತಿದ್ದರೆ ಇನ್ನೊಂದೆಡೆ ಕೋವಿಡ್‌ ಬೀಜಾಂಕುರವಾಗಿದೆ. ಈಗಾಗಲೇ ಎರಡು ಪ್ರಕರಣ ಪತ್ತೆಯಾಗಿದ್ದು, ಜನತೆಗೆ ಎಚ್ಚರಿಕೆಯ ಡೋಸ್ ನೀಡಿದೆ.

ಯಾವುದೇ ಪ್ರಯಾಣ ಹಿನ್ನೆಲೆ ಇರದ, ಹೊರ ಊರಿನ ಜನತೆಯ ಸಂಪರ್ಕಕ್ಕೂ ಬರದ ಹಳ್ಳಿಯ ಇಬ್ಬರಲ್ಲಿ ಕೋವಿಡ್ ದೃಢಪಟ್ಟಿದೆ. ಬಳಗಾರಿನಲ್ಲಿ ಮಾಮೂಲಿಯಂತೆ ತೋಟದ ಕೆಲಸ ಮಾಡಿಕೊಂಡಿದ್ದ ಕುಟುಂಬದಲ್ಲಿ ನೆಗಡಿ ಆವರಿಸಿತ್ತು. ಚಳಿಗಾಲದ ನೆಗಡಿ ಎಂದು ಔಷಧ ತರಲು ವೈದ್ಯರ ಬಳಿ ಹೋದಾಗ ಕೋವಿಡ್ ಇರುವುದು ಪತ್ತೆಯಾಗಿತ್ತು. ಬಳಿಕ ಗ್ರಾಮಕ್ಕೆ ತೆರಳಿದ ವೈದ್ಯರ ತಂಡ ಅಲ್ಲಿ ಪರೀಕ್ಷೆ ನಡೆಸಿದಾಗ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿದೆ.

ಕಳೆದ ಎರಡೂವರೆ ವರ್ಷಗಳ ಕೋವಿಡ್‌ ಸಾಗರದಲ್ಲಿ ಮಿಂದೆದ್ದ ತಾಲೂಕಿನ ಜನತೆ ಈಗ ಕೋವಿಡ್‌ಗೇನೂ ಹೆದರುತ್ತಿಲ್ಲ. ಆದರೆ, ಮುಂಜಾಗೃತೆಯನ್ನೂ ಮರೆಯುತ್ತಿರುವುದು ದುರಂತ. ಆರಂಭಿಕ ದಿನಗಳಲ್ಲಿ ಕೋವಿಡ್‌ಗೆ ಒಳಗಾದವನನ್ನು ಅಸ್ಪೃಶ್ಯರಂತೆ ನೋಡಿದ ಹಲವರು ತಮಗೂ ಬಂದ ಮೇಲೆ ಅದೆಲ್ಲ ಮಾಮೂಲು ಎಂದು ರಾಗ ಬದಲಾಯಿಸಿದ್ದರು. ಆದರೆ, ಕೋವಿಡ್ ತನ್ನ ಹಿಡಿತ ಪ್ರಬಲಗೊಳಿಸಿತ್ತು. ೨೦೨೦ರ ಮೇ ತಿಂಗಳಿನಿಂದ ಡಿಸೆಂಬರ್ ವರೆಗೆ ತಾಲೂಕಿನಲ್ಲಿ ೧೬೧೮ ಜನ ಕೋವಿಡ್‌ ಸೋಂಕಿತರಾಗಿದ್ದರೆ ೨೦೨೧ರಲ್ಲಿ ೫೬೩೨ ಸೋಂಕಿತರಾಗಿದ್ದರು. ೨೦೨೨ರಲ್ಲಿ ಈ ಸಂಖ್ಯೆ ಇಳಿಮುಖವಾಗಿ ೧೬೩೮ಕ್ಕೆ ಬಂದಿತ್ತು. ಆ ಬಳಿಕ ಕೋವಿಡ್‌ ನಿಯಂತ್ರಣಕ್ಕೆ ಬಂದಿತ್ತು. ಈಗ ೨೦೨೩ರ ಅಂತ್ಯದಲ್ಲಿ ಎರಡು ಪ್ರಕರಣ ಪತ್ತೆಯಾದಂತಾಗಿದೆ.

ಸೌಲಭ್ಯ ತಂದುಕೊಟ್ಟ ಕೋವಿಡ್‌:

ಶಿರಸಿ ಆಸ್ಪತ್ರೆಗಳಿಗೆ ಆಮ್ಲಜನಕ ಬೇರೆಡೆಯಿಂದ ತರಿಸಿಕೊಳ್ಳಲಾಗುತ್ತಿತ್ತು. ಕಳೆದ ಎರಡು ವರ್ಷಗಳ ಹಿಂದೆ ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ಈ ರೀತಿ ತಂದಿಡಲಾಗಿದ್ದ ಆಮ್ಲಜನಕ ಸೋರಿಕೆ ಸಹ ಆಗಿತ್ತು. ಕೋವಿಡ್‌ ಸ್ಥಿತಿಯಲ್ಲಿ ಆಮ್ಲಜನಕದ ಕೊರತೆ ಉಂಟಾಗುವ ಕಾರಣ ಆಸ್ಪತ್ರೆ ಆವರಣದಲ್ಲಿಯೇ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪಿಸಲಾಗಿದೆ. ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಹಾಗೂ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪ್ರಯತ್ನದಿಂದಾಗಿ ಕೋವಿಡ್‌ನ ಆರ್‌ಟಿಪಿಸಿಆರ್ ಕೇಂದ್ರ ಸಹ ಶಿರಸಿಯಲ್ಲಿ ಮಂಜೂರಾಗಿ ಪರೀಕ್ಷೆಗೆ ಹುಬ್ಬಳ್ಳಿಗೆ ಕಳಿಸುವ ತೊಂದರೆ ತಪ್ಪಿದೆ. ಕೋವಿಡ್‌ ಪರ್ವ ಕಾಲದಲ್ಲಿದ್ದಾಗ ಪ್ರತಿ ದಿನ ೬೫೦ರಷ್ಟು ಪರೀಕ್ಷೆ ಇಲ್ಲಿ ನಡೆದಿತ್ತಾದರೂ ಈಗ ಪ್ರತಿ ದಿನ ೮ರಿಂದ೧೦ ಪರೀಕ್ಷೆ ಮಾತ್ರ ನಡೆಸಲಾಗುತ್ತಿದೆ.

೨೦೨೧ರಲ್ಲಿ ನಗರದ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಕೋವಿಡ್‌ ಕೇರ್ ಸೆಂಟರ್ ಆರಂಭಿಸಲಾಗಿತ್ತಾದರೂ ಅಂದು ಜಾಗ ಸಾಕಾಗದೇ ಹೊಂ ಕ್ವಾರಂಟೇನ್‌ಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಈಗ ಕೋವಿಡ್‌ ನಿಯಂತ್ರಣಕ್ಕೆ ಬಂದ ಮೇಲೂ ಸಹ ಈ ಕೇಂದ್ರವನ್ನು ಉಳಿಸಿಕೊಳ್ಳಲಾಗಿದೆಯಾದರೂ ಬಳಸುವವರು ಇಲ್ಲವಾಗಿದೆ. ಈಗ ಮತ್ತೆ ಕೋವಿಡ್‌ ತಲೆ ಎತ್ತುತ್ತಿರುವುದರಿಂದ ಆರೋಗ್ಯ ಇಲಾಖೆ ಮತ್ತು ತಾಲೂಕು ಆಡಳಿತ ಪೂರ್ವ ಸಿದ್ಧತೆ ಮಾಡಿಕೊಳ್ಳತೊಡಗಿದೆ.

೬೦ ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಉತ್ತಮ. ಈಗಾಗಲೇ ಕೋವಿಡ್‌ ಸೋಂಕಿತರ ಗ್ರಾಮಕ್ಕೆ ಭೇಟಿ ನೀಡಿ ಸೂಕ್ತ ಸೂಚನೆ, ಮುಂಜಾಗೃತೆ ವಹಿಸಿದ್ದೇವೆ. ಸಾರ್ವಜನಿಕರು ಕೋವಿಡ್‌ ನಿಯಮ ಪಾಲನೆ ಮೂಲಕ ಜಾಗೃತಿ ವಹಿಸಬೇಕು ಎಂದು ತಾಲೂಕು ವೈದ್ಯಾಧಿಕಾರಿ ಡಾ. ವಿನಾಯಕ ಭಟ್ ಹೇಳಿದರು.