ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿಜಿಲ್ಲೆಯ ನೆರೆ ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆ ಜಿಲ್ಲೆಯ ಗಡಿ ಭಾಗದಲ್ಲಿಯೂ ಸಹ ಅಗತ್ಯ ಮುನ್ನೆಚ್ಚರ ವಹಿಸುವುದು, ಜೊತೆಗೆ ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸುವಂತೆ ಕೊಡಗು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್ ಸಲಹೆ ಮಾಡಿದ್ದಾರೆ.
ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಗಳ ಬಗ್ಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪರಿಶೀಲನೆ ಸಂದರ್ಭದಲ್ಲಿ ಅವರು ಮಾತನಾಡಿದರು.ಜಿಲ್ಲೆಯ ಕುಟ್ಟ, ಮಾಕುಟ್ಟ, ಕರಿಕೆ ಗ್ರಾಮದ ಗಡಿ ಪ್ರದೇಶದಲ್ಲಿ ಕೋವಿಡ್ ಪರೀಕ್ಷೆ ಹೆಚ್ಚಿಸುವುದರ ಜೊತೆಗೆ ಅಗತ್ಯ ತಪಾಸಣೆ ಕೈಗೊಳ್ಳುವಂತೆ ತಿಳಿಸಿದರು.
ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿ, ಉಪಕರಣಗಳು ಇರಬೇಕು. ಆರೋಗ್ಯಕ್ಕೆ ಸಂಬಂಧಿಸಿದಂತೆ ಉಪಕರಣಗಳು ಹಾಗೂ ಸೌಲಭ್ಯಗಳು ಬೇಕಿದ್ದಲ್ಲಿ ಅಗತ್ಯ ಪ್ರಸ್ತಾವನೆ ಸಲ್ಲಿಸುವಂತೆ ಡಿಎಚ್‌ಒಗೆ ಡಾ.ಪ್ರಸಾದ್ ಸೂಚಿಸಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್, ಜಿಲ್ಲೆಯ ಗಡಿ ಪ್ರದೇಶದಲ್ಲಿ ಸರ್ಕಾರದ ನಿರ್ದೇಶನದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್, ವೆಂಟಿಲೇಟರ್, ಹಾಸಿಗೆ, ಔಷಧಿ ಸೇರಿದಂತೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸಲಹೆ ಮಾಡಿದರು.ನೂತನ ಸರ್ಕಾರಿ ಬಸ್ ಸೇವೆ:
ಶಕ್ತಿ ಯೋಜನೆಯಡಿ ಜಿಲ್ಲೆಗೆ ಹೊಸ ಬಸ್‌ಗಳು ಶೀಘ್ರ ಬರಲಿದ್ದು, ಈಗಾಗಲೇ ಬಸ್ ಖರೀದಿಗೆ ಮುಂದಾಗಲಾಗಿದೆ. ಯಾವ ಯಾವ ಊರುಗಳಿಗೆ ಬಸ್ ಅಗತ್ಯವಿದೆ. ಅಲ್ಲಿಗೆ ಬಸ್ ಸೌಲಭ್ಯ ಕಲ್ಪಿಸಬೇಕು. ಸಾರ್ವಜನಿಕರಿಂದ ದೂರು ಬರದಂತೆ ಗಮನಹರಿಸಬೇಕು ಎಂದರು. ಬಿಪಿಎಲ್ ಪಡಿತರ ಚೀಟಿದಾರರಿಗೆ ಪ್ರತೀ ಯೂನಿಟ್ ಸದಸ್ಯರಿಗೆ 5 ಕೆ.ಜಿ ಅಕ್ಕಿಯಂತೆ ಉಚಿತವಾಗಿ ವಿತರಿಸಲಾಗುತ್ತಿದೆ. ಹಾಗೂ ಆದ್ಯತಾ(ಎಎವೈ) ಪಡಿತರ ಚೀಟಿದಾರರಿಗೆ ಪ್ರತೀ ಪಡಿತರ ಚೀಟಿಗೆ 35 ಕೆ.ಜಿ ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ಆಹಾರ ಇಲಾಖೆಯ ಕಿರಣ್ ಮಾಹಿತಿ ನೀಡಿದರು.ಜಿಲ್ಲೆಯಲ್ಲಿ 1,10,824 ಪಡಿತರ ಚಿಟಿದಾರರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಆದ್ಯತೇತರ ಪಡಿತರ ಚೀಟಿದಾರರಿಗೆ ಸಂಬಂಧಿಸಿದಂತೆ ಪಡಿತರಕ್ಕೆ ನೋಂದಾಯಿಸಿಕೊಂಡ ಪಡಿತರ ಚೀಟಿದಾರರಿಗೆ 1 ಯೂನಿಟ್ ಗೆ 5 ಕೆ.ಜಿ ಅಕ್ಕಿ 1 ಕ್ಕಿಂತ ಮೇಲ್ಪಟ್ಟ ಯೂನಿಟ್ ಗೆ 10 ಕೆ.ಜಿ ಅಕ್ಕಿಯನ್ನು 1 ಕೆ.ಜಿ ಗೆ ರು. 15 ರಂತೆ ಪಡೆದು ವಿತರಿಸಲಾಗುತ್ತಿದೆ. ಜಿಲ್ಲೆಯಲ್ಲಿ 26,172 ಆದ್ಯತೇತರ (ಎಪಿಎಲ್) ಪಡಿತರ ಚೀಟಿದಾರರು ಪಡಿತರ ಪಡೆಯಲು ಹೆಸರು ನೋಂದಾಯಿಸಿಕೊಂಡಿರುತ್ತಾರೆ ಎಂದು ಮಾಹಿತಿ ನಿಡಿದರು.
ಕೊಡಗು ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 1.31 ಲಕ್ಷ ಮಹಿಳೆಯರು ಹೆಸರು ನೋಂದಾಯಿಸುವ ಗುರಿ ಇದ್ದು, ಇವರಲ್ಲಿ ಈಗಾಗಲೇ 1.13 ಲಕ್ಷ ಮಹಿಳೆಯರು ಹೆಸರು ನೋಂದಾಯಿಸಿದ್ದಾರೆ. ಉಳಿದಂತೆ 18 ಸಾವಿರ ಕುಟುಂಬದ ಮಹಿಳೆಯರು ಹೆಸರು ನೋಂದಾಯಿಸಲು ಬಾಕಿ ಇದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಖೆಯ ಉಪ ನಿರ್ದೇಶಕರಾದ ನಟರಾಜು ಮಾಹಿತಿ ನೀಡಿದರು. ಗೃಹಲಕ್ಷ್ಮಿ ಯೋಜನೆಯಡಿ ನವೆಂಬರ್ ವರೆಗೆ ಹಣ ಬ್ಯಾಂಕ್ ಖಾತೆಗೆ ಜಮೆ ಆಗಿದೆ. ತಾಂತ್ರಿಕ ಸಮಸ್ಯೆಯಿಂದ 5 ಸಾವಿರ ಮಂದಿಗೆ ಹಣ ಜಮೆ ಆಗಲು ಬಾಕಿ ಇದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ಮಾಹಿತಿ ನೀಡಿದರು.ಕುಡಿಯುವ ನೀರಿನ ವ್ಯವಸ್ಥೆ ಕುರಿತು ತಹಸೀಲ್ದಾರರಾದ ಪ್ರವೀಣ್ ಕುಮಾರ್, ಪ್ರಶಾಂತ್, ಕಿರಣ್ ಗೌರಯ್ಯ, ರಾಮಚಂದ್ರ, ಎಸ್.ಎನ್.ನರಗುಂದ ಮಾಹಿತಿ ನೀಡಿದರು.
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನಾ ವಿಭಾಗದ ಎಂಜಿನಿಯರ್ ಪ್ರಭು, ಗ್ರಾಮೀಣ ಕುಡಿಯುವ ನೀರು ವಿಭಾಗದ ಎಂಜಿನಿಯರ್ ಸುರೇಶ್‌ಕುಮಾರ್, ಜಿ.ಪಂ. ಉಪ ಕಾರ್ಯದರ್ಶಿ ಧನರಾಜ್, ತಾ.ಪಂ.ಇಒಗಳಾದ ಶೇಖರ್, ಅಪ್ಪಣ್ಣ, ಜಯಣ್ಣ ವಿವಿಧ ಮಾಹಿತಿ ನೀಡಿದರು.ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ಉಪ ವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.